Home ವಿಶೇಷ ವಿಶ್ವ ಆದಿವಾಸಿ ದಿನಾಚರಣೆ ವಿಶೇಷ | ಆದಿವಾಸಿ ಸಮಾಜದ ಸಾಂಸ್ಕೃತಿಕ ಅನನ್ಯತೆಗಳು

ವಿಶ್ವ ಆದಿವಾಸಿ ದಿನಾಚರಣೆ ವಿಶೇಷ | ಆದಿವಾಸಿ ಸಮಾಜದ ಸಾಂಸ್ಕೃತಿಕ ಅನನ್ಯತೆಗಳು

0

ಬುಡಕಟ್ಟು ಸಮುದಾಯಗಳ ಹಲವು ಆಚರಣೆಗಳಲ್ಲಿ ಅವುಗಳ ಸಂಭ್ರಮಗಳು, ನೋವಿನ ಸೆಲೆಗಳು ಸದ್ದಿಲ್ಲದೆ ಹರಿಯುತ್ತಿರುತ್ತವೆ. ಅವರ ಕಲೆ, ಆಚರಣೆ, ನುಡಿ, ರೂಪಗಳ ನಡುವೆ ಸಾಂಸ್ಕೃತಿಕ ಚಹರೆಗಳು ಅವರ ಮನಸ್ಸಿನಲ್ಲಿ ಹುದುಗಿರುವ ನೂರಾರು ಹತಾಶೆ, ತುಳಿತದ ಜೊತೆ ಮಾಯದ ಗಾಯಗಳಾಗಿವೆ ಡಾ. ಅನುಷಾ ದರ್ಶನ್‌, ತುಮಕೂರು

ಬುಡಕಟ್ಟು, ಆದಿವಾಸಿ, ಅರಣ್ಯವಾಸಿ, ಗಿರಿಜನ, ವನವಾಸಿ, ಪರಿಶಿಷ್ಟ ಪಂಗಡ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಬುಡಕಟ್ಟು ಸಮಾಜ ಎಂದರೆ, ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿದ್ದು, ನಿರ್ದಿಷ್ಟ ಭಾಷೆ ಮಾತನಾಡುವ ಹಾಗೂ ಮೂಲಪುರುಷ ಒಂದೇ ದೈವ ಹಾಗೂ ಸಂಸ್ಕೃತಿ ಸುಸಂಘಟಿತ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿರುವ ಸಾಮಾಜಿಕ ಗುಂಪು ಆಗಿದೆ.

ಮಜುಂದಾರ್ ಅವರು, ಒಂದೇ ಹೆಸರು, ಒಂದೇ ಭಾಷೆ, ಒಂದೇ ಪ್ರದೇಶದಲ್ಲಿ ವಾಸಿಸುವವರ ಸಂಬಂಧದ ಜನರ ಗುಂಪು ಬುಡಕಟ್ಟು  ಎಂದು  ಅವರು ಹೇಳಿದ್ದಾರೆ. ಬುಡಕಟ್ಟು, ಆರ್ಥಿಕ, ರಾಜಕೀಯ ಹಾಗೂ ಇತರ ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ಸಂಸ್ಕೃತಿಗಳಿಂದ ಬೇರೆಯಾಗಿ ನಿಲ್ಲುತ್ತದೆ.  ಅದು ಗುಂಪಿನಿಂದ ಪ್ರತ್ಯೇಕತಾ ಭಾವನೆಯನ್ನು ಬಲವಾಗಿ ಪ್ರೋತ್ಸಾಹಿಸುತ್ತದೆ.

