Home ಅಂಕಣ ಕೋಗಿಲು ಕಾಲನಿಯಲ್ಲಿ ಗೂಡಿಗಾಗಿ ಹೋರಾಡುತ್ತಿವೆ ಶ್ರಮಿಕ ಕೋಗಿಲೆಗಳು

ಕೋಗಿಲು ಕಾಲನಿಯಲ್ಲಿ ಗೂಡಿಗಾಗಿ ಹೋರಾಡುತ್ತಿವೆ ಶ್ರಮಿಕ ಕೋಗಿಲೆಗಳು

0

ಯಲಹಂಕ ಬಳಿ ಇರುವ ಕೋಗಿಲು ಲೇಔಟ್‌ನ ಸ್ಲಂ ನಿವಾಸಿಗಳ ಮನೆಗಳನ್ನು “ಗ್ರೇಟರ್ ಬೆಂಗಳೂರು ಅಥಾರಿಟಿ” ಕೆಡವಿದ ಪ್ರಕರಣ ಮತ್ತು ನೂರಾರು ಕುಟುಂಬಗಳು ಬೀದಿಪಾಲಾಗಿರುವ ಬಗ್ಗೆ ತಮ್ಮ ಅನುಭವಗಳಲ್ಲಿ ವಿಚಾರವಾದಿ ಹೋರಾಟಗಾರ್ತಿ ಜ್ಯೋತಿ ಎ ಅವರ ಬರಹದಲ್ಲಿ

ಬೆಂಗಳೂರಿನ ಯಲಹಂಕ ಬಳಿ ಇರುವ ಕೋಗಿಲು ಲೇಔಟ್‌ನ ಸ್ಲಂ ನಿವಾಸಿಗಳ ಮನೆಗಳನ್ನು “ಗ್ರೇಟರ್ ಬೆಂಗಳೂರು ಅಥಾರಿಟಿ” 2025 ಡಿಸೆಂಬರ್ 20 ರ ಬೆಳ್ಳಂಬೆಳಿಗ್ಗೆ ಕೆಡವಿಹಾಕಿದ್ದು ಈಗ ಕ್ಯಾಲೆಂಡರ್ ಮಟ್ಟಿಗೆ ಕಳೆದ ವರ್ಷದ ವಿಷಯ ಎನಿಸಬಹುದು. ಆದರೆ ಅಲ್ಲಿ ನೆಲೆಸಿದ್ದ ನೂರಾರು ಕುಟುಂಬಗಳ ಪಾಲಿಗೆ ಅದಿನ್ನೂ ಹಸಿ ಗಾಯವಾಗಿಯೇ ಉಳಿದಿದೆ.

ಬಹಳಷ್ಟು ಸಂಸಾರಗಳನ್ನು ಬೀದಿಪಾಲು ಮಾಡಿರುವ ರಾಜ್ಯ ಸರ್ಕಾರದ “ಗ್ರೇಟರ್ ಬೆಂಗಳೂರು” ಯೋಜನೆಯ ವಿಧ್ವಂಸಕ ಮತ್ತು ಅಮಾನವೀಯ ಕೃತ್ಯವನ್ನು ಮಾಧ್ಯಮಗಳಲ್ಲಿ ಕಂಡಿದ್ದ ನಾವು, ಆ ನೊಂದ ಜನರ ಪುನರ್ವಸತಿ ಹೋರಾಟಕ್ಕೆ ನಮ್ಮ ಮಹಿಳಾ ಸಂಘಟನೆ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (NFIW), ರಾಜ್ಯ ಸಮಿತಿಯಿಂದ ಬೆಂಬಲ ವ್ಯಕ್ತಪಡಿಸಿದ್ದರೂ ಸಹ, ಕಾರಣಾಂತರಗಳಿಂದ ಆ ನಿರ್ಗತಿಕ ಜನರ ಬಳಿ ಹೋಗಲು ಸಾಧ್ಯವಾಗಿರಲಿಲ್ಲ ಎಂಬ ಪಾಪಪ್ರಜ್ಞೆ ಕಾಡುತ್ತಲೇ ಇತ್ತು (ಆ ಜನರಿಗೆ ನ್ಯಾಯ ಸಿಗುವವರೆಗೂ ಅದರಿಂದ ಮುಕ್ತವಾಗುವುದು ಕಷ್ಟವೇ, ಅದು ಬೇರೆ ಮಾತು). ನಾವು ಜೀವಿಸುತ್ತಿರುವ ಈ ಕೊಳಕು ವ್ಯವಸ್ಥೆ ಪ್ರತಿದಿನವೂ ನಮ್ಮನ್ನು ಒಂದಿಲ್ಲೊಂದು ಚಳುವಳಿ, ಹೋರಾಟದಲ್ಲಿ ಮುಳುಗಿಸಿಬಿಟ್ಟಿರುವ ಕಾರಣ ಮನೆಗಳನ್ನು ಕಳೆದುಕೊಂಡ ವಸತಿಹೀನರ ಹೋರಾಟದತ್ತ ಹೋಗಲು ಬಿಡುವಾಗಿರಲಿಲ್ಲ.

