Home ಜನ-ಗಣ-ಮನ ಯುವ ನೋಟ ಮಗು ಸಾಧನೆಗಳತ್ತ ಹೆಜ್ಜೆ ಹಾಕುತ್ತಿದ್ದರೆ ಸಾವು ತಾಯಿಯ ಕಡೆ ಹೆಜ್ಜೆ ಹಾಕುತ್ತಿದೆ…

ಮಗು ಸಾಧನೆಗಳತ್ತ ಹೆಜ್ಜೆ ಹಾಕುತ್ತಿದ್ದರೆ ಸಾವು ತಾಯಿಯ ಕಡೆ ಹೆಜ್ಜೆ ಹಾಕುತ್ತಿದೆ…

0

ಕೇವಲ 9 ವರ್ಷಕ್ಕೆ ತಮಿಳುನಾಡಿನ ಪ್ರಖ್ಯಾತ ವಿಶ್ವ ವಿದ್ಯಾಲಯ ಧವನಿಯ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಗೌರವ ‘ಡಾಕ್ಟರೆಟ್’ ಬಿರುದು ಕೊಟ್ಟು ಸತ್ಕರಿಸಿತು. ಅತ್ಯಂತ ತೀಕ್ಷ್ಣಮತಿಯಾದ ಈಕೆ ತನ್ನ ಸಾಧನೆಯಿಂದ ನೂರಾರು ಪ್ರಶಸ್ತಿಗಳನ್ನು ಇಷ್ಟು ಚಿಕ್ಕ ವಯಸ್ಸಿಗೇ ಪಡೆದಿದ್ದಾಳೆ. ಹೀಗೆ ಸಾಧನೆಗಳ ಶಿಖರವನ್ನೇರುತ್ತಿರುವ ಆ ಪುಟ್ಟ ಬಾಲಕಿಯ ಯಶೋಗಾಥೆಯ ಬೆನ್ನಲ್ಲೇ ಎದೆಬಿರಿಯುವ ದುರಂತ ಕಥನವೂ ಇದೆ- ಆನಂದ್ ಮುಳಬಾಗಿಲು, ಯುವ ಬರಹಗಾ.

ಏಳು ತಿಂಗಳ ಹಿಂದೆ ಚಂದನ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕಿಯೊಬ್ಬಳು 224 ವಿಧಾನಸಭಾ ಕ್ಷೇತ್ರಗಳ ಹೆಸರುಗಳು, ದೇಶದಲ್ಲಿ ಇದುವರೆಗೂ ಆಯ್ಕೆಯಾದ ರಾಷ್ಟ್ರಪತಿಗಳ  ಹಾಗೂ ಪ್ರಧಾನಿ ಮಂತ್ರಿಗಳ ಹೆಸರುಗಳು, ರಾಷ್ಟ್ರಕವಿಗಳ ಹೆಸರು ಮತ್ತು ಕೃತಿಗಳ ಹೆಸರುಗಳು, ಅಂಬೇಡ್ಕರ್ ರವರ 60 ಬಿರುದುಗಳ ಹೆಸರು, ಭಾರತೀಯ ಸೇನಾ ಪ್ರಶಸ್ತಿಗಳ ಹೆಸರುಗಳು, ಬಸವಣ್ಣನವರ ವಚನಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಡಾ. ಪುನೀತ್ ರಾಜಕುಮಾರ್ ರವರು ಇದುವರೆಗೂ ನಟಿಸಿರುವ ಎಲ್ಲಾ ಸಿನಿಮಾಗಳ ಹೆಸರುಗಳು ಹಾಗೂ ಇಸವಿಗಳು. ಪುರಾಣದ ದೃತರಾಷ್ಟ್ರನ 101 ಮಕ್ಕಳ ಹೆಸರುಗಳು.  ಕೆಮಿಕಲ್ ಫಾರ್ಮುಲಾ ಗಳ ಹೆಸರುಗಳು ಹೀಗೆ ಇನ್ನೂ ಹಲವಾರು ರೀತಿಯ ವಿಷಯಗಳ ಬಗ್ಗೆ ಪಟ್ ಪಟ್ ಅಂಥ ಹೇಳ್ತಿದ್ದ ರೀತಿ ನೋಡಿ ಆಹಾ! ಈ ಹುಡುಗಿ ಎಂಥ ಅದ್ಭುತ ನೆನಪಿನ ಶಕ್ತಿಯುಳ್ಳವಳು ಅಂದುಕೊಂಡೆ. ಇಂಥವರು ಕೋಟಿಗಳಲ್ಲಿ ಒಬ್ಬರು ಇರಬಹುದು. ಈ ಪುಟಾಣಿ ಹುಡುಗಿಯನ್ನು ತುಂಬಾ ಜನ ಮಾಧ್ಯಮಗಳಲ್ಲಿ ನೋಡಿರಬಹುದು ಅಥವಾ ಈಕೆಯ ಬಗ್ಗೆ ಕೇಳಿರಬಹುದು.

