ಯಾವಾಗ ಹಬ್ಬಗಳ ಮೇಲೆ ವೈದಿಕರ ಹಿಡಿತ ಆರಂಭಗೊಂಡಿತೋ ಅಲ್ಲಿಂದ ಹಬ್ಬಗಳು ಹಾಗೂ ಅವುಗಳ ತಾತ್ವಿಕ ಹಿನ್ನಲೆಗಳೂ ಬದಲಾವಣೆಗೊಂಡವು. ಬಿಸು ವಿಷುವಾಗಿ ಒಂದಷ್ಟು ವೈದಿಕ ನಂಬಿಕೆಗಳ ನೆಲೆಯಲ್ಲಿ ಆಚರಣೆಗೊಳ್ಳ ತೊಡಗಿತು. ಪರ್ಬ ದೀಪಾವಳಿಯಾಗಿ ಮಾರ್ಪಟ್ಟಿತು. ಅಲ್ಲಿಗೆ ಪುರಾಣದ ಕತೆಗಳು ಬಂದವು. ಮಾರ್ಣಮಿಯ ಮಾರಿ ದುರ್ಗಾದೇವಿಯಾದಳು –ಚೆಲುವರಾಜ ಕೋಡಿಮಲೆ
ತುಳುನಾಡಿನ ಜನರು ತಮ್ಮ ಬದುಕಿನ ಸಂತೋಷವನ್ನು ಸಮೂಹದೊಂದಿಗೆ ಆಚರಿಸಿ ಕಳೆಯುತ್ತಿದ್ದುದೇ ಹಬ್ಬ. ಏಣಿಲು ಭತ್ತದ ಕೊಯ್ಲು ಮುಗಿಸಿ (ಒಕ್ಟೋಬರ್) ಆರಂಭವಾಗುತ್ತಿದ್ದ ಸಾಲುಸಾಲು ಹಬ್ಬಗಳು ಮುಂದಿನ ಏಣಿಲು ಬೆಳೆಯ ಆರಂಭ ಅಂದರೆ ಪತ್ತನಾಜೆ (ಮೇ25)ಯ ವರೆಗೆ ಸುಮಾರು ಆರೇಳು ತಿಂಗಳು ನಿರಂತರವಾಗಿ ನಡೆಸುತ್ತಿದ್ದರು. ಸಾರ್ವತ್ರಿಕ ಬೇಸಾಯವಾದ ಏಣಿಲಿನಲ್ಲಿ ತುಳುನಾಡಿನ ಎಲ್ಲಾ ಜನಾಂಗಗಳೂ ಭಾಗವಹಿಸುತ್ತಿದ್ದುದು ಮಾತ್ರವಲ್ಲದೇ ಎಲ್ಲರಿಗೂ ಬೇರೆ ಬೇರೆ ರೀತಿಯಿಂದ ಭತ್ತ ಸಂಗ್ರಹಿಸುವುದಕ್ಕೂ ಸಾಧ್ಯವಾಗುತ್ತಿದ್ದುದು ಈ ಕಾಲದಲ್ಲಿ ಹಬ್ಬಗಳನ್ನು ಹೆಚ್ಚಾಗಿ ಆಚರಿಸಲು ಕಾರಣವಾಗಿತ್ತು. ಹಾಗಾಗಿ ಏಣಿಲು ಭತ್ತ ಮನೆ ಸೇರಿದ ನಂತರ ಎಲ್ಲರಿಗೂ ಹಬ್ಬಗಳನ್ನು ಆಚರಿಸುವ ಸಾಮರ್ಥ್ಯ ಸಹಜವಾಗಿಯೇ ಬರುತ್ತಿತ್ತು.

ಬಲೀದ್ರ
ಆದರೆ ತುಳುವರು ತಮ್ಮ ವಾರ್ಷಿಕ ಆವರ್ತನದ ಮೊದಲ ಹಬ್ಬವಾಗಿ ಆಚರಿಸುತ್ತಿದ್ದುದು ಬಿಸು. ಇದು ಏಣಿಲು ಬೇಸಾಯ ಆರಂಭಿಸಲು ಇರುವ ದಿನ ನಿಗದಿಯ ಹಬ್ಬವೂ ಹೌದು. ತುಳುವರು ಸೌರಮಾನ ಮಾಸ ಗಣನೆಯ ವಾರ್ಷಿಕ ಪರಿಕಲ್ಪನೆಯ ಮೊದಲ ದಿನವೇ ಈ ಬಿಸು. ಆ ದಿನ ಬೇಸಾಯದ ಆರಂಭಕ್ಕೆ ಸಂಬಂಧಿಸಿ ಕ್ರಿಯಾಚರಣೆಗಳನ್ನೇ ಮಾಡುತ್ತಿದ್ದರು. ಗದ್ದೆಯನ್ನು ಸಾಕೇಂತಿಕವಾಗಿ ಉಳುವ, ಗೊಬ್ಬರ ಹಾಕುವ, ಕೈಬಿತ್ತು ಹಾಕುವ, ಗೇಣಿ ತೀರ್ಮಾನ ಮಾಡುವ ಇತ್ಯಾದಿ ಕೃಷಿ ಸಂಬಂಧೀ ಕಾರ್ಯಗಳ ಸಂಕ್ಷಿಪ್ತ ರೂಪವೆಂಬಂತೆ ಆಚರಣೆ ನಡೆಯುತ್ತಿತ್ತು.
ಬಿಸು ಕಳೆದ ನಂತರ ಬರುವುದೇ ಪತ್ತನಾಜೆ, ಇದು ಕೃಷಿ ಕೆಲಸ ಆರಂಭಿಸುವ ಅಧಿಕೃತ ದಿನ. ಎಲ್ಲಾ ಸಾಂಸ್ಕೃತಿಕ, ಧಾರ್ಮಿಕ ಉತ್ಸವಗಳ ಕೊನೆಯ ದಿನ. ಪತ್ತನಾಜೆಯ ದಿನ ಹತ್ತು ಹನಿ ಮಳೆ ಬೀಳಲೇ ಬೇಕು ಎನ್ನುವ ನಂಬಿಕೆ ಇತ್ತು. ಈ ದಿನವನ್ನು ಹಬ್ಬವಾಗಿ ಆಚರಿಸದಿದ್ದರೂ ಪತ್ತನಾಜೆಗೆ ತುಳು ಬೇಸಾಯ ಸಂಸ್ಕೃತಿಯಲ್ಲಿ ಮಹತ್ವವಿದೆ. ಆ ನಂತರ ತುಳು ಕಾಲಗಣನೆಯಲ್ಲಿ ಯಾವುದೇ ಹಬ್ಬಗಳ ಆಚರಣೆಗೆ ಅವಕಾಶವಿರಲಿಲ್ಲ.
ಏಣಿಲು ಬೇಸಾಯ ಮುಗಿಸಿದ ನಂತರ ಎಲ್ಲರೂ ಭತ್ತವನ್ನು ಮನೆಯೊಳಗೆ ಸೇರಿಸಿ ಆಚರಿಸುವ ಸಮೃದ್ಧಿಯ ಹಬ್ಬಗಳು ಹಲವು. ಇನ್ನೊಂದೆಡೆಯಿಂದ ಮಳೆ ಮುಗಿದು ಜನರು ಸಂಭ್ರಮಾಚರಣೆಗೆ ಸಿದ್ದಗೊಳ್ಳುತ್ತಿದ್ದ ಕಾಲವೂ ಹೌದು. ಆಗ ಬರುವ ಹಬ್ಬ ಪರ್ಬ. ಇದು ತುಳುವರ ಸಮೃದ್ಧಿಯ ಆಶಯದಿಂದ ನಡೆಯುವ ಹಬ್ಬ. ಮೋಸದಿಂದ ಹತನಾದ ತನ್ನ ಚಕ್ರವರ್ತಿಯನ್ನು ಸಮೃದ್ಧಿಯ ಕಾಲದಲ್ಲಿ ಮತ್ತೆ ಕರೆದು ಆಧರಿಸುವ ಹಬ್ಬವೇ ಬಿಸು. ಬಲಿ ಕೇವಲ ಚಕ್ರವರ್ತಿಯಾಗಿದ್ದು ಮಾತ್ರವಲ್ಲ ಆತ ಪ್ರಜಾಪಾಲಕ, ಕೃಷಿಕ, ಇಲ್ಲಿಯ ತಳವರ್ಗದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದವ ಎನ್ನುವುದನ್ನು ಪಾಡ್ದನ ಹೇಳುತ್ತದೆ. ಅಂತಹ ಜನಪ್ರಿಯ ದೊರೆಯನ್ನು ಮೇಲ್ವರ್ಗವು ಮೋಸದಿಂದ ಕೊಂದದ್ದನ್ನು ತುಳುವರು ಇಂದಿಗೂ ಸಹಿಸುವುದಿಲ್ಲ ಎನ್ನುವ ಆಚರಣೆಯೇ ಬಿಸು.
