ಆನೆಗಳಿಗೆ ವಿದ್ಯುತ್ ಬೇಲಿಯನ್ನು ನಿಷ್ಕ್ರಿಯ ಗೊಳಿಸುವ ವಿಧಾನ ತಿಳಿದಿದೆ. ವಿದ್ಯುತ್ ಬೇಲಿಯ ಮೇಲೆ ಪಕ್ಕದಲ್ಲಿರುವ ಸಣ್ಣ ಮರವೊಂದನ್ನು ತಳ್ಳಿ ಬೇಲಿ ದಾಟಿ ಬರುವ ಜ್ಞಾನ ಅದಕ್ಕಿದೆ. ಪಕ್ಕದಲ್ಲಿ ಮರ ಸಿಗದಿದ್ದಾಗ ಬೇರೆ ಕಡೆಯಿಂದ ಟೊಂಗೆಯೊಂದನ್ನು ತಂದು ಬೇಲಿಯ ಮೇಲೆಸೆದು ಬೇಲಿಯನ್ನು ನಿಷ್ಕ್ರಿಯಗೊಳಿಸಿ ಬರುವ ಆನೆಗಳಿವೆ !! – ಪ್ರಸಾದ್ ರಕ್ಷಿದಿ
ಈಗ ಸರ್ಕಾರಗಳು ಏನು ಮಾಡುತ್ತಿವೆ? ಸರ್ಕಾರ ನಡೆಸುವವವರಲ್ಲಿ ಹೆಚ್ಚಿನವರಿಗೆ ಪರಿಸರದ ಬಗ್ಗೆ ಜ್ಞಾನ ಮತ್ತು ಅಧ್ಯಯನದ ಕೊರತೆ ಇದೆ. ನಮ್ಮಲ್ಲಿ ಯಾವುದೇ ಆಡಳಿತಾತ್ಮಕ ನಿರ್ಧಾರಗಳು ತಜ್ಞರ ಸಲಹೆ ಮತ್ತು ಮಾರ್ಗದರ್ಶನದ ಬದಲಿಗೆ ಆಳುವವರ ಅಂದರೆ ಇಂದಿನ ಸಂದರ್ಭದಲ್ಲಿ ಬೃಹತ್ ಉದ್ಯಮಿಗಳ ಅನುಕೂಲಕ್ಕೆ ತಕ್ಕಂತೆ ಇರುತ್ತವೆ. ಅದಕ್ಕೆ ಬೇಕಾದಂತೆ “ತಜ್ಞರ ವರದಿ” ಯನ್ನು ಸೃಷ್ಟಿಸುವ ಕೆಲಸ ನಡೆಯುತ್ತದೆ. ದೇಶದ ಆಗು ಹೋಗುಗಳನ್ನು ನಿರ್ಧರಿಸುವ ರಾಜಕೀಯ ಪಕ್ಷಗಳು ಕೂಡಾ ಇಂತಹ ವಿಚಾರಗಳಲ್ಲಿ ಉದ್ಯಮಿಗಳ ಎ. ಟೀಮ್, ಬಿ ಟೀಮ್ ಗಳಾಗಿ ವರ್ತಿಸುತ್ತಾರೆ. ನಾಡಿನಲ್ಲಿ ಜಾರಿಗೆ ಬಂದ ನೂರಾರು “ಅಭಿವೃದ್ಧಿ” ಯೋಜನೆಗಳೇ ಇದಕ್ಕೆ ಉದಾಹರಣೆ.
ಅಧಿಕಾರಶಾಹಿ ಕೂಡಾ ಇವರನ್ನೇ ಹಿಂಬಾಲಿಸುತ್ತಿದೆ. ಹೀಗಿದ್ದಾಗ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗಲಿ, ಅಥವಾ ಪರಿಸರಕ್ಕೆ ಸಂಬಂಧಿಸಿದಂತೆ ಏನೇ ಅನಾಹುತಗಳಾಗಲೀ, ಜನರ ಸಿಟ್ಟು ತಣಿಯುವಂತಹ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾರೆ.
ಪ್ರಾಣಿಗಳಿಂದ ಸಾವು ನೋವು ಸಂಭವಿಸಿದರೆ ತಕ್ಷಣ ಒಂದಷ್ಟು ಪರಿಹಾರ ನೀಡುವುದು, ನಿರಂತರವಾಗಿ ಆನೆಗಳ ಸ್ಥಳಾಂತರದ ಮತ್ತು ಶಾಶ್ವತ ಪರಿಹಾರ ಕಂಡು ಹಿಡಿಯುವ ಮಾತು ಆಡುತ್ತಲೇ ಇರುವುದು. ಇಂತವನ್ನು ಮಾಡುತ್ತಲೇ ಇರುತ್ತಾರೆ.
