ಎರಡು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣನ ಹೇಳಿಕೆಯ ವಿಡಿಯೋ ಬಂದ ಜಾಡನ್ನು ಹುಡುಕುವಾಗ ಹುಟ್ಟಿದ ಅನೇಕ ಪ್ರಶ್ನೆಗಳ ಹಿಂದೆ ನ್ಯೂಸ್ ರೂಂಗಳು ಇಂತಹ ಒಂದು ಗಂಭೀರ ಪ್ರಕರಣದ ದಾರಿ ತಪ್ಪಿಸುತ್ತಿರುವ ಸ್ಪಷ್ಟತೆ ಹೊರಬಿದ್ದಿದೆ. ಅಷ್ಟಕ್ಕೂ ಎಲ್ಲಿಯೂ ಸಿಗದ ವಿಡಿಯೋ ಮತ್ತು ಆಡಿಯೋಗಳನ್ನು ಚಾನಲ್ ವರೆಗೂ ತಲುಪಿಸಿದ್ದು ಯಾರು? ಗೊತ್ತಾ? Exclusive ಮಾಹಿತಿ.. ತಪ್ಪದೇ ಓದಿ
ಪ್ರಜ್ವಲ್ ರೇವಣ್ಣ ಎಂಬ ವಿಕೃತ ಮನಸ್ಸಿನ ಸ್ತ್ರೀ ಪೀಡಕನ ಬಂಧನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅಧಿಕಾರ, ಅಂತಸ್ತು, ಕುಟುಂಬದ ಹಿನ್ನೆಲೆಯ ಅಹಮ್ಮಿಕೆಯಡಿಯಲ್ಲಿ ಅಸಂಖ್ಯಾತ ಹೆಣ್ಣು ಮಕ್ಕಳನ್ನು ವಿಡಿಯೋ ಮೂಲಕ ಮಾನಹರಣ ಮಾಡಿದ ಫ್ಯೂಡಲ್ ಮನಸ್ಥಿತಿಯ, ಗೌಡಿಕೆಯ ಸೊಕ್ಕಿನ ಮೂಟೆ, ಹೊರ ಪ್ರಪಂಚಕ್ಕೆ ತನ್ನ ಬೆತ್ತಲು ಹೊರ ಬಿದ್ದ ತಕ್ಷಣವೇ ದೇಶ ಬಿಟ್ಟು ಓಡಿ ಹೋಗಿ ಇಡೀ ದೇಶ, ರಾಜ್ಯ, ಹಾಸನ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದು ಇನ್ನು ಶತಮಾನಗಳು ಉರುಳಿದರೂ ಇಲ್ಲಿನ ಜನ ಮರೆಯಲಾರರು.
ನಾಗರೀಕರು ಮಾತನಾಡಲೂ ಮುಜುಗರಕ್ಕೆ ಬೀಳುವ ಇಂತಹ ಅನಿಷ್ಠ ಕಾರ್ಯ ಯಾರೂ ಸಹ ಊಹಿಸಿರಲಾರರು. ಏನೋ ಹನಿಟ್ರಾಪ್ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ಬಂದು ಹೋದರೂ ಅದು ಕೆಲವು ತಿಂಗಳಲ್ಲಿ ಜನರ ಬಾಯಿಂದ ಮರೆಯಾಗಿ ಹೋಗುವಂತದ್ದು. ಅದು ಜಸ್ಟ್ ಹನಿಟ್ರಾಪ್ ಅಷ್ಟೆ. ಆದರೆ ಪಕ್ಷದ ಮಹಿಳಾ ಮುಖಂಡರು, ಮಹಿಳಾ ಕಾರ್ಯಕರ್ತರು, ಸರ್ಕಾರಿ ಮಹಿಳಾ ಅಧಿಕಾರಿಗಳು, ಕಷ್ಟ ಹೇಳಿಕೊಂಡು ಬಂದ ಜನಸಾಮಾನ್ಯ ಹೆಣ್ಣು ಮಕ್ಕಳು, ಕೊನೆ ಕೊನೆಗೆ ಕೈ ಮುಗಿದು ಬೇಡಿಕೊಂಡ ಮನೆ ಕೆಲಸದಾಕೆಯನ್ನೂ ಬಿಡದೇ ಪೀಡಿಸಿದ, ತನ್ನ ಲೈಂಗಿಕ ತೃಷೆಗೆ ವಿಡಿಯೋ ಮೂಲಕ ಬೆತ್ತಲಾಗಿಸಿದ್ದು ಸೆಲ್ಫ್ ಟ್ರಾಪ್ ಅಲ್ಲದೇ ಬೇರಿನ್ನೇನು?