ಬಿಸುವಿನ ನಂತರ ತುಳುವರ ಮಾರ್ಣಮಿ ಆಚರಣೆ ಹಲವು ಭಾಗದಲ್ಲಿತ್ತು. ಊರಿನ ಮಾರಿ ಕಳೆಯುವ ನೆಲೆಯಲ್ಲಿ ಮಾರ್ಣಮಿಯೂ ನಡೆಯುತ್ತಿತ್ತು.
ಕೆಡ್ಡಸ
ಕೆಡ್ಡಸ ತುಳುವರ ಮಹತ್ವದ ಹಬ್ಬ. ಭೂಮಿಯನ್ನು ಹೆಣ್ಣಿಗೆ ಹೋಲಿಸಿ ಆಚರಿಸುವ ಕೆಡ್ಡಸದಲ್ಲಿ ಬೇಟೆಗೆ ವಿಶೇಷ ಮಹತ್ವವಿತ್ತು. ಮೂರು ದಿನ ಆಚರಿಸುವ ಕೆಡ್ಡಸದ ಹಿಂದೆ ಗಂಡು ಹೆಣ್ಣಿನ ಸಂತಾನೋತ್ಪತ್ತಿಯ ವಾಸ್ತವದಂತೆ ಭೂಮಿಯ ಫಲವಂತಿಕೆಯ ಆಶಯವಿತ್ತು. ಈ ಕಾಲದಲ್ಲಿ ಗಿಡಮರಗಳು ಚಿಗುರುತ್ತವೆ. ಅಲ್ಲದೇ ಫಲ ನೀಡಲು ತಯಾರಾಗುತ್ತವೆ. ಬಿತ್ತನೆ ನಡೆಯುವ ಹಿನ್ನಲೆಗಾಗಿ ಭೂಮಿ ತಯಾರಾಗುವ ಆಚರಣೆಯೇ ಕೆಡ್ಡಸ. ಇದಲ್ಲದೇ ಆಟಿ ಅಮಾವಾಸ್ಯೆ, ಕಾವೇರಿ ಸಂಕ್ರಮಣ, ಅಲ್ಲಲ್ಲಿ ಪೂಕರೆ ಆಚರಣೆಗಳು ಹಬ್ಬದಂತೆ ನಡೆಯುತ್ತಿದ್ದವು.
ಹೀಗೆ ತುಳುವರು ಅವರದೇ ತಾತ್ವಿಕ ಹಿನ್ನಲೆಯಿಂದ ಪ್ರಾಕೃತಿಕ ಅಂಶಗಳನ್ನು ಗಮನದಲ್ಲಿಟ್ಟು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದರು. ಆಚರಣೆಗಳ ಹಿಂದೆ ಬದುಕಿನ ಸಹಜತೆ ಮತ್ತು ಪ್ರಕೃತಿಯ ವಾಸ್ತವತೆ ಅಡಗಿಕೊಂಡಿತ್ತು. ಯಾವಾಗ ಈ ಹಬ್ಬಗಳ ಮೇಲೆ ವೈದಿಕರ ಹಿಡಿತ ಆರಂಭಗೊಂಡಿತೋ ಅಲ್ಲಿಂದ ಹಬ್ಬಗಳು ಹಾಗೂ ಅವುಗಳ ತಾತ್ವಿಕ ಹಿನ್ನಲೆಗಳೂ ಬದಲಾವಣೆಗೊಂಡವು. ಬಿಸು ವಿಷುವಾಗಿ ಒಂದಷ್ಟು ವೈದಿಕ ನಂಬಿಕೆಗಳ ನೆಲೆಯಲ್ಲಿ ಆಚರಣೆಗೊಳ್ಳ ತೊಡಗಿತು. ಪರ್ಬ ದೀಪಾವಳಿಯಾಗಿ ಮಾರ್ಪಟ್ಟಿತು. ಅಲ್ಲಿಗೆ ಪುರಾಣದ ಕತೆಗಳು ಬಂದವು. ಮಾರ್ಣಮಿಯ ಮಾರಿ ದುರ್ಗಾದೇವಿಯಾದಳು. ಕೆಡ್ಡಸದಲ್ಲಿ ಹೆಣ್ಣನ್ನು ಅಸ್ಪೃಶ್ಯಗಳೆಂಬಂತೆ ಕಾಣುವ ಕಾರಣ ಆ ಆಚರಣೆಯೂ ಕಣ್ಮರೆಯಾಯಿತು. ಇತರ ಅನೇಕ ಜನಪದ ಹಬ್ಬಗಳು ತನ್ನ ಮೌಲ್ಯಗಳನ್ನು ಕಳೆದುಕೊಂಡವು.
ಬಿಸು
ಇದರ ಸ್ಥಾನದಲ್ಲಿ ನಾಗರ ಪಂಚಮಿ, ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ಷಷ್ಠಿ, ಹಾಗೂ ಲೆಕ್ಕವಿಲ್ಲದಷ್ಟು ದೇವಾನುದೇವತೆಗಳ ಜಯಂತಿಗಳು ಹುಟ್ಟಿಗೊಂಡವು. ಈ ಹಬ್ಬಗಳು ಯಾವುದೂ ತುಳುನಾಡಿನ ಮೂಲನಿವಾಸಿಗಳಿಂದ ಅಥವಾ ಬೇಸಾಯ ಹಿನ್ನಲೆಯ ಜನಪದರಿಂದ ಆಚರಣೆಗೊಂಡವುಗಳಲ್ಲ. ಈ ಹಬ್ಬಗಳ ಆಚರಣೆಗೆ ಯಾವುದೇ ಇತಿಹಾಸವೂ ಇಲ್ಲ. ಆದರೆ ಈ ಹಬ್ಬಗಳು ಇಂದು ಮನೆಯ ಹಬ್ಬಗಳಾಗುತ್ತಿವೆ. ಅದೇ ರೀತಿ ಜನಪದರು ಬಹಳ ಪೂರ್ವದಿಂದಲೇ ಆಚರಿಸುತ್ತಾ ಬಂದ ಜನಪದ ಹಬ್ಬಗಳು ಬೀದಿಯಲ್ಲೋ, ಸಾಮೂಹಿಕವಾಗಿಯೋ ಅಲ್ಲಿ ಇಲ್ಲಿ ಆಚರಿಸುವ ಸ್ಥಿತಿಗೆ ತಲುಪಿದವು. ಇನ್ನೂ ಒಂದಷ್ಟು ಕಾಲ ಕಳೆದ ನಂತರ ಈ ಜನಪದ ಹಬ್ಬಗಳು ಸಂಪೂರ್ಣ ಕಣ್ಮರೆಯಾಗಿ ಆ ಸ್ಥಳದಲ್ಲಿ ವೈದಿಕ ಹಬ್ಬಗಳು ಮಾತ್ರ ಆಚರಣೆಗೊಂಡಲ್ಲಿ ಆಶ್ಚರ್ಯವಿಲ್ಲ.
ಚೆಲುವರಾಜ ಕೋಡಿಮಲೆ
ಲೇಖಕರು
ಇದನ್ನೂ ಓದಿ-ತುಳುನಾಡಿನ ಸಾಂಸ್ಕೃತಿಕ ಸ್ಥಿತ್ಯಂತರ- ನಾಗಾರಾಧನೆ