ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ ‘ಅವಳ ಹೆಜ್ಜೆ ಕಿರುಚಿತ್ರೋತ್ಸವ – 2025’ ಮಹಿಳಾ ನಿರ್ದೇಶಕಿಯರ ಕಿರುಚಿತ್ರ ಪ್ರದರ್ಶನ ಬೆಂಗಳೂರಿನಲ್ಲಿ ಶನಿವಾರ ಪ್ರದರ್ಶನಗೊಳ್ಳಲಿದೆ. ಸಮಾರಂಭವು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC) ನಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯ ವರೆಗೆ ನಡೆಯಲಿದೆ.
ವಿಶೇಷವಾಗಿ ಇದು ಮಹಿಳಾ ನಿರ್ದೇಶಕಿಯರೇ ಈ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದ್ದು, ಸುಮಾರು 60 ಕಿರುಚಿತ್ರಗಳು ಸ್ಪರ್ಧೆಯಲ್ಲಿ ಪಾಲ್ಗೊಂಡ ಬಗ್ಗೆ ಟ್ರಸ್ಟ್ ನ ಮುಖ್ಯಸ್ಥರು ಮಾಹಿತಿ ತಿಳಿಸಿದ್ದಾರೆ. 14 ವರ್ಷದ ಕಿರಿಯ ನಿರ್ದೇಶಕಿ, ವಿದೇಶಿ ಕನ್ನಡತಿ ಸೇರಿದಂತೆ ವಿವಿಧ ಹಿನ್ನೆಲೆಯ ಮಹಿಳೆಯರು ನಿರ್ದೇಶಿಸಿದ ಚಿತ್ರಗಳು ಸ್ಪರ್ಧೆಗೆ ಭಾಗವಹಿಸಿದ್ದು ವಿಶೇಷವಾಗಿತ್ತು.
ಇನ್ನೊಂದು ವಿಶೇಷವೆಂದರೆ ಆಯ್ಕೆ ಸಮಿತಿಯಲ್ಲಿಯೂ ಸಹ ಸಂಪೂರ್ಣವಾಗಿ ಮಹಿಳೆಯರೇ ಪ್ರಮುಖವಾಗಿದ್ದು, 60 ಕಿರುಚಿತ್ರಗಳಲ್ಲಿ 9 ಕಿರುಚಿತ್ರಗಳನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲಾಗಿದೆ ಎಂಬ ಬಗ್ಗೆ ಆಯೋಜಕರು ತಿಳಿಸಿದ್ದಾರೆ. ಈ ಕಿರುಚಿತ್ರಗಳು ನಾಳೆ ಶನಿವಾರ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ (BIC) ನಲ್ಲಿ ಪ್ರದರ್ಶನಗೊಳ್ಳಲಿವೆ. ಜೊತೆಗೆ ಅಂದೇ ಅತ್ಯುತ್ತಮ ಕಿರುಚಿತ್ರದ ಆಯ್ಕೆಯೂ ನಡೆಯಲಿದೆ.
“ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ, ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಚಳವಳಿ” ಎಂದು ಗುಬ್ಬಿವಾಣಿ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮಾಲವಿಕ ಹೇಳಿದ್ದಾರೆ.
ಕಿರುಚಿತ್ರೋತ್ಸವದ ಪ್ರಮುಖ ಹಂತವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ನಿರ್ದೇಶಕಿ ಡಿ. ಸುಮನ್ ಕಿತ್ತೂರು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅತ್ಯುತ್ತಮ ಕಿರುಚಿತ್ರಕ್ಕೆ “ಅವಳ ಹೆಜ್ಜೆ ಪ್ರಶಸ್ತಿ” ಅಡಿಯಲ್ಲಿ 1 ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ. ಜೊತೆಗೆ ಕೆಲವು ಕಿರುಚಿತ್ರಗಳಿಗೆ ಮೆಚ್ಚುಗೆಯ ಬಹುಮಾನವಾಗಿ 10 ಸಾವಿರ ರೂಪಾಯಿ ನಗದು ಬಹುಮಾನ ಕೊಡಲಾಗುತ್ತಿದೆ.
ಅಂತಿಮ ಹಂತಕ್ಕೆ ಆಯ್ಕೆಯಾದ ಕಿರುಚಿತ್ರಗಳು
ಕೇಕ್ ವಾಕ್
ಪುಷ್ಪ
ಸೊಲೋ ಟ್ರಾವೆಲ್ಲರ್
ಹೌ ಆರ್ ಯು?
ಆನ್ ಲೈನ್
ಉಭಯ
ದಿ ಲಾಸ್ಟ್ ಹ್ಯಾಪಿ ಕಸ್ಟಮರ್
ಅನ್‌ಹರ್ಡ್ ಎಕೋಸ್
ನೀರೆಲ್ಲವೂ ತೀರ್ಥ