ಭಾನುವಾರ ನಾವು ಗೆಳತಿಯರು ಅಲ್ಲಿಗೆ ಹೋಗಲೇಬೇಕೆಂದು ಯೋಚಿಸಿದಾಗ, ಕೋಗಿಲು ಕಾಲನಿ ನಿವಾಸಿಗಳ ಹೋರಾಟದ ಮುಂಚೂಣಿಯಲ್ಲಿದ್ದು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿರುವ ಗೆಳೆಯ ಮನೋಹರ್, ಅಂದೇ ಅಲ್ಲಿ ಸಾರ್ವಜನಿಕ ಸಭೆ ನಡೆಸುವುದಾಗಿ ಹೇಳಿದರು. ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವ ಹಾಗಾಯಿತು ನಮಗೆ. ಸಭೆಯಲ್ಲಿ ನಾವು ಪಾಲ್ಗೊಂಡು ಸಂತ್ರಸ್ತರ ಸಂಕಟ, ಸಿಟ್ಟು, ದುಮ್ಮಾನಗಳನ್ನೆಲ್ಲ ಆಲಿಸಿ ಆ ಹೋರಾಟಕ್ಕೆ NFIWನ ಪೂರ್ಣ ಬೆಂಬಲವನ್ನು ಮತ್ತೊಮ್ಮೆ ಘೋಷಿಸಿದೆವು.

ಇದಕ್ಕೂ ಮುನ್ನ ನಾವು ಸಭೆ ನಡೆಯುತ್ತಿದ್ದ ಶಾಲಾ ಆವರಣವನ್ನು ಇನ್ನೂ ಪ್ರವೇಶಿಸಿರಲಿಲ್ಲ, ಆಗಲೇ ಖಾಕಿ ಪಡೆಗಳು ನಮ್ಮನ್ನು ಅಕ್ಷರಶಃ ಅಡ್ಡಗಟ್ಟಿ ಒಂದು ಪುಸ್ತಕದಲ್ಲಿ ನಮ್ಮ ಹೆಸರು, ಸಂಘಟನೆಯ ಹೆಸರು ಮತ್ತು ಫೋನ್ ನಂಬರ್ ಬರೆದುಕೊಂಡರು. ನಾನು ಒಬ್ಬರ ವಿವರ ತೆಗೆದುಕೊಂಡಿದ್ದು ಸಾಕು, ನನ್ನ ಜೊತೆ ಇನ್ನೂ ಮೂವರು ಎಂದು ಸೇರಿಸಿಕೊಳ್ಳಿ ಎಂದರೂ ಕೇಳಲಾರರು! ನಾವು ಭಯೋತ್ಪಾದಕರೋ ಉಗ್ರಗಾಮಿಗಳೋ ಸಮಾಜಘಾತುಕರೋ ಎಂಬಂತೆ ಆತಂಕದಿಂದ ವರ್ತಿಸಿದರು. ಶ್ರಮಿಕರಿಗೆ ಅನ್ಯಾಯ ಎಸಗುವ ಈ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಎಲ್ಲರೂ ಅದನ್ನು ಪೋಷಿಸುವ ಪ್ರಭುತ್ವಕ್ಕೆ ಭಯೋತ್ಪಾದಕರೇ ಅನಿಸಬಹುದು! ಇರಲಿ.