ವಿವಿಧತೆಯಲ್ಲಿ ಏಕತೆಯ ಭಾರತೀಯ ಸಂಸ್ಕೃತಿ  ಬಹು ವಿಶಿಷ್ಟ. ಇಲ್ಲಿಯ  ಬುಡಕಟ್ಟುಗಳು, ಭಾರತದ ವಿವಿಧ ಭಾಗಗಳಲ್ಲಿ ಚದುರಿದಂತೆ ನೆಲೆಸಿದ್ದರೂ, ಇವುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಗುರುತಿಸಬಹುದಾದ ಸಾಮ್ಯಗಳಿವೆ. ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಬೇರೆ ದೈವಗಳ ಆಚರಣೆಗಳು ನಡೆದುಕೊಳ್ಳುತ್ತವೆ. ಇವುಗಳಲ್ಲಿ ಆದಿವಾಸಿ ಸಾಂಸ್ಕೃತಿಕ ಅನನ್ಯತೆಯನ್ನು ಕಂಡುಕೊಳ್ಳಬಹುದು.

ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ

ಆದಿವಾಸಿ ಸಮುದಾಯಗಳ ಬದುಕನ್ನು ಕುರಿತ ಅಧ್ಯಯನ ಮತ್ತು ಬರಹಗಳಲ್ಲಿ ಸಂಭ್ರಮಗಳು ಹೆಚ್ಚು. ಅವರ ಜೀವನ ವಿಧಾನ, ಸರಳತೆ, ಉಡುಗೆ, ಧರಿಸುವ ಆಭರಣಗಳು, ಜೀವಿಸುವ ಪರಿಸರ ಹೊರಗಿನ ಜನರನ್ನು ಮತ್ತು ಆಸಕ್ತರನ್ನು ಮೈದುಂಬಿಸುತ್ತವೆ. ಜಾನಪದವನ್ನು ಅಧ್ಯಯನ ಮಾಡಿದ ಬಹುತೇಕ ವಿದ್ವಾಂಸರು ಬುಡಕಟ್ಟುಗಳನ್ನು ನೋಡಿ ರೋಮಾಂಚನ ಗೊಂಡಿರುವುದೇ ಹೆಚ್ಚು. ನೆಹರೂ ಹಾಗೂ ಎಲ್ವಿನ್ ರ ಶೈಕ್ಷಣಿಕ ವಿಧಾನಗಳಿಂದ ಪ್ರಭಾವಿತರಾದ ಅನೇಕ ಅಧ್ಯಯನಕಾರರಲ್ಲಿ ಆದಿವಾಸಿಗಳ ಜೀವನ ವಿಧಾನವನ್ನು ವೈಭವೀಕರಿಸುವ ಕಾತರ ಹೆಚ್ಚಾಗಿ ಕಾಣುತ್ತದೆ. ಬುಡಕಟ್ಟುಗಳು ಸಹ ತಮ್ಮ ಸುತ್ತಲ ಬದುಕನ್ನು ನಿಸರ್ಗದಂತೆ ಹಸನಾಗಿ ಇಟ್ಟುಕೊಂಡಿರುವುದು ನೋಡುಗರನ್ನು ಮೈ ಮರೆಯುವಂತೆ ಮಾಡುತ್ತದೆ. ಈ ಕಾರಣಕ್ಕಾಗಿ ಎಲ್ವಿನ್, ಬುಡಕಟ್ಟುಗಳು ಕಾಡಲ್ಲಿ ಇದ್ದರೇ ಚೆಂದ ಎಂದು ಭಾವಿಸಿದ್ದಾರೆ. ಅವರ ಈ ಅಭಿಪ್ರಾಯವನ್ನು ಸದಾ ಅನುಮೋದಿಸಿದ್ದ ನೆಹರೂ ಬುಡಕಟ್ಟುಗಳು ಪ್ರತ್ಯೇಕವಾಗಿ ವಾಸಿಸುವ ವಾದವನ್ನು ಉಗ್ರವಾಗಿ ಟೀಕಿಸಿದ್ದರು. ಆದರೆ ಬುಡಕಟ್ಟುಗಳನ್ನು ಅಧ್ಯಯನ ಮಾಡಿರುವುದರಲ್ಲಿ ಎಲ್ವಿನ್ ಮತ್ತು ನೆಹರೂ ಪಂಥೀಯರೇ ಹೆಚ್ಚು. ಈ ಕಾರಣಕ್ಕಾಗಿ ಆದಿವಾಸಿಗಳ ಬಾಹ್ಯ ಚೆಲುವನ್ನು ನೋಡಿ ಸಂಭ್ರಮಿಸುವ ಪ್ರವೃತ್ತಿ ಇನ್ನೂ ನಮ್ಮ ವಿದ್ವಾಂಸರಲ್ಲಿ ಕಾಣುತ್ತಲೇ ಇದೆ. ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ ಎಂದು ಭಾವಿಸುವ ಸಂಗತಿಗಳು, ಸಮುದಾಯಗಳ ಮೌಖಿಕ ಸಾಹಿತ್ಯ, ಆಡು ಭಾಷೆ, ಉಡುಗೆ ತೊಡುಗೆ, ಆಚರಣೆ, ದೈವಾರಾಧನೆ, ಕಲೆ, ಹಾಡು, ಕುಣಿತಗಳು, ಆಚರಣಾ ಪದ್ಧತಿ, ದೈಹಿಕ ರಚನೆಗಳನ್ನು ಪರಿಗಣಿಸಿ ಇವು ಒಂದು ಸಮುದಾಯದ ಅನನ್ಯತೆಯನ್ನು ನಿರ್ಧರಿಸುವ ಅಂಶ ಎಂದು ನಿರ್ದಿಷ್ಟ ಪಡಿಸಲಾಗಿದೆ. ಬುಡಕಟ್ಟು ಸಮುದಾಯಗಳ ಹಲವು ಆಚರಣೆಗಳಲ್ಲಿ ಅವುಗಳ ಸಂಭ್ರಮಗಳ, ನೋವಿನ ಸೆಲೆಗಳು ಸದ್ದಿಲ್ಲದೆ ಹರಿಯುತ್ತಿರುತ್ತವೆ.

ಬಲೀಂದ್ರನ ಮಕ್ಕಳು ಎಂದು ಹೇಳಿಕೊಳ್ಳುವ ಹಾಲಕ್ಕಿಗಳು ಕೃಷಿಯನ್ನು ಆರಾಧನೆಯ ರೀತಿಯಲ್ಲಿ ಆಚರಿಸುತ್ತಾರೆ. ಸುಗ್ಗಿ ಹಬ್ಬವನ್ನು ಸುಗ್ಗಿ ಬೆಳೆ ಅಥವಾ ಕಾರು ಬೆಳೆ ಬರುವ ಸಂದರ್ಭದಲ್ಲಿ ಆಚರಿಸುವರು. ಇಡೀ ವರ್ಷ ದುಡಿದು ದಣಿವಾರಿಸಿಕೊಳ್ಳಲು, ಮನರಂಜನೆಗೋಸ್ಕರ ನಿಯಮಬದ್ಧವಾಗಿ ಹಬ್ಬವನ್ನು ಆಚರಿಸುತ್ತಾರೆ. ಸುಗ್ಗಿಕುಣಿತ ಬೆಳೆಯ ಸಂಕೇತವಾಗಿದ್ದು, ನಿಸರ್ಗದ ಏರಿಳಿತಗಳು ಈ ಕುಣಿತದಲ್ಲಿ ಅಡಕವಾಗಿರುತ್ತವೆ. ಹಾಲಕ್ಕಿಗಳು ಕೃಷಿಯನ್ನು ಕೇವಲ ವೃತ್ತಿಯನ್ನಾಗಿ ನೋಡಿದವರಲ್ಲ. ಅವರಿಗೆ ಇಡೀ ಕೃಷಿ ಒಂದು ಆರಾಧನೆಯೇ ಆಗಿದೆ. ಹಾಲಕ್ಕಿ ಒಕ್ಕಲಿಗರು ಹೊಂದಿರುವ ಅತ್ಯಮೂಲ್ಯವಾದ ಪ್ರಾಚೀನ ಕಲೆ ‘ಹಗರಣ’ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಹಗರಣ ಎನ್ನುವ ಪದವನ್ನು ಸೋಗು, ನಟನೆ, ಗೊಂದಲ, ಹಾಸ್ಯಾಸ್ಪದ ಮುಂತಾದ ಅರ್ಥದಲ್ಲಿ ಬಳಸಲಾಗುತ್ತದೆ. ಹಗರಣದ ವಿವಿಧ ವೇಷದಾರಿಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ. ಸುಗ್ಗಿ ಹಬ್ಬದ ಉನ್ಮಾದದ ಮೆರವಣಿಗೆ ಭಕ್ತಿಯ ಆವೇಶದಲ್ಲಿ ತಲ್ಲೀನರಾದ ಆದಿವಾಸಿ ಹಾಲಕ್ಕಿಗಳು ನಮ್ಮಲ್ಲಿ ಬೆರಗು ಹುಟ್ಟುಹಾಕುತ್ತಾರೆ.