ಸೂಪರ್ ಕಿಡ್ ಧವನಿ

ಧವನಿ ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದಲ್ಲಿ. ಪ್ರಸ್ತುತ ಬೆಂಗಳೂರಿನ ಹಗ್ಗನಹಳ್ಳಿಯಲ್ಲಿ ವಾಸವಾಗಿದ್ದಾರೆ. ಧವನಿಯ ತಂದೆ ಒಂದು ಫ್ಯಾಕ್ಟರಿಯಲ್ಲಿ ಗೂಡ್ಸ್ ಲೋಡ್ ಹಾಗೂ ಅನ್ಲೋಡ್ ಮಾಡುವ ಕೆಲಸ ಮಾಡ್ತಿದ್ದಾರೆ. ತಾಯಿ ರೇಖಾ. ಧವನಿ ಹಗ್ಗನಹಳ್ಳಿಯಲ್ಲಿಯೇ ಇರುವ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಅತ್ಯಂತ ತೀಕ್ಷ್ಣಮತಿಯಾದ ಈಕೆ ತನ್ನ ಸಾಧನೆಯಿಂದ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-

•ತಮಿಳುನಾಡಿನ ಪ್ರಖ್ಯಾತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪ್ರಶಸ್ತಿ

•ರಾಜ್ಯ ಸರ್ಕಾರದಿಂದ ಕೆಳದಿ ಚನ್ನಮ್ಮ ಪ್ರಶಸ್ತಿ

•ಕರ್ನಾಟಕ ಆಚಿವರ್ಸ್ ಬುಕ್ ಆಫ್‌ ರೆಕಾರ್ಡ್

•ನೇಚುರಲ್ ರೆಕಾರ್ಡ್

•ಮಲ್ಟಿಪಲ್ ರೆಕಾರ್ಡ್

•ಸೂಪರ್ ಆಚೀವರ್ಸ್ ಬುಕ್ ಆಫ್‌ ರೆಕಾರ್ಡ್

• ಸರ್ ಎಂ ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ

• ಕುವೆಂಪು ರಾಷ್ಟ್ರೀಯ ಪ್ರಶಸ್ತಿ

• ಕರುನಾಡ ಕಣ್ಮಣಿ ಪ್ರಶಸ್ತಿ

• ಕಲಾ ಅಪರಂಜಿ ರಾಜ್ಯ ಪ್ರಶಸ್ತಿ

• ಬಸವಕಾಂತಿ ಪ್ರಶಸ್ತಿ

• ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ

• ಕರ್ನಾಟಕ ದರ್ಶನ ‘ಕರ್ನಾಟಕ ಜ್ಞಾನ ಚಕ್ರವರ್ತಿ’ ಪ್ರಶಸ್ತಿ..

ಹೀಗೆ, ಇನ್ನೂ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ ಈ ಪುಟ್ಟ ಬಾಲಕಿ.

ಕೇವಲ ಒಂಭತ್ತು ವರ್ಷಕ್ಕೆ ತಮಿಳುನಾಡಿನ ಪ್ರಖ್ಯಾತ ವಿಶ್ವ ವಿದ್ಯಾಲಯ ಇವಳ ಆಸಾಧಾರಣ ಪ್ರತಿಭೆಯನ್ನು ಗುರ್ತಿಸಿ ಗೌರವ ‘ಡಾಕ್ಟರೆಟ್’ ಬಿರುದು ಕೊಟ್ಟು ಸತ್ಕರಿಸಿತು. ಅವಳೀಗ ಡಾ. ಧವನಿ. ಹೀಗೆ ಸಾಧನೆಗಳ ಶಿಖರವನ್ನೇರುತ್ತಿರುವ ಆ ಪುಟ್ಟ ಬಾಲಕಿಯ ಯಶೋಗಾಥೆಯ ಜತೆಗೆ  ಎದೆಬಿರಿಯುವ ದುರಂತ ಕಥನವೂ ಇದೆ.