ಸಭೆಯ ನಂತರ ಮನೆಗಳನ್ನು ಧ್ವಂಸ ಮಾಡಿದ್ದ ಜಾಗಕ್ಕೆ ನಡೆದೆವು. ಅಲ್ಲಿನ ಹೆಣ್ಣುಮಕ್ಕಳೇ ನಮ್ಮನ್ನು ಕರೆದೊಯ್ದರು. ಆ ದೃಶ್ಯ ನಿಜಕ್ಕೂ ನನಗೆ ಗಾಝಾ ಪಟ್ಟಿಯ ನೆನಪು ತಂದಿತು. ಚೂರುಚೂರಾದ ಮನೆಗಳು, ಸಿಮೆಂಟ್ ಇಟ್ಟಿಗೆಗಳು, ಗಟ್ಟಿ ಬುನಾದಿಗಳು, ಅರ್ಧಂಬರ್ಧ ಗೋಡೆಗಳು, ಮೆಟ್ಟಿಲುಗಳ ಪಳೆಯುಳಿಕೆಗಳು… ಇವುಗಳ ಮಧ್ಯೆ ಧೂಳು. ಮನೆಗಳನ್ನು ಕಟ್ಟಲಾಗಿತ್ತೆಂಬುದಕ್ಕೆ ಇವು ಪುರಾವೆಯಾದರೆ, ಅಲ್ಲಲ್ಲಿ ಮುರುಕಲು ಕುರ್ಚಿಗಳು ಮತ್ತು ಹಳೆಯ ಮುರಿದ ಸೋಫಾ, ಚೆಲ್ಲಾಡಿದ್ದ ಮನೆಬಳಕೆಯ ವಸ್ತುಗಳು ಜನವಸತಿಯ ಸಂಕೇತವಾಗಿದ್ದವು.

ಇನ್ನು ಎಲ್ಲೆಂದರಲ್ಲಿ ನೀರಿಲ್ಲದೆ ದಿನಗಟ್ಟಲೆ ಸ್ನಾನ ಕಾಣದ, ಶಾಲೆ ಕಳೆದುಕೊಂಡ ಮಕ್ಕಳು ಮರಿ, ಮನೆಗಳಿದ್ದ ಜಾಗಗಳಲ್ಲಿ ದಾನಿಗಳು ಹಾಕಿಕೊಟ್ಟ ಕೆಲವು ಡೇರೆಗಳು ಕಾಣುತ್ತಿದ್ದವು. ಈ ಛಿದ್ರಗೊಳಿಸಿದ್ದ ಮನೆಗಳಲ್ಲಿ ಶ್ರಮಜೀವಿಗಳ ನೂರಾರು ಕನಸುಗಳನ್ನು ಈ “ಉಳ್ಳವರ” ಪರವಾದ ವ್ಯವಸ್ಥೆ ಭಗ್ನವಾಗಿಸಿತ್ತು. ಭವಿಷ್ಯದ ಬಗ್ಗೆ ಆತಂಕ ತುಂಬಿದ ಮನಸ್ಸುಗಳು ಸುಡು ಬಿಸಿಲಲ್ಲಿ ಬರ್ರೋ ಎಂದು ಬೀಸುವ ಗಾಳಿಯಂತೆ ಅತ್ತಿಂದಿತ್ತ ಚಲಿಸುವುದು ಆ ಅಮಾಯಕ ಪ್ರಾಮಾಣಿಕ ಕಂಗಳಲ್ಲೇ ಗೋಚರಿಸುತ್ತಿತ್ತು. ತುಂಬು ಬಸುರಿಯನ್ನು, ಹಸಿ ಬಾಣಂತಿಯನ್ನು, ಆ ಗಾಳಿ ಮಳೆಗಳಲ್ಲೇ ಎಳೆಯ ಹಸುಳೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದ ತಾಯಂದಿರು, ರಾಜ್ಯಕ್ಕೊಬ್ಬರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ ಇದ್ದಾರೆಯೇ ಎಂದು ಪ್ರಶ್ನಿಸುವಂತಿತ್ತು.

