Monday, April 29, 2024

ಸತ್ಯ | ನ್ಯಾಯ |ಧರ್ಮ

ಚಿಕ್ಕಮಗಳೂರು | ಮಹಿಷ ದಸರಾ ಆಚರಣೆಗೆ ಯತ್ನಿಸಿದ ದಲಿತ ಕಾರ್ಯಕರ್ತರ ಬಂಧನ

ಚಿಕ್ಕಮಗಳೂರು: ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆಗೆ ಯತ್ನಿಸಿದ ಆರೋಪದ ಮೇಲೆ ದಲಿತ ಸಂಘಟನೆಗಳ ಮುಖಂಡರನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ತನಕ ಮಹಿಷಾಸುರ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ನಿರ್ಧರಿಸಿತ್ತು. ಮಹಿಷ ದಸರಾವನ್ನು ವಿಚಾರವಾದಿ ಕೆ ಎಸ್ ಭಗವಾನ್ ಉದ್ಘಾಟಿಸಲಿದ್ದಾರೆ ಎಂದು ಸಂಘಟಕರು ಘೋಷಿಸಿದ್ದರು. ಆದರೆ, ಭಗವಾನ್ ಮಹಿಷ ದಸರಾ ಉದ್ಘಾಟನೆಗೆ ಶ್ರೀರಾಮ ಸೇನೆ ಮತ್ತು ಒಕ್ಕಲಿಗರ ಸಂಘ ವಿರೋಧ ವ್ಯಕ್ತಪಡಿಸಿತ್ತು.

ಮಹಿಷ ದಸರಾಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದೇಶ ಉಲ್ಲಂಘಿಸಿ ದಲಿತ ಸಂಘಟನೆಗಳ ಸದಸ್ಯರು ಮಹಿಷಾಸುರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲು ಯತ್ನಿಸಿದರು. 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

‘ಮಹಿಷ ದಸರಾ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸುವ ಮೂಲಕ ಸಂವಿಧಾನಕ್ಕೆ ಧಕ್ಕೆ ತಂದಿದೆ. ಇದಕ್ಕೆ ದತ್ತ ಜಯಂತಿ ವೇಳೆ ಉತ್ತರ ನೀಡುತ್ತೇವೆ. ದತ್ತ ಜಯಂತಿ ಆಚರಣೆ ವೇಳೆ ಪ್ರಮೋದ್ ಮುತಾಲಿಕ್ ಜಿಲ್ಲೆಗೆ ಆಗಮಿಸಲು ಬಿಡುವುದಿಲ್ಲ’ ಎಂದು ಮುಖಂಡರು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಅಕ್ಟೋಬರ್ 24ರ ವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮಹಿಷ ದಸರಾ ಪರ ಮತ್ತು ವಿರೋಧವಾಗಿ ಯಾವುದೇ ಪೋಸ್ಟರ್, ಬ್ಯಾನರ್ ಅಳವಡಿಸುವಂತಿಲ್ಲ ಹಾಗೂ ಮೆರವಣಿಗೆ ನಡೆಸುವಂತಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು