ಸಿನೆಮಾ
ರಾಮಾನುಜ ತನ್ನ ಅಕ್ಕನ ಮಡಚಿಟ್ಟ ಫೋಟೋವನ್ನು ಮತ್ತೆ ಮುನ್ನೆಲೆಗೆ ತರುವುದು, ಮತ್ತು ಇಂಗ್ಲಿಷ್ ಟೀಚರ್ – ಪಿ. ಟಿ ಸರ್ ನಡುವೆ ಒಲವು ಮೂಡಿಸುವುದು ಚಿತ್ರದಲ್ಲಿ ಎಷ್ಟು ಸುಲಭವೋ, ಅಷ್ಟೇ ಸಲೀಸಾಗಿ ರಮಾಮಣಿಯ ಪ್ರೀತಿಯನ್ನು ಮುಸ್ತಾಫಾ ಸ್ವೀಕರಿಸುವುದನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗದೇ ಇರುವುದು, ಈ ಕಾಲದ ದ್ವಂದ್ವವೇ? – ಹೇಮಶ್ರೀ ಸಯದ್, ಕ್ಯಾಲಿಫೋರ್ನಿಯಾ
ಚಿತ್ರ ಆರಂಭವಾಗುವ ಮುನ್ನ ತೇಜಸ್ವಿಯವರು ತಮ್ಮ ಮಾತಿನ ಮೂಲಕ ನಮ್ಮನ್ನು ಎದುರುಗೊಳ್ಳುತ್ತಾರೆ. ಮುಂದೆ ನಾವು ನೋಡುವ ದೃಶ್ಯಾವಳಿಗೆ ಪೀಠಿಕೆ ಇದು. ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಸಣ್ಣ ಕತೆಗೆ ರೆಕ್ಕೆ ಪುಕ್ಕ ಜೋಡಿಸಿ, ತೇಜಸ್ವಿಯವರ ಫ್ಯಾನ್ಸ್ ಗಳೇ ಜತೆಗೂಡಿ crowd funding ಮೂಲಕ ತಯಾರಿಸಿದ ಈ ಚಿತ್ರ, ಸುಮಾರು ಎರಡೂವರೆ ಗಂಟೆಯಷ್ಟಿದ್ದರೂ ಲವಲವಿಕೆಯಿಂದ ನೋಡಿಸಿಕೊಂಡು ಹೋಗುತ್ತದೆ.
ನಿರ್ದೇಶಕ ಶಶಾಂಕ್ ಸೋಗಲ್ ಅವರು ಕತೆಯನ್ನು ತಿಳಿಹಾಸ್ಯ ಕೂಡಿದ ನವಿರಾದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅರ್ಧ ಶತಮಾನದಷ್ಟು ಹಳೆಯ ಕಾಲದ ಕತೆ, ಅಬಚೂರು ಕಾಲೇಜಿನ ಮೇಷ್ಟ್ರುಗಳು, ಅವರ ಸಣ್ಣತನಗಳು, ಪಾಠದೊಳಗೆ ನುಸುಳುವ ಪಂಪ – ಕುಮಾರ ವ್ಯಾಸ, ಖಲಿಲ್ ಗಿಬ್ರಾನ್ – ಶೇಕ್ಸ್ ಪಿಯರ್, ಫ಼ುಟ್ ಬಾಲ್ – ಕ್ರಿಕೆಟ್, ಸೀರೆಯುಟ್ಟ ಮುಗುದೆಯರ ವೈಯಾರ – ಬಿಗುಮಾನ, ಕಾಲೇಜು ಹುಡುಗರ ತರಲೆ – ತುಂಟಾಟ, ಗೆಳೆತನ – ಬಾಂಧವ್ಯದ ಮಧುರ ಘಳಿಗೆಗಳ ಜೊತೆ ಜೊತೆಗೇ ಅಸಹನೆ – ಅಸೂಯೆ – ತಿಕ್ಕಾಟ – ಸಂಘರ್ಷಗಳೂ ಇವೆ. ನೋಸ್ಟಾಲ್ಜಿಕ್ ಅನ್ನಿಸುವ ಕ್ಷಣಗಳು ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.