ಆ ‘ಬಹುತೇಕ’ ಒಟ್ಟು ಜನಸಮೂಹಕ್ಕೆ ದಾನಿಗಳು ನೀಡಿದ್ದ ಆಹಾರ ಪದಾರ್ಥಗಳಿಂದ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ ಮತ್ತು ಬೇಳೆ ಸಾರು ತಯಾರಿಸಿ, ನಮಗೂ ಸೇರಿದಂತೆ ಎಲ್ಲರಿಗೂ ಪ್ರೀತಿಯಿಂದ ಆಹ್ವಾನವಿತ್ತು ಉಪಚರಿಸಿ ಅನ್ನ ದಾಸೋಹ ನಡೆಸುತ್ತಿದ್ದ ವಿವಿಧ ಮತಗಳಿಗೆ ಸೇರಿದ ಆ ತಾಯಂದಿರು… ನಿಜವಾಗಿಯೂ ಅವರ ಮನೆಗಳನ್ನು ಮುರಿದರೂ ಅವರ ಮನದಂಗಳಗಳು ಮಾತ್ರ ಕಲ್ಪನೆಗೆ ಮೀರಿ ಸುಂದರವಾಗಿವೆ ಎನ್ನುವುದಕ್ಕೆ ಆ ಸಾರ್ವಜನಿಕ ಬಯಲು ಅಡುಗೆಮನೆಯೇ ಸಾಕ್ಷಿ. ಇದು ದುಡಿಯುವ ಜನರ, ಮಹಿಳೆಯರ ಸಂಸ್ಕೃತಿ. ಇದು ನಮ್ಮ ನೆಲದ ಬಹುಜನ ಸಂಸ್ಕೃತಿಯೂ ಹೌದು. ಇದನ್ನು ನಾಶಪಡಿಸಲು ಸನಾತನವಾದಿಗಳು (ಸಂಘ ಪರಿವಾರ) ಹವಣಿಸುತ್ತಲೇ ಇದೆ. ಅದಕ್ಕೆ ನಾವು ಅವಕಾಶ ನೀಡಬಾರದು.

ಕೋಗಿಲು ಕಾಲನಿಯ ಬಿಡಾರದಲ್ಲಿ 6 ತಿಂಗಳ ಕೂಸನ್ನೂ ಕಂಡೆವು. 9 ತಿಂಗಳ ಗರ್ಭಿಣಿಯನ್ನೂ ನೋಡಿದೆವು. ಇನ್ನೂ ಅನೇಕ ಗರ್ಭಿಣಿ, ಬಾಣಂತಿಯರು ಇದ್ದರು. ಅಲ್ಲಿ ಎಲ್ಲರೂ ವಿಧವಿಧವಾದ ಶ್ರಮಜೀವಿಗಳೇ. ಈಗ 15 ದಿನಗಳಿಂದ ಕೆಲಸಗಳಿಗೆ ಹೋಗಲು ಆಗುತ್ತಿಲ್ಲ. ತಾವು ನೆಲೆಸಿದ್ದ ಜಾಗದ ಬಗ್ಗೆ ಇರುವ ಅಭದ್ರತೆ ಸೃಷ್ಟಿಸಿರುವ ಸರ್ಕಾರ ಅವರ ದುಡಿಮೆಯನ್ನೇ ಕಸಿದುಕೊಂಡಿದೆ. ಕಾರ್ಮಿಕರ ಪರವಾದ ಕಾನೂನಿನ ಭದ್ರತೆಯುಳ್ಳ ಉದ್ಯೋಗವನ್ನಂತೂ ಈ ಸರ್ಕಾರಗಳು ಸೃಷ್ಟಿಸುವುದಿಲ್ಲ. ಕನಿಷ್ಠ ಪಕ್ಷ ಅವರೇ ಹೇಗೋ ಜೀವನ ಸೃಜಿಸಿಕೊಂಡರೆ ಅದಕ್ಕೂ ಮಣ್ಣು ಹಾಕುತ್ತವಲ್ಲ, ಇಂತಹ ಸರ್ಕಾರಗಳಿಗೆ ಏನು ಹೇಳಬೇಕು?
ವಾಸಿಸುತ್ತಿದ್ದ ಮನೆಗಳನ್ನು ಧ್ವಂಸ ಮಾಡುವ ಮುನ್ನ ಅವರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬಾರದೇ? ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕಿತ್ತು ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ಕೊಡುವ ಸರ್ಕಾರಗಳು ನೂರಿನ್ನೂರು ಕುಟುಂಬಗಳಿಗೆ ಮನೆಗಳನ್ನು ಕೊಡುವ ಸಾಂವಿಧಾನಿಕ ಬಾಧ್ಯತೆ ಹೊಂದಿಲ್ಲವೇ?

