ದಲಿತ ಹೋರಾಟಗಾರ, ಮಹಾತ್ಮ ಅಯ್ಯನ್ ಕಾಳಿ(1863-1941) ಹುಟ್ಟಿ ಇಂದಿಗೆ 161 ವರ್ಷಗಳಾದವು.
ಊರಿನ ಮುಖ್ಯ ರಸ್ತೆಗಳಲ್ಲಿ ಅಸ್ಪೃಶ್ಯರು ಓಡಾಡುವುದು, ದಲಿತ ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ತೊಡುವುದು, ದುಡಿಯುವ ಜನ ತಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುವುದು ನಿಷಿದ್ಧವಾಗಿದ್ದ ಕಾಲದಲ್ಲಿ ಇಂತಹ ಅನ್ಯಾಯಗಳ ವಿರುದ್ಧ ಸಿಡಿದು ನಿಂತು ಮೇಲ್ಜಾತಿಗಳ ವಿರುದ್ಧ ಪ್ರತಿರೋಧದ ಚಳುವಳಿಯನ್ನು ಕಟ್ಟಿದವರು ಅಯ್ಯನ್ ಕಾಳಿ.
ಅಸ್ಪೃಶ್ಯರ ಹಕ್ಕುಗಳಿಗಾಗಿ ಬೀದಿಯಲ್ಲಿ ನಿಂತು ಬಡಿದಾಡಿದ ಈ ವೀರ ಈ ದೇಶದಲ್ಲಿ ಕಮ್ಯುನಿಸ್ಟ್ ಚಳುವಳಿ ಹುಟ್ಟುವುದಕ್ಕು ಎಷ್ಟೋ ವರ್ಷ ಮೊದಲೇ ಅಸ್ಪೃಶ್ಯರು ಸೇರಿದಂತೆ ಎಲ್ಲ ದುಡಿಯುವ ತಳ ಸಮುದಾಯಗಳನ್ನು ಒಗ್ಗೂಡಿಸಿ ವರ್ಣವ್ಯವಸ್ಥೆಯ ವಿರುದ್ಧ ವರ್ಗಹೋರಾಟವನ್ನು ರೂಪಿಸಿದ್ದ ಕ್ರಾಂತಿಕಾರಿ.
ಅಸ್ಪೃಶ್ಯರ ಹಕ್ಕುಗಳ ಹೋರಾಟಕ್ಕಾಗಿ 1907 ರಲ್ಲಿಯೇ ‘ಸಾಧುಜನ ಪರಿಪಾಲನ ಸಂಘ’ ಸ್ಥಾಪಿಸಿ ಕೇರಳ ಮತ್ತು ತಮಿಳುನಾಡಿನಲ್ಲಿ ಇವರು ರೂಪಿಸಿದ್ದ ಹೋರಾಟಗಳು ಚಾರಿತ್ರಿಕವಾದವುಗಳು.
ಅಸ್ಪೃಶ್ಯರಿಗೆ ನಿಷೇಧಿಸಲ್ಪಟ್ಟಿದ್ದ ರಸ್ತೆಗಳಲ್ಲಿ ಧೈರ್ಯದಿಂದ ಎತ್ತಿನ ಗಾಡಿಯನ್ನು ಓಡಿಸಿ ಈ ನೆಲದಲ್ಲಿ ಘನತೆಯಿಂದ ಬದುಕುವುದು ನನ್ನ ಹಕ್ಕು ಎಂದು ಎದೆಯುಬ್ಬಿಸಿ ಸಾರಿದ ಧೀರ.
ಚರಿತ್ರೆಯಲ್ಲಿ ಮೇಲ್ಜಾತಿಯ ಸಮಾಜ ಸುಧಾರಕರ ಬಗ್ಗೆ ಸಾವಿರಾರು ಪುಟಗಳನ್ನು ಮೀಸಲಿಟ್ಟಿರುವ ಈ ದೇಶ ಅಯ್ಯನ್ ಕಾಳಿಯಂತಹ ನಾಯಕನನ್ನು ತುಂಬಾ ವರ್ಷಗಳ ಕಾಲ ವಿಸ್ಮೃತಿಗೆ ಸರಿಸಿತ್ತು.
ನಮ್ಮ ಚರಿತ್ರೆಯನ್ನು ನಾವೇ ಬರೆದುಕೊಳ್ಳಬೇಕಾದ ಈ ಕಾಲದಲ್ಲಿ ಈ ಧೀಮಂತ ಕ್ರಾಂತಿಕಾರಿಯನ್ನು ಗೌರವದಿಂದ ನೆನೆಯೋಣ.
- ವಿ ಎಲ್ ನರಸಿಂಹಮೂರ್ತಿ