ದುರಂತ ಕಥನ

GUINNESS GIRL ಧವನಿ ಮತ್ತು ಅವಳ ತಾಯಿ ರಾಜಾಜಿನಗರದಲ್ಲಿರುವ  ಆಕೃತಿ ಬುಕ್ ಶಾಪ್ ಗೆ ಬಂದಿದ್ರು. ನಾನು ಈ ಹುಡುಗಿಯನ್ನೆಲ್ಲೋ ನೋಡಿದ್ದೀನಿ ಅಂಥ ಅನಿಸ್ತು. ಆದ್ರೆ ಎಲ್ಲಿ ನೋಡಿದ್ದೀನಿ ಅಂಥ ಜ್ಞಾಪಕಕ್ಕೆ ಬಂದಿಲ್ಲ. ಅವಳ ಅಮ್ಮ ʼಧವನಿ ಆ ಬುಕ್ ನೋಡು ಚೆನ್ನಾಗಿದೆʼ ಅಂಥ ಹೇಳಿದ್ಲು. ಆಗ ಈ ಹೆಸರು ನೆನಪಿಗೆ ಬಂತು. ಅವಳು ಇವಳೇನಾ ಅಥವಾ ಬೇರೆಯವಳಾ ಅಂಥ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದೆ. ಇವಳು ಆ ಸೂಪರ್ ಕಿಡ್ ಧವನಿ. ನನಗಾದ ಆಶ್ಚರ್ಯಕ್ಕೆ, ಖುಷಿಗೆ ಪಾರವೇ ಇರ್ಲಿಲ್ಲ. ನಂತರ ಅವಳ ತಾಯಿಯ ಜೊತೆ ಮಾತುಕತೆ ಮುಂದುವರೆಸಿದೆ. ಆ ತಾಯಿಯ ಕಥೆ ಕೇಳಿ ಕೆಲವೇ ಕ್ಷಣಗಳಲ್ಲೇ ನನ್ನ ಮನ ಮೌನವಾಗಿ, ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡ್ತು. 

ಧವನಿಯ ತಾಯಿ ರೇಖಾರವರಿಗೆ ಸುಮಾರು ನಾಲ್ಕು ವರ್ಷಗಳಿಂದ ಬೋನ್ ಕ್ಯಾನ್ಸರ್ ಇದೆ. ಪ್ರತಿದಿನ ರಾಜಾಜಿನಗರದಲ್ಲಿರುವ ಆಸ್ಪತ್ರೆ ಗೆ ಧಾವಿಸಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಧವನಿ ಹಗ್ಗನಹಳ್ಳಿಯಲ್ಲಿಯೇ ಇರುವ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಾಮಾನ್ಯವಾಗಿ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಎದ್ದು ರೆಡಿಯಾಗಿ ಅಮ್ಮ ಮಾಡಿದ ಊಟ ತಿಂದು ಶಾಲೆಗೆ ಹೊರಡುತ್ತಾರೆ. ಆದ್ರೆ  ತನ್ನ ತಾಯಿಯ ಪರಿಸ್ಥಿತಿ ನೋಡಿ ಬೆಳಿಗ್ಗೆ ಐದು ಗಂಟೆಗೆ ಎದ್ದು, ಸ್ವಲ್ಪ ಹೊತ್ತು ಓದಿಕೊಂಡು ತಾನೇ ಅಡುಗೆ ಮಾಡುವುದು ಕಲಿತು ಈಗ ತಂದೆ – ತಾಯಿಗೆ ಅಡುಗೆ ಮಾಡಿ ಹಾಕಿ ಶಾಲೆಗೆ ಹೋಗುತ್ತಿದ್ದಾಳೆ. ಈಗ ತಾಯಿಯ ಅರೋಗ್ಯ ಸಮಸ್ಯೆ ತೀವ್ರವಾಗಿರುವ ಕಾರಣ ಶಾಲೆಯಲ್ಲಿ ಶಿಕ್ಷಕರಿಂದ ಪರ್ಮಿಷನ್ ಪಡೆದು ತಾಯಿಯ ಜೊತೆ ಆಸ್ಪತ್ರೆ ಗೆ ಬರುತ್ತಿದ್ದಾಳೆ.

ಈ ಬಾಲಕಿಯ ಸಾಧನೆಗಳನ್ನು ನೋಡಿ ಖುಷಿ ಪಡಬೇಕೋ ಅಥವಾ ಅವಳನ್ನು ಹೆತ್ತ  ತಾಯಿ ಆ ಮಗುವಿನಿಂದ ಶಾಶ್ವತವಾಗಿ ದೂರ ಆಗ್ತಾಳೆ ಎಂದು ತಿಳಿದು ನೋವು ಪಡಬೇಕೋ ಗೊತ್ತಿಲ್ಲ. ಪ್ರತಿ ಹೆಣ್ಣು ತನ್ನದೇ ಆದ ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದ್ರೆ ಮದುವೆ ಆಗಿ ಮಕ್ಕಳಾದ್ರೆ ತಮ್ಮ ಎಲ್ಲಾ ಕನಸುಗಳನ್ನು  ಮಕ್ಕಳ ಭವಿಷ್ಯದ ಮೇಲೆ ವರ್ಗಾಯಿಸುತ್ತಾರೆ. ಈ ತಾಯಿಯ ಕಣ್ಣಿನಲ್ಲೂ ಅದು ಸ್ಪಷ್ಟವಾಗಿ ಕಾಣಿಸ್ತು. ತಾನು ಈ ಲೋಕದಿಂದ ಮರೆಯಾಗ್ತಿದ್ದೀನಿ ಅನ್ನೋ ನೋವು ಅದಾಗಿರಲಿಲ್ಲ. ಬದಲಿಗೆ ಆ ನೋವು, ಮುಂದೆ ನನ್ನ ಮಗುವಿನ ಆರೈಕೆ ಏನು ಅನ್ನೋದಾಗಿತ್ತು. ನಮಗೆ ಗೊತ್ತು ಆ ಮಗು ಮುಂದೆ ಜಗ ಮೆಚ್ಚುವ ಸಾಧಕಿ ಖಂಡಿತ ಆಗ್ತಾಳೆ ಎಂದು. ಆದ್ರೆ ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಹೆತ್ತ ತಾಯಿಗೆ ತನ್ನ ಮಗುವಿನ ಬಗ್ಗೆ ಚಿಂತೆ ಇಲ್ಲದೆ ಇರಲು ಹೇಗೆ ಸಾಧ್ಯ?.