ಸಾಮಾಜಿಕ ನ್ಯಾಯ, ಸಂವಿಧಾನ, ಗ್ಯಾರಂಟಿ ಎಂದೆಲ್ಲಾ ಮಾತನಾಡುವ ಕಾಂಗ್ರೆಸ್ ಸರ್ಕಾರ ಬಡಜನರ ಬದುಕಿನ ಮೇಲೆ ಬುಲ್‌ಡೋಜ಼ರ್ ರಾಜಕಾರಣ ಮಾಡುವುದನ್ನು ಒಪ್ಪಲಾಗದು. ಜನರಿಗೆ ಮೊದಲು ಸಾಂವಿಧಾನಿಕ ಹಕ್ಕುಗಳ ಗ್ಯಾರಂಟಿ ನೀಡಬೇಕಿದೆ ಸರ್ಕಾರ. ಅವುಗಳಲ್ಲಿ ನ್ಯಾಯ ಮತ್ತು ಘನತೆಯಿಂದ ಬದುಕುವ ಹಕ್ಕು ಕೂಡ ಸೇರಿವೆ. ದುಡಿಯುವ ಜನರನ್ನು ಬೀದಿಗೆ ತಳ್ಳಿ ಯಾವ ಸಮಾನತೆಯನ್ನೂ ಸಾಧಿಸಲು ಸಾಧ್ಯವಿಲ್ಲ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ.

ದುಡಿಯುವ ಜನರ ವೇದನೆಯನ್ನಾಗಲೀ ಅರ್ಥಮಾಡಿಕೊಳ್ಳಲು ಯಾರೇ ಆಗಲೀ ಮನುಷ್ಯರಾಗಿರಬೇಕು, ಶ್ರಮದ ಬೆಲೆ ಅರಿತಿರಬೇಕು… ಕೇವಲ ಮನುಷ್ಯ ರೂಪವಿದ್ದರಷ್ಟೇ ಸಾಲದು. ಬೀದಿಗೆ ದೂಡಲ್ಪಟ್ಟ ಆ ಶ್ರಮಿಕ ಜನರು ಬಾಂಗ್ಲಾದೇಶಿಗಳು, ಪಾಕಿಸ್ತಾನಿಗಳು, ಅಂತೆಲ್ಲ ಮಾತುಗಳು ಬರುವುದು ಕ್ರೂರಿಗಳ ಬಾಯಿಗಳಿಂದ, ನಮ್ಮ ಭೂಮಿಯನ್ನು ಲಪಟಾಯಿಸುವ ಭೂಕಬಳಿಕೆದಾರರಿಂದ ಮಾತ್ರವೇ ಹೊರತು ಮನುಷ್ಯತ್ವ ಹೊಂದಿರುವವರಿಂದಲ್ಲ. 2022ರ ಹೊತ್ತಿಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಮನೆ ಕೊಡುತ್ತೇವೆ ಎಂದು ಘೋಷಿಸಿದ್ದ ಮೋದಿಯವರ ಭರವಸೆಯನ್ನು ಮರೆಸಲು ಈಗ ಬಿಜೆಪಿ ಬಾಂಗ್ಲಾದೇಶದ ವರಸೆ ಹರಿಯಬಿಟ್ಟಿರುವುದು ಜನರಿಗೆ ಅರ್ಥವಾಗದೇ? ಇಪ್ಪತ್ತು ವರ್ಷಗಳಿಂದ ಅದೇ ಜಾಗದಲ್ಲಿ ವಾಸವಿರುವವರು, ಸರಾಗವಾಗಿ ಮತ್ತು ಸುಲಲಿತವಾಗಿ ಕನ್ನಡ ಮಾತನಾಡುವವರು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದಿರಲು ಸಾಧ್ಯವೇ? ಹಾಗಾದರೆ ಆ ದೇಶಗಳ ಸರ್ಕಾರಗಳು ಕನ್ನಡ ಕಲಿಸುತ್ತವೆಯೇನು? ವಿರೋಧ ಪಕ್ಷದ ನಾಯಕರು ಮಾತನಾಡಿದರೆ ಅದಕ್ಕೊಂದು ತೂಕವಿರಬೇಕು. ಅದು ಜನರ ಬಾಯಿಯಲ್ಲಿ ಗೇಲಿಯ ವಸ್ತುವಾಗಬಾರದು.

ಬಾನೇ ಸೂರಾಗಿ ಭೂಮಿತಾಯೇ ಹಾಸಿಗೆಯಾಗಿ 15 ದಿನಗಳಿಂದ ಪ್ರಕೃತಿಯ ಎಲ್ಲಾ ವಿಕೋಪಗಳ ಜೊತೆಗೂ ಅವಳ ಮಡಿಲಲ್ಲೇ, ಮುಂದಿನ‌ ಕ್ಷಣವೇನಾಗುತ್ತದೋ ಎಂಬ ಆತಂಕದಲ್ಲಿ ಬದುಕು ಸವೆಸಬೇಕಾದ ದುಃಸ್ಥಿತಿಗೆ ತಳ್ಳಲ್ಪಟ್ಟಿರುವ ಆ ಅಮಾಯಕ ಜನರ ಸ್ಥಾನದಲ್ಲಿ ಅಧಿಕಾರ ದರ್ಪದಿಂದ, ಜಾತಿಮತ, ಇತ್ಯಾದಿಗಳ ಅಹಂನಿಂದ ಬಳಲುತ್ತಿರುವವರು ಒಂದೇ ಒಂದು ಸಲ ತಮ್ಮನ್ನು ತಾವು ಕಲ್ಪಿಸಿಕೊಂಡರೆ ವಸತಿಹೀನರಾಗಿ ಬೀದಿಗೆ ಬಿದ್ದವರ ಸಂಕಟವನ್ನು ಗ್ರಹಿಸಬಹುದು. ಅವರು ಅಥವಾ ಅವರ ಕುಟುಂಬ ಆ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು?? ಅದೇ ವಿಳಾಸದ ಗುರುತಿನ ಚೀಟಿಯಿಂದಲೇ ವೋಟ್ ಪಡೆದಿರುವ ಶಾಸಕರು, ಸಚಿವರು, ಸಂಸದರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈಗ ಅದೇ ಜನರನ್ನೇ ಟಿಷ್ಯೂ ಪೇಪರ್ ತರಹ ಬಳಸಿಕೊಂಡು ಬೀದಿಗೆ ಎಸೆದಿದ್ದಾರಲ್ಲ, ಅವರಿಗೇನಾದರೂ ಸಂವೇದನೆ ಇದೆಯೇ??

You cannot copy content of this page

Exit mobile version