ಇಂತಹದ್ದೊಂದು ಅತಿ ದೊಡ್ಡ ದೌರ್ಜನ್ಯದ ಕರ್ಮಕಾಂಡ ಹೊರ ಬಿದ್ದರೂ ಒಬ್ಬ ನೈಜ ಅಪರಾಧಿಯನ್ನ, ಫ್ಯೂಡಲ್ ಕುಟುಂಬವನ್ನು ಹೊರ ಪ್ರಪಂಚಕ್ಕೆ ಅಮಾಯಕರಂತೆ, ಇವರೇ ನೈಜ ಸಂತ್ರಸ್ತರಂತೆ ತೋರಿಸುತ್ತಿರುವುದರಲ್ಲಿ ನಾಡಿನ ಅಪಾಯಕಾರಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಪ್ರಜ್ವಲ್ ರೇವಣ್ಣನ ವಿಕೃತಿಯ ಬಗ್ಗೆ ಇಡೀ ಕುಟುಂಬಕ್ಕೇ ಗೊತ್ತಿದ್ದರೂ ಅದನ್ನು ಕಿಂಚಿತ್ ವಿರೋಧಿಸದೇ ಪೋಷಿಸಿಕೊಂಡು ಬಂದ ಕುಟುಂಬವೊಂದು ಮುಂದೆ ಇಂತಹದ್ದೊಂದು ಅನಾಹುತ ಘಟಿಸಬಹುದೆಂದು ಊಹಿಸಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಗೊತ್ತಿದ್ದೂ ಆದ ತಪ್ಪಿಗೆ ಕುಟುಂಬವೂ ಹೊಣೆ ಆಗಬೇಕು. ಹೀಗಿರುವಾಗ ಮಾಧ್ಯಮಗಳು ಮಾತ್ರ ಬಹು ದೊಡ್ಡ ಗೇಮ್ ಪ್ಲಾನ್ ನ್ನು ಇಲ್ಲಿ ನಡೆಸುತ್ತಿವೆ ಎಂಬುದು ಸ್ಪಷ್ಟ.
ಕಳೆದೆರಡು ದಿನಗಳ ಹಿಂದೆ 30 ದಿನಗಳಿಂದ ತಲೆಮರೆಸಿಕೊಂಡಿದ್ದ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನ ವಿಡಿಯೋ ಒಂದು ಮಾಧ್ಯಮಗಳ ಮೂಲಕ ಹೊರ ಬಿದ್ದಿತ್ತು. ಇದನ್ನು ಮೊಟ್ಟ ಮೊದಲು “ಬ್ರೇಕ್” ಮಾಡಿದ್ದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಒಡೆತನದ ಏಷಿಯಾನೆಟ್ ಸುವರ್ಣ ನ್ಯೂಸ್. ಸತತ 40 ನಿಮಿಷಗಳ ಕಾಲ ಈ ವಿಡಿಯೋ ಇಟ್ಟು ಬ್ರೇಕಿಂಗ್ ಹೊಡೆದ ನಂತರ, ಮೀಡಿಯಾ ಗ್ರೂಪ್ ಗಳಲ್ಲಿ ಈ ವಿಡಿಯೋ ಓಡಾಡಿ ಉಳಿದೆಲ್ಲಾ ಚಾನಲ್ ಗಳ ಕೈ ಸೇರಿದೆ. ಆ ನಲವತ್ತು ನಿಮಿಷಗಳ ಕಾಲ ಎಲ್ಲಾ ಚಾನಲ್ ಗಳ ನ್ಯೂಸ್ ರೂಂ ಗಳು ಇರೋ ಬರೋ ಸೋಷಿಯಲ್ ಮೀಡಿಯಾವನ್ನು ತಡಕಾಡಿದ್ದೇ ಬಂತು.
ಆದರೆ ಮೊಟ್ಟ ಮೊದಲು ಸುವರ್ಣ ನ್ಯೂಸ್ ಗೆ ಈ ವಿಡಿಯೋ ಕ್ಲಿಪ್ಸ್ ತಲುಪಿಸಿದ ಮಹಾನುಭಾವ ಯಾರು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಪ್ರಕರಣದ ತನಿಖೆ ವಹಿಸಿಕೊಂಡಿರುವ ಎಸ್‌ಐಟಿ ಕೂಡ ವಿಡಿಯೋ ಮೂಲದ ಜಾಲ ಜಾಲಾಡಲು ಪ್ರಯತ್ನಿಸಿದರೂ ಸುವರ್ಣ ನ್ಯೂಸ್ ತನ್ನ ಸೋರ್ಸ್ ಬಿಟ್ಟು ಕೊಡದಿರುವುದು ಮೊಟ್ಟ ಮೊದಲು ಮಾಧ್ಯಮಗಳು ಈ ಪ್ರಕರಣವನ್ನು ಸಂಪೂರ್ಣ ಹಿಡಿತಕ್ಕೆ ತಡೆದುಕೊಳ್ಳುವ ಹಂತಕ್ಕೆ ಬಂದದ್ದು ಸ್ಪಷ್ಟವಾಗಿದೆ.