ಈಗ ಆನೆಗಳಿಂದ ಹಾನಿಯಾಗುತ್ತಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆಯಲ್ಲಿ ಒಂದು ಕಾರ್ಯ ಪಡೆ ರಚಿಸಿದ್ದಾರೆ, ಹಾಗೆಯೇ ಆನೆಗಳ ಸಂಚಾರ ಮತ್ತು ಉಪಟಳ ಇರುವ ಪ್ರದೇಶದಲ್ಲಿ ಸಾಮಾಜಿಕ ಜಾಲಗಳಲ್ಲಿ ಮಾಹಿತಿ ನೀಡುವ ಗುಂಪುಗಳನ್ನು ರಚಿಸಲಾಗಿದೆ, ಆನೆಗಳನ್ನು ಗುಂಪುಗಳಾಗಿ ವಿಂಗಡಿಸಿ ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ನಿರಂತರವಾಗಿ ಆನೆಗಳ ಚಲನವಲನಗಳ ಮಾಹಿತಿಯನ್ನು ಜನರಿಗೆ ನೀಡಲಾಗುತ್ತಿದೆ. ಜೊತೆಗೆ ಜನರೂ ಈ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಖಂಡಿತ ಸಾಕಷ್ಟು ಅನುಕೂಲ ಆಗಿದೆ. ಹೇಗೆಂದರೆ ಆನೆಗಳಿಂದ ಆಗುತ್ತಿದ್ದ ಜೀವಹಾನಿಯ ಸಂದರ್ಭಗಳು ಕಡಿಮೆಯಾಗಿವೆ. ಆದರೆ ಬೆಳೆ ನಾಶ ಮತ್ತಿತರ ಉಪಟಳಗಳು? ಅವು ಹಾಗೇ ಮುಂದುವರಿದಿವೆ. ಮತ್ತು ಇನ್ನು ಕೆಲವು ಕ್ರಮಗಳಿಂದ ಆನೆಗಳು ಇನ್ನಷ್ಟು ತೊಂದರೆಗೊಳಗಾಗಿ ರೊಚ್ಚಿಗೆದ್ದಿವೆ.
ಅವುಗಳಲ್ಲಿ ಮೊದಲನೆಯದು, ಆನೆಗಳ ಇರವು ತಿಳಿಯುವುದರಿಂದ ಅಲ್ಲಿನ ಜನರು ಅವುಗಳನ್ನು ಹೇಗಾದರೂ ಮಾಡಿ ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಾರೆ, ಇದರಲ್ಲಿ ಬೆಂಕಿ ಹಚ್ಚುವುದೂ ಪಠಾಕಿ ಹೊಡೆಯುವುದೂ ಮುಂತಾದವು ಸೇರಿವೆ. ಇದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಯೂ ಸಹಕರಿಸುತ್ತಾರೆ. ಜೊತೆಯಲ್ಲಿ ಆನೆಗಳು ಆಹಾರ ಹುಡುಕಿ ಬರುವುದರಿಂದ ಆನೆಗಳ ಆಹಾರ ಸಿಗದಂತೆ ಮಾಡಲು, ಬೈನೆ, ಬಿದಿರು, ಬಾಳೆ, ಹಲಸಿನ ಕಾಯಿ ಮುಂತಾದವನ್ನು ಜನರು ನಾಶ ಮಾಡುತ್ತಿದ್ದಾರೆ, ಹೀಗೆ ಆಡುವಂತೆ ಅಲ್ಲಲ್ಲಿ ಬೋರ್ಡುಗಳನ್ನು ಕೂಡಾ ಹಾಕಲಾಗಿದೆ !! ಮೊದಲೇ ಆಹಾರವಿಲ್ಲದೆ ಕಂಗೆಟ್ಟಿರುವ ಆನೆಗಳು ಇನ್ನಷ್ಟು ಕಂಗಾಲಾಗಿ ಜನ ವಸತಿ ಪ್ರದೇಶಗಳಿಗೆ ನುಗ್ಗಿ ಆಹಾರವನ್ನು ಹುಡುಕುವುದೂ ಅಕ್ಕಿ, ಭತ್ತದ ಮೂಟೆಗಳನ್ನು ಎಳೆದು ತಿನ್ನುವುದೂ ನಡೆಯುತ್ತಿದೆ.
ಆನೆಗಳ ಗುಂಪುಗಳಿದ್ದಲ್ಲಿ ಅನೇಕ ದಿನಗಳ ಕಾಲ ಕೃಷಿ ಕೆಲಸ ಅಸಾಧ್ಯವಾಗುತ್ತದೆ. ಖಾಯಂ ಕೆಲಸಗಾರರಿರುವ ತೋಟಗಳಲ್ಲಿ ಈ ರೀತಿ ನೂರಾರು ಮಾನವ ದಿನಗಳ ನಷ್ಟವಾಗುತ್ತಿದೆ. ಅಲ್ಲದೆ ಅನಿವಾರ್ಯವಾಗಿ ಕೆಲಸಗಾರರನ್ನು ಸಾಕುವ ಜವಾಬ್ದಾರಿ ಕೃಷಿಕನ ಮೇಲೇ ಬೀಳುತ್ತದೆ. ಹೀಗಾಗಿ ಅನೇಕ ಕಡೆಗಳಲ್ಲಿ ಖಾಯಂ ಕೆಲಸಗಾರರನ್ನೇ ನೇಮಿಸಿಕೊಳ್ಳುತ್ತಿಲ್ಲ. ಅನೇಕ ಸಣ್ಣ ಸಣ್ಣ ಕೃಷಿಕರ ತೋಟಗಳು ಸಂಪೂರ್ಣ ನಾಶವಾಗಿವೆ.