ಸಿನಿಮಾ ದೃಶ್ಯರೂಪಕಗಳ ಮೂಲಕ, ಬಹಳಷ್ಟನ್ನು ಹೇಳಲು ಹೊರಟಿದೆ. ಸಂಭಾಷಣೆಯ ಮೊನಚು, ಪೆಟ್ಟು ಎಲ್ಲಿ ಬೀಳಬೇಕೋ ಅಲ್ಲಿಗೇ ಬೀಳುತ್ತದೆ. ಸರಿ ತಪ್ಪುಗಳನ್ನು, ‘ನಾವು’ ‘ಅವರು’ ಎನ್ನುವ ಪೂರ್ವಾಗ್ರಹಗಳನ್ನು ಹಾಗೆ ಹಾಗೆಯೇ ನೋಡುಗರ ಮುಂದಿಡುತ್ತದೆ. ಬಹಳಷ್ಟು ಕಡೆ ಆ ಪೂರ್ವಾಗ್ರಹಗಳನ್ನು ಒಡೆಯುವ ಪ್ರಯತ್ನವನ್ನೂ ಮಾಡುತ್ತದೆ. ನಿರ್ದೇಶಕ, ಮೂಲ ಕತೆಯನ್ನು ವಿಸ್ತರಿಸಿ ಈಗಿನ ವರ್ತಮಾನದ ತಲ್ಲಣಗಳನ್ನು, ಆತಂಕಗಳನ್ನು ಚಿತ್ರಕತೆಯೊಳಗೆ ತಂದಿರುವುದು ಮೆಚ್ಚಬೇಕಾದ್ದೇ. ತೇಜಸ್ವಿ ಈ ಕತೆ ಬರೆದದ್ದು ೧೯೭೦ ರ ಸುಮಾರಿಗೆ. ನಾವು ಪರದೆಯ ಮೇಲೆ ಮುಸ್ತಾಫಾನನ್ನು ನೋಡುವ ಈ ಕಾಲಘಟ್ಟದಲ್ಲಿ, ನಮ್ಮ ಹೆಗಲೇರಿ ನಮಗರಿವಿಲ್ಲದೆಯೇ ಹತ್ತಿ ಕೂತು ಕೊಂಡಿರುವ (ಜಾತಿ- ಧರ್ಮ-ಕೋಮುವಾದ-ಗಲಭೆ-ಸಾವು-ನೋವುಗಳ) ಬೇತಾಳಭಾರವನ್ನು ಇಳಿಸಿಕೊಂಡು ಈ ಚಿತ್ರವನ್ನು ನೋಡುವುದು ಸಾಧ್ಯವೇ? ಆ ಕಾರಣಕ್ಕಾಗಿಯೇನೋ, ಮೂಲಕತೆಯಿಂದಾಚೆಗೆ ಚಿತ್ರ ಸಮರ್ಪಕವಾಗಿ ಧ್ವನಿಸುವುದಿಲ್ಲ.
ರಾಮಾನುಜ ಅಯ್ಯಂಗಾರಿಗೆ ಮುಸ್ತಾಫಾ ಮೇಲಿನ ದ್ವೇಷಕ್ಕೆ ವೈಯಕ್ತಿಕ ಕಾರಣ ಇರುವುದರಿಂದ ಕೊನೆಯಲ್ಲಿ, ಸಿನಿಮಾದ ಒಂದು ನಾಟಕೀಯ ಕ್ಷಣದಲ್ಲಿ, ಅವ ಬದಲಾಗುತ್ತಾನೆ. ಒಂದು ಖರ್ಜೂರ ತಿಂದು ಹಲವು ಮನಸ್ಸುಗಳು ಬದಲಾಗುವಂತಿದ್ದರೆ!! ರಾಮಾನುಜನ ಮನಸು ಬದಲಾದ ಹಾಗೆ ಅವನ ಗೆಳೆಯರ, ಊರು ಕೇರಿಯ, ಸುತ್ತ ಮುತ್ತಲಿನ ಜನರ ಎಲ್ಲರ ಮನಸ್ಸುಗಳೂ ಮುಂದೊಂದು ದಿನ ಬದಲಾಗಬಹುದಲ್ಲವೇ?! ಬದಲಾಗಬೇಕು ಎನ್ನುವುದು ಚಿತ್ರದ ಆಶಯವೂ ಹೌದು.
