Home ಜನ-ಗಣ-ಮನ ಕಲೆ – ಸಾಹಿತ್ಯ ಜು.28ರಿಂದ ಎರಡು ದಿನ ತೇಜಸ್ವಿ ಸಾಹಿತ್ಯದ ಕುರಿತು “ಸಾಂಸ್ಕೃತಿಕ ಹಬ್ಬ”

ಜು.28ರಿಂದ ಎರಡು ದಿನ ತೇಜಸ್ವಿ ಸಾಹಿತ್ಯದ ಕುರಿತು “ಸಾಂಸ್ಕೃತಿಕ ಹಬ್ಬ”

0

ಬೆಂಗಳೂರು: ಪ್ರಸಿದ್ಧ ಸಾಹಿತಿ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಛಾಯಾಗ್ರಹಣ, ವರ್ಣಚಿತ್ರಗಳು ಮತ್ತು ಅವರ ವಿಚಾರಧಾರೆಯನ್ನು ಒಳಗೊಂಡಿರುವ ಕೃತಿಗಳನ್ನು ಸೆಲೆಬ್ರೇಟ್‌ ಮಾಡುವ ಉದ್ದೇಶದಿಂದ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಜುಲೈ 28 & 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂ.ಎಂ. ಪ್ರಕಾಶನದ ಎಂ.ಸಿ.ನರೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಜೀವನ ಮತ್ತು ಕೃತಿಗಳ ಕುರಿತು ಬೃಹತ್ ಸಾಕ್ಷ್ಯಚಿತ್ರ ಸರಣಿ “ತೇಜಸ್ವಿ ಎಂಬ ವಿಸ್ಮಯ” ಲೋಕಾರ್ಪಣೆಯಾಗಲಿದೆ. ಈ ಆಚರಣೆಯ ಭಾಗವಾಗಿ ಅನೇಕ ಚರ್ಚೆ, ಸಂವಾದ, ಘೋಷ್ಠಿಗಳು ನಡೆಯಲಿವೆ. ಉನ್ನತ ಸಂಶೋಧನಾ ವಿದ್ವಾಂಸರು, ಪ್ರತಿಷ್ಠಿತ ಶಿಕ್ಷಣ ತಜ್ಞರು, ತೇಜಸ್ವಿ ಅವರ ಕುಟುಂಬ ಸದಸ್ಯರು ಮತ್ತು ಅವರ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹದಿನಾಲ್ಕು ಸಂಪುಟಗಳ ‘ಕೆ ಪಿ ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’ ಲೋಕಾರ್ಪಣೆಯಾಗಲಿದೆ. ಸಾಹಿತಿ ತೇಜಸ್ವಿ ಅವರಿಗೆ ಅತ್ಯಾಪ್ತರಾಗಿದ್ದ ಪ್ರೊ ಕೆ ಸಿ ಶಿವಾರೆಡ್ಡಿ ಅವರು ಸಂಪಾದಿಸಿರುವ ಕೃತಿಯಿದು. ಜುಲೈ 29, ಸೋಮವಾರ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಸಮಗ್ರ ಕೃತಿ ಜಗತ್ತನ್ನು ಲೋಕಾರ್ಪಣೆ ಮಾಡಲಿದ್ದಾರೆ.

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿಯನ್ನು 28ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ-ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂನ ಹಾಲಿ ಶಾಸಕರಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಅವರು ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ ಮಾಡಲಿದ್ದಾರೆ. 29ರಂದು ಸೋಮವಾರ ಮಧ್ಯಾಹ್ನ 12ಕ್ಕೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.

ಎರಡು ದಿನಗಳ ಹಬ್ಬದಲ್ಲಿ ‘ಪೂರ್ಣಚಂದ್ರ’ ಚಿತ್ರ ಸಂಪುಟ ಬಿಡುಗಡೆ, ಅಣ್ಣನ ನೆನಪು ಸಾಕ್ಷ್ಯ ನಾಟಕ ಸೇರಿದಂತೆ ತೇಜಸ್ವಿ ಸಾಹಿತ್ಯ, ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ, ತೇಜಸ್ವಿ ಪುಸ್ತಕಗಳ ಪ್ರದರ್ಶನ, ತೇಜಸ್ವಿ ಅವರು ಸೆರೆಹಿಡಿದ ಫೋಟೋಗಳ ಪ್ರದರ್ಶನ ಏರ್ಪಾಟಾಗಿದೆ ಎಂದು ನರೇಂದ್ರ ಮಾಹಿತಿ ನೀಡಿದ್ದಾರೆ.

You cannot copy content of this page

Exit mobile version