ಕೆಳ ಹಂತದ ಅರಣ್ಯ ಇಲಾಖೆಯ ಸಿಬ್ಬಂದಿ ಪಾಡೂ ಇದಕ್ಕಿಂತ ಭಿನ್ನವಲ್ಲ. ಸಾರ್ವಜನಿಕರ ಸಿಟ್ಟಿಗೆ ನಿರಂತರ ಗುರಿಯಾಗುವವರೂ ಇವರೇ. ಹಗಲು ರಾತ್ರಿಯೆನ್ನದೆ ಇವರಿಗೆ ಫೋನ್ ಕರೆಗಳು ಬರುತ್ತವೆ, ಆನೆಗಳು ಇಂತಲ್ಲಿ ಬಂದಿವೆ ಬನ್ನಿ ಎಂದು ಜನರು ಕರೆಯುತ್ತಾರೆ, ಅಧಿಕಾರಿಗಳಿಗೆ ದೂರು ಕೊಡುತ್ತಾರೆ. ಅವರಾದರೂ ತಮಗೆ ತೋಚಿದ್ದನ್ನು ಮಾಡುತ್ತಾರೆ. ಆನಂತರ ಸದ್ಯಕ್ಕೆ ಆನೆಗಳನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಾರೆ. ಸಮಸ್ಯೆ ಪಕ್ಕದ ಊರಿಗೆ ವರ್ಗಾವಣೆಯಾಗುತ್ತದೆ.
ಇತ್ತೀಚೆಗೆ ಸರ್ಕಾರ ಆನೆಗಳ ಹಾವಳಿ ತಡೆಯಲು ಕೃಷಿಕರಿಗೆ ಸೌರವಿದ್ಯುತ್ ಬೇಲಿ ಮಾಡಲು ಹೇಳುತ್ತಿದೆ. ಹಲವಾರು ಕಡೆಗಳಲ್ಲಿ ಈಗಾಗಲೇ ಸೌರ ವಿದ್ಯುತ್ ಬೇಲಿ ನಿರ್ಮಾಣ ಆಗಿದೆ. ಬೀಡಾಡಿ ದನಗಳು ಮತ್ತು ಇತರ ಕೆಲವು ಪ್ರಾಣಿಗಳ ತಡೆಗೆ ಇವು ಬಹಳ ಪರಿಣಾಮಕಾರಿ. ಆದರೆ ಆನೆಗಳಿಗೆ ಈ ಬೇಲಿಯನ್ನು ನಿಷ್ಕ್ರಿಯ ಗೊಳಿಸುವ ವಿಧಾನ ತಿಳಿದಿದೆ. ವಿದ್ಯುತ್ ಬೇಲಿಯ ಮೇಲೆ ಪಕ್ಕದಲ್ಲಿರುವ ಸಣ್ಣ ಮರವೊಂದನ್ನು ತಳ್ಳಿ ಬೇಲಿ ದಾಟಿ ಬರುವ ಜ್ಞಾನ ಅದಕ್ಕಿದೆ. ಪಕ್ಕದಲ್ಲಿ ಮರ ಸಿಗದಿದ್ದಾಗ ಬೇರೆ ಕಡೆಯಿಂದ ಟೊಂಗೆಯೊಂದನ್ನು ತಂದು ಬೇಲಿಯ ಮೇಲೆಸೆದು ಬೇಲಿಯನ್ನು ನಿಷ್ಕ್ರಿಯಗೊಳಿಸಿ ಬರುವ ಆನೆಗಳಿವೆ !!
ಆದರೂ ಈ ವಿದ್ಯುತ್ ಬೇಲಿ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂದೇ ಹೇಳಬಹುದು. ಈ ಬೇಲಿ ಇರುವ ತೋಟಗಳಲ್ಲಿ ಜನರು ಭಯವಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬೆಳೆ ನಾಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಆನೆ ಮತ್ತಿತರ ಪ್ರಾಣಿಗಳ ಸಂಚಾರದ ಪ್ರದೇಶ ಮತ್ತು ಆಹಾರ ಲಭ್ಯತೆ ಇನ್ನಷ್ಟು ಕಡಿಮೆಯಾಗಿದೆ. ಅವು ಹೊಸ ಹೊಸ ಜಾಗಗಳನ್ನು ಹುಡುಕುತ್ತ ಅಂಡಲೆಯುತ್ತವೆ. ನಾವು ಸಮಸ್ಯೆಗಳಿಂದ ಸಮಸ್ಯೆಗಳತ್ತ ಸಾಗಿದ್ದೇವೆ.
ಪ್ರಸಾದ್ ರಕ್ಷಿದಿ
ಪರಿಸರ ಬರಹಗಾರರು
ಇದನ್ನೂ ಓದಿ- ಮುಚ್ಚಿದ ಆನೆ ದಾರಿ | ದಿಕ್ಕೆಟ್ಟ ಆನೆಗಳು