ಇವತ್ತಿನ ಸಂದರ್ಭದಲ್ಲಿ ಮುಸ್ತಾಫಾ ಹೇಗೆ ತನ್ನ ಮುಸಲ್ಮಾನ ಸಮುದಾಯವನ್ನು ಪ್ರತಿನಿಧಿಸುತ್ತಾನೆಯೋ ಹಾಗೆ ಎಲ್ಲಾ ರೀತಿಯ ಅಲ್ಪಸಂಖ್ಯಾತ ದನಿಗಳಿಗೂ ಒಂದು ರೂಪಕ. ನಾವು, ಅವರು, ನಮ್ಮವರು, ಬೇರೆಯವರು, ಭಾಷೆ, ಸಂಸ್ಕೃತಿ, ಮೈ ಬಣ್ಣ – ಹೀಗೆ ಅಸಮಾನತೆ-ತಾರತಮ್ಯಗಳ ಬೇಲಿ ದಾಟಿ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರ ಒಳಗೊಳ್ಳುವಿಕೆಯ ಪ್ರಕ್ರಿಯೆ ಸಹಜ ಎನ್ನುವ ಉದಾಹರಣೆಗಳು ಈ ಹೊತ್ತಿನ ಅಗತ್ಯ. ಪ್ರೀತಿ-ಸೌಹಾರ್ದತೆಯ ಒರತೆಯನ್ನು ತಲುಪುವ ಬಹುದೂರದ ದಾರಿಯಲ್ಲಿನ ಒಯಸಿಸ್, ‘ಡೇರ್ ಡೆವಿಲ್ ಮುಸ್ತಾಫಾ’.
ಇಂದಿನ ಯುವ ಪೀಳಿಗೆ, ತಮಗೆ ಸುಲಭಕ್ಕೆ ದಕ್ಕಿರುವ ರೀಲ್ಸ್ ವಿಡಿಯೋಗಳಲ್ಲೇ ಕಾಲಹರಣ ಮಾಡುತ್ತಾ ಅದರಲ್ಲೇ ತಮ್ಮ ಆತ್ಮರತಿಯನ್ನು ಪೋಷಿಸಿಕೊಳ್ಳುತ್ತಿರುವ ಸಮಯದಲ್ಲಿ, ಸಾಹಿತ್ಯದ ಓದು ಅದರಲ್ಲೂ ಮಾನವೀಯ ಚಿಂತನೆಗಳನ್ನು ಎತ್ತಿ ಹಿಡಿಯುವ ಬರವಣಿಗೆಗಳನ್ನು ಅವರಿಗೆ ಈ ಮೂಲಕವಾದರೂ ತಲುಪಿಸುವುದು ಪ್ರಜ್ಞಾಪೂರ್ವಕವಾಗಿ ಆಗಲೇಬೇಕಾದ್ದು. ಆ ದಿಕ್ಕಿನಲ್ಲಿ ಹೊಸ ಕಲಾವಿದರಿಂದ ಕೂಡಿದ ‘ಡೇರ್ ಡೆವಿಲ್ ಮುಸ್ತಾಫಾ’ ತಂಡದ ಕೊಡುಗೆ ಗಮನಾರ್ಹ.
“ಪ್ರಾರಂಭ ಪಯಣ ಎಲ್ಲಾ ಗಡಿಗಳನ್ನು ಮೀರುತಾ… ಬೆರೆಯೋಣ ಬಾ ನಿಯಮ ಮೀರಿ …
ರೆಕ್ಕೆ ಬಿಚ್ಚಿ ಹಾರಾಡೋಕೆ ಬಿಡಲೇಬೇಕು ಎಲ್ಲ ಭಾರ … ಆಕಾಶಕ್ಕೆ ಅಂಕೆ ಇಲ್ಲ ಸಾಗೋಣ ಬಾ ಇನ್ನೂ ದೂರ…”,
ಚಿತ್ರದಲ್ಲಿ ಬರುವ ಹಾಡೊಂದರ ಸಾಲುಗಳು ಭರವಸೆ ಮತ್ತು ವಿಷಾದವನ್ನು ಜತೆಜತೆಗೇ ಮೂಡಿಸುತ್ತವೆ.
ರಮಾಮಣಿ ಮತ್ತು ಮುಸ್ತಾಫ಼ರ ನಡುವೆ ಮುಂದಿನ ದಿನಗಳಲ್ಲಿ ಅರಳಬಹುದಾಗಿದ್ದ ಸಹಜ ಪ್ರೇಮವೊಂದನ್ನು ಚಿವುಟಿ ಹಾಕಿದ್ದು, ಈ ಚಿತ್ರದ ಬಗ್ಗೆ ನನಗಿರುವ ಒಂದೇ ಒಂದು ತಕರಾರು. ರಾಮಾನುಜ ತನ್ನ ಅಕ್ಕನ ಮಡಚಿಟ್ಟ ಫೋಟೋವನ್ನು ಮತ್ತೆ ಮುನ್ನೆಲೆಗೆ ತರುವುದು, ಮತ್ತು ಇಂಗ್ಲಿಷ್ ಟೀಚರ್ – ಪಿ. ಟಿ ಸರ್ ನಡುವೆ ಒಲವು ಮೂಡಿಸುವುದು ಚಿತ್ರದಲ್ಲಿ ಎಷ್ಟು ಸುಲಭವೋ, ಅಷ್ಟೇ ಸಲೀಸಾಗಿ ರಮಾಮಣಿಯ ಪ್ರೀತಿಯನ್ನು ಮುಸ್ತಾಫಾ ಸ್ವೀಕರಿಸುವುದನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗದೇ ಇರುವುದು, ಈ ಕಾಲದ ದ್ವಂದ್ವವೇ? ಚಿತ್ರದುದ್ದಕ್ಕೂ ಗಟ್ಟಿತನವಿದ್ದ (ಮೂಲ ಕಥೆಯಲ್ಲಿ ಇಲ್ಲದ) ರಮಾಮಣಿಯ ಪಾತ್ರದ ಮೂಲಕ ಸೂಚ್ಯವಾಗಿಯಾದರೂ ಸಮಾಜಕ್ಕೆ ಸಂದೇಶ ಕೊಡಬಹುದಾಗಿದ್ದ ಎಳೆಯನ್ನು ಅಲ್ಲಿಗೇ ಬಿಟ್ಟಿರುವುದು ಯಾವ ಸಾಮಾಜಿಕ ಹಿಂಜರಿಕೆಯ ಕಾರಣಕ್ಕಾಗಿ? ಅಥವಾ ಈ ಕಾಲಘಟ್ಟದಲ್ಲಿ ಹಾಗೊಂದು ಸಕಾರಾತ್ಮಕ ಹೊಳಹನ್ನು ಯುವ ಜನಾಂಗಕ್ಕೆ ನೀಡುವುದು, ಈ ‘ಫೀಲ್ ಗುಡ್’ ಚಿತ್ರಕ್ಕೆ ದುಬಾರಿಯಾಗಬಹುದೆಂದು ಅನ್ನಿಸಿತೋ ಏನೋ?
(ಕೋಮುಗಲಭೆಯಲ್ಲಿ ತೊಡಗಿಸಿಕೊಳ್ಳುವ) ನಮ್ಮ ಯುವಕ ಯುವತಿಯರಿಗೆ ಭವಿಷ್ಯವಿದೆಯೇ ಎನ್ನುವ ತೇಜಸ್ವಿಯವರ ಆತಂಕಕ್ಕೆ ‘ಡೇರ್ ಡೆವಿಲ್ ಮುಸ್ತಾಫಾ’, ತಕ್ಕ ಮಟ್ಟಿನ ಉತ್ತರವನ್ನೇನೋ ಕೊಡುತ್ತದೆ. ಆದರೆ, ವೈಯಕ್ತಿಕ ನೆಲೆಗಳಲ್ಲಿ ನಾವು ಕಂಡುಕೊಳ್ಳುವ ಧೈರ್ಯ, ಸಾಮರಸ್ಯ ಸಾಮಾಜಿಕವಾಗಿಯೂ ಗಟ್ಟಿಗೊಳ್ಳುವುದು ಹೇಗೆ? ಯಾವಾಗ? ಎನ್ನುವ ಪ್ರಶ್ನೆಯನ್ನೇ ಮತ್ತೆ ಮತ್ತೆ ನಮ್ಮ ಮುಂದಿಡುತ್ತದೆ.
ಬದಲಾಗಿರುವ (??) ಸದ್ಯದ ರಾಜ್ಯ ರಾಜಕೀಯದ ಹಿನ್ನೆಲೆಯಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದ ಜನತೆಗೆ ಹೊಸ ಹುರುಪನ್ನು ನೀಡುವಂತಾದರೆ ಅದೇ ಖುಷಿ.
ಹೇಮಶ್ರೀ ಸಯದ್
ಕಲಾವಿದೆ, ಕ್ಯಾಲಿಫೋರ್ನಿಯಾ