ಹಾಗೆಯೇ, ಕೊಡಗಿನವರಲ್ಲಿ ನಡೆಯುವ ಕುಂಡೆ ಹಬ್ಬ. ಈ ಸಂದರ್ಭದಲ್ಲಿ ಜೇನುಕುರುಬ, ಯರವ ಬುಡಕಟ್ಟುಗಳು ಮತ್ತು ಸ್ಥಳೀಯ ದುಡಿಯುವ ಸಮುದಾಯದವರು ವಿಚಿತ್ರ ವೇಷ ಹಾಕಿಕೊಂಡು ಬೀದಿಗಳಲ್ಲಿ ನರ್ತನ ಮಾಡುತ್ತಾ ತಿರುಗುತ್ತಾರೆ. ತಮ್ಮ ದೈವವಾದ ಭದ್ರಕಾಳಿ ಹೊರಗಿನವನಾದ ಅಯ್ಯಪ್ಪನಿಗೆ ಮನಸೋತು ಅವನ ಹಿಂದೆ ಓಡಿಹೋದನೆಂದು ಇವರಿಗೆ ಕೋಪ. ತಮ್ಮನ್ನು ಬಿಟ್ಟು ಹೋದ ಭದ್ರಕಾಳಿಯ ಮೇಲೆ ಈ ಸಮುದಾಯಗಳು ಅಂದು ಮಾತ್ರ ಸಾಂಕೇತಿಕವಾಗಿ ತಮ್ಮ ಸಿಟ್ಟನ್ನು ಪ್ರದರ್ಶಿಸುತ್ತಾರೆ. ಕುಂಡೆ ಹಬ್ಬದ ದಿನ ಈ ಸಮುದಾಯಗಳು ತಮ್ಮ ದೈವವನ್ನು ಒಳಗೊಂಡಂತೆ, ಸ್ಥಳೀಯರು ಮಾಲೀಕರನ್ನು ಬಾಯಿಗೆ ಬಂದಂತೆ ಬೈಯುತ್ತಾರೆ. ಕುಂಡೆ ಹಬ್ಬ ನಡೆಯುವ ಪ್ರದೇಶದ ಉಸಿರುಕಟ್ಟಿಸುವ ಸಾಮಾಜಿಕ ಸನ್ನಿವೇಶದ ದುಡಿಯುವ ನಿರ್ಗತಿಕ ಸಮುದಾಯಗಳಿಗೆ ಅಂದು ಮಾತ್ರ ಗಟ್ಟಿ ಧ್ವನಿ ಪ್ರಾಪ್ತವಾಗುತ್ತದೆ. ತಮ್ಮಲ್ಲಿ ಹುದುಗಿ ಕೊಂಡಿರುವ ಸಿಟ್ಟು ಆಚರಣೆಯ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಆದಿವಾಸಿಗಳ ಸಾಂಸ್ಕೃತಿಕ ಅನನ್ಯತೆಯ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