ಈಗಾಗಲೇ ಎಸ್ಐಟಿ ಇದರ ಜಾಡನ್ನು ಬೆನ್ನತ್ತಿದರೂ ಸುವರ್ಣ ನ್ಯೂಸ್ ನಮ್ಮ ಸೋರ್ಸ್ ಬಿಟ್ಟು ಕೊಡುವುದಿಲ್ಲ ಎಂದು ಎಸ್‌ಐಟಿ ಗೆ ನೇರವಾಗಿ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಈಗ ಸುವರ್ಣ ನ್ಯೂಸ್ ಗೆ ನೋಟೀಸ್ ಜಾರಿ ಮಾಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಇದು ಒಂದು ಅಂಶವಾದರೆ ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎಂದು ಗುರುತಿಸಿದ ಮಹಿಳೆಯೊಬ್ಬರು ವಿಡಿಯೋ ಮುಂದೆ ಮಾತನಾಡಿದ್ದು ವೈರಲ್ ಆಗಿತ್ತು. ಮಾಧ್ಯಮಗಳನ್ನು ಹೊರತುಪಡಿಸಿ ಸಂತ್ರಸ್ತೆ ಮಾತನಾಡಿದ ವಿಡಿಯೋ ಆಕೆಯ ಮುಖ ಕೂಡ ಬ್ಲರ್ ಮಾಡದೇ ವಾಟ್ಸಪ್ ಮೂಲಕ ಓಡಾಡಿತ್ತು. ಮಾಧ್ಯಮಗಳೇನೋ ಮುಖ ಬ್ಲರ್ ಮಾಡಿ ವಿಡಿಯೋ ಹಾಕಿದ್ದಾರೆ. ಆಕೆಯೂ ಅದೇನೇ ಮಾತನಾಡಿರಬಹುದು, ಅದಿಲ್ಲಿ ಅಸಂಬದ್ಧ. ಆದರೆ ಆ ವಿಡಿಯೋ ನ್ಯೂಸ್ ಚಾನಲ್ ವರೆಗೂ ತಲುಪಿಸಿದ ಸೋರ್ಸ್ ಯಾವುದು?
ಸಂತ್ರಸ್ತೆ ಮಾತನಾಡಿದ ವಿಡಿಯೋ ಮೊದಲು ಓಡಾಡಿದ್ದು ಕನ್ನಡದ ‘ವಿಸ್ತಾರ’ ಸುದ್ದಿ ವಾಹಿನಿಯಲ್ಲಿ. ಅಲ್ಲೂ ಸಹ ಈ ವಿಡಿಯೋ ತಲುಪಿಸಿದ ಮೂಲ ಕೆದಕಿದಾಗ ಎಸ್‌ಐಟಿಗೆ ಸಿಕ್ಕ ಮಾಹಿತಿ ಕೇವಲ ಶೂನ್ಯ. ಅಂದ್ರೆ ಎಸ್ಐಟಿಗೂ ಸಿಗದ ಮಾಹಿತಿಗಳು ನ್ಯೂಸ್ ರೂಂ ಗಳನ್ನು ತಲುಪುತ್ತಿರುವ ಬಗೆ ಹೇಗೆ.? ಎಸ್ಐಟಿ ಕೂಡ ಇದರ ಮೂಲ ಜಾಡನ್ನು ಹುಡುಕುವ ಬಗೆಯಲ್ಲಿ ತಲೆ ಕೆಡಿಸಿಕೊಂಡಿದೆ. ಯಾರ ಮೂಲಕ ಈ ವಿಡಿಯೋ ತಲುಪಿದೆ, ವಾಟ್ಸಪ್ ಮೂಲಕವೋ? ವಾಟ್ಸಪ್ ಮೂಲ ಎಂಬುದನ್ನು ತನಿಖೆಗೆ ಬಿಟ್ಟರೆ ಪ್ರಕರಣದ ಅಸಲಿ ಕಿಂಗ್ ಪಿನ್ ಹೊರ ಬರುತ್ತಾನೆ. ಆದರೆ ಮಾಧ್ಯಮಗಳು ತನಿಖಾ ತಂಡಕ್ಕೆ ಸಹಕರಿಸುತ್ತಿಲ್ಲ ಎಂಬುದು ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿದೆ.
ಇಷ್ಟೆಲ್ಲ ಹೇಳಿದ ಮೇಲೆ ಈ ಪ್ರಕರಣದಲ್ಲಿ ಬಹು ದೊಡ್ಡ ಪಾತ್ರವಾಗಿ ಮುಂಚಿನಿಂದಲೂ ತೋರಿಸಿಕೊಂಡು ಬಂದ ‘ಪವರ್ ಟಿವಿ’ ಕೂಡ ಹಲವು ಮಾಹಿತಿಗಳನ್ನು ಗೌಪ್ಯವಾಗಿಯೇ ಮುನ್ನಡೆಸಿಕೊಂಡು ಬಂದಿದೆ. ಪ್ರಕರಣದ ಶುರುವಿನಿಂದಲೂ ಅನೇಕ ಮಾಹಿತಿಗಳನ್ನು ‘ಬ್ರೇಕ್’ ಮಾಡಿದ ‘ಪವರ್ ಟಿವಿ’ಗೆ ಸಿಕ್ಕ ಹಲವಷ್ಟು ಮಾಹಿತಿಗಳ ಬಗ್ಗೆ ಇನ್ನೂ ಸಹ ಎಸ್‌ಐಟಿ ಮುಂದೆ ