ದಲಿತ ವ್ಯಕ್ತಿಯೊಬ್ಬ ಉತ್ತಮ ಬಟ್ಟೆ ಮತ್ತು ಸನ್‌ಗ್ಲಾಸ್ ಧರಿಸಿದ್ದಕ್ಕೆ ಸಿಟ್ಟಿಗೆದ್ದ ಮೇಲ್ಜಾತಿಗೆ ಸೇರಿದ ವ್ಯಕ್ತಿಗಳ ಗುಂಪೊಂದು ಆತನನ್ನು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದ್ದು, ಇದನ್ನು ಹಿರಿಯ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಖಂಡಿದ್ದಾರೆ.
ಹೌದು, ಈ ಕುರಿತು ಟ್ವೀಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಗುಜರಾತ್ ಹಳ್ಳಿಯೊಂದರಲ್ಲಿ ತಂಪು ಕನ್ನಡಕ ಹಾಕಿದ್ದಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಸವರ್ಣೀಯರು ಥಳಿಸಿದ್ದಾರೆ. ನಾನು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಶೂ ಧರಿಸಿ ಬಂದ ದಲಿತ ಬಾಲಕನಿಗೆ ಡ್ರಿಲ್ ಮಾಸ್ತರು ಥಳಿಸಿದ್ದರು. ಆತ ಅವಮಾನದಿಂದ ಶಾಲೆಯನ್ನೇ ಬಿಟ್ಟ. ಐವತ್ತು ವರ್ಷಗಳ ನಂತರವೂ ಭಾರತ ಬದಲಾಗಿಲ್ಲವೇ? ನಾಗರೀಕ ಸಮಾಜಕ್ಕಿದು ನಾಚಿಕೆಗೇಡು ಎಂದಿದ್ದಾರೆ.
ಹೊಸ ಬಟ್ಟೆ, ಸನ್‌ಗ್ಲಾಸ್ ಹಾಕಿದನೆಂಬ ಕಾರಣಕ್ಕೆ ದಲಿತ ವ್ಯಕ್ತಿಗೆ ಮೇಲ್ವರ್ಗದ ಗುಂಪೊಂದು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್ಪುರ್ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಘಟನೆ ಸಂಬಂಧ ಏಳು ಆರೋಪಿಗಳ ವಿರುದ್ಧ ಗಲಭೆ, ಮಹಿಳೆಯ ಮೇಲೆ ದೌರ್ಜನ್ಯ, ಜಾತಿ ನಿಂದನೆ ಹೀಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲೂ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/NomadChandru/status/1664548099463970818?t=QfVlrUl0e9lhYvJEJOSzNA&s=19