ಕರ್ನಾಟಕದ ಮತ್ತೊಂದು ಆದಿವಾಸಿ ಸಮುದಾಯವಾದ ಕೊರಗ ಸಮುದಾಯದ ಅಧ್ಯಯನ ಕೈಗೊಂಡ ಸಂದರ್ಭದಲ್ಲಿ ‘ಕೊರಗ ನೃತ್ಯ’ ಎಂದು ಕರೆಯಲ್ಪಡುವ ಪಾರಂಪರಿಕ ಕುಣಿತವನ್ನು ಯಾವ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ, ಸಮುದಾಯದ ಹಿರಿಯ ಕಲಾವಿದರು ನೀಡಿದ ಮಾಹಿತಿ ನಮ್ಮಲ್ಲಿ ಆಶ್ಚರ್ಯ ಮತ್ತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಕುಣಿತದ ಕುರಿತು ವಿವರಣೆ ನೀಡುತ್ತಾ ಅವರು ಹಲವು ಅಂಶಗಳನ್ನು ತಿಳಿಸಿದರು. ಕೊರಗರ ಕುಣಿತವೆಂದರೆ ಒಂದೇ ಎಂದು ಭಾವಿಸಿದ ನಮಗೆ ಆಶ್ಚರ್ಯವಾಯಿತು. ಕೊರಗರು ಅವರು ಖುಷಿಯಾದಾಗ ಮಾಡುವ ಕುಣಿತ ಬೇರೆ, ಮೇಲ್ವರ್ಗದ ಯಜಮಾನರ ಮುಂದೆ ಮೇಳದೊಂದಿಗೆ ಮಾಡುವ ಕುಣಿತವೇ ಬೇರೆ.

ಹೀಗೆ, ಕೊರಗ ಕಲಾವಿದರು ತಮ್ಮ ಕುಣಿತವನ್ನು ಅನೇಕ ಪ್ರಕಾರಗಳಾಗಿ ವಿಂಗಡಿಸಿದ್ದಾರೆ. ಕುಣಿತಗಾರರು ಹಿಮ್ಮೇಳದವರು ಅವರೇ ಆಗಿದ್ದರೂ, ಬದಲಾದ ಸನ್ನಿವೇಶದಲ್ಲಿ ಕುಣಿತ ಮತ್ತು ಹಿಮ್ಮೇಳದಲ್ಲಿ ಗಣನೀಯ ಬದಲಾವಣೆ ಆಗಿರುತ್ತದೆ. ಇವರು ತಮ್ಮ ಇಚ್ಛೆಗೆ ಕುಣಿಯುವುದು ಬಿಟ್ಟರೆ ಮತ್ತೆ ಎಲ್ಲಾ ಕುಣಿತಗಳು ಯಜಮಾನರ ಮುಂದೆ ಕುಣಿಯುವುದೇ ಆಗಿದೆ. ಅವರ ಭಾಷೆಯಲ್ಲಿಯೂ ಬದಲಾವಣೆ ಕಾಣಬಹುದು. ಕೆಲವು ಅಂಶಗಳು ಅವರ ಅಭಿನಯದಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ನಾವು ಈ ಸಾಂಸ್ಕೃತಿಕ ಅನನ್ಯತೆಯನ್ನು ಗಮನಿಸಿದಾಗ ಆದಿವಾಸಿ ವರ್ಗಗಳ ಕಲೆ, ಆಚರಣೆ, ನುಡಿ ರೂಪಗಳ ನಡುವೆ  ಸಾಂಸ್ಕೃತಿಕ ಚಹರೆಗಳು ಆದಿವಾಸಿ ಸಮುದಾಯಗಳ ಈ ಮುಂತಾದ ಕಲೆಗಳ ಚೆಲುವಿನ ಜೊತೆ ಅವರ ಮನಸ್ಸಿನಲ್ಲಿ ಹುದುಗಿರುವ ನೂರಾರು ಹತಾಶೆ, ತುಳಿತದ ಜೊತೆ ಮಾಯದ ಗಾಯಗಳಾಗಿವೆ.

ಡಾ. ಅನುಷಾ ದರ್ಶನ್‌

ತುಮಕೂರು

ಇದನ್ನೂ ಓದಿ-ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿ: ನೆಹರು ಚಿಂತನೆಗಳು

You cannot copy content of this page

Exit mobile version