ಧವನಿಗೂ ಗೊತ್ತು ಅಮ್ಮನಿಗೆ ಬೋನ್ ಕ್ಯಾನ್ಸರ್ ಇದೆ, ಹೆಚ್ಚು ಕಾಲ ನನ್ನೊಂದಿಗೆ ಇರುವುದಿಲ್ಲ ಎಂದು. ನಾನು ಅತ್ತರೆ ಅಮ್ಮನೂ ಅಳ್ತಾರೆ, ಇದರಿಂದ ಅಮ್ಮನ ಅರೋಗ್ಯದ ಮೇಲೆ ಇನ್ನಷ್ಟು ತೀವ್ರ ಪರಿಣಾಮ ಬೀರುತ್ತೆ ಎಂದು ತಿಳಿದ ಧವನಿ ಅಳು ಮರೆತು ಅಮ್ಮನೊಂದಿಗೆ ನಗು ನಗುತ್ತಾ ಇರುತ್ತಾಳೆ. ಈ ಹುಡುಗಿಯ  ವಯಸ್ಸು ಚಿಕ್ಕದಾಗಿರ ಬಹುದು. ಆದ್ರೆ ಆಲೋಚನೆಯಲ್ಲಿ, ಜ್ಞಾನದಲ್ಲಿ, ಆಕೆ ತುಂಬಾ ಹಿರಿಯಳು ಅನ್ನಿಸ್ತದೆ. ತನ್ನೊಳಗೆ  ಹೇಳಿಕೊಳ್ಳಲಾರದ ನೋವಿದೆ. ತಾಯಿಯನ್ನು ಹೇಗಾದ್ರು ಉಳಿಸಿಕೊಳ್ಳುವ ಮನಸ್ಸು ಅವಳಿಗಿದೆ. ಅದಕ್ಕೆ ವೀಕ್ಷಕರಲ್ಲಿ ಕೈ ಮುಗಿದು ತಾಯಿಯ ಉಳಿವಿಗೆ ಸಹಾಯ ಮಾಡಿ ಎಂದು ಅಳುತ್ತಾ ಕೇಳಿ ಕೊಳ್ಳುವ ವಿಡಿಯೋವನ್ನು ನಾವು ನೋಡಿದ್ದೇವೆ.

ಕೈಲಾದಷ್ಟು ಹಣ ಸಹಾಯ ಮಾಡೋಣ

ಆ ಅಸಾಧಾರಣ ಹುಡುಗಿಯ ಭವಿಷ್ಯಕ್ಕೆ ನಾವು ಜೊತೆಯಾಗೋಣ. ಆ ಮಗು ತಾಯಿಯ ಜೊತೆ ಒಂದಷ್ಟು ಸಮಯ ಕಳೆಯಲು ಆರ್ಥಿಕ ಸಹಾಯ ಮಾಡೋಣ. ಆ ಮಗುವಿನ ಬದುಕಿಗೆ ಆಸರೆಯಾಗೋಣ.

ಈ ಕೆಳಗೆ ಕಾಣಿಸಿರುವ ಆಕೆಯ ಅಮ್ಮ ರೇಖಾ ಅವರ  ಅಕೌಂಟ್ ನಂಬರ್ ಗೆ ನಮ್ಮ ಕೈಲಾದಷ್ಟು ಹಣದ ಸಹಾಯ ಮಾಡೋಣ

Phone pay, Google pay – 9113213561

Name – Rekha AB

Karnataka Bank – 5332500101855001

IFSC code – KARB0000533

Branch : Nonavinakere

KARNATAKA BANK

ಆನಂದ್ ಮುಳಬಾಗಿಲು

ಯುವ ಬರಹಗಾರ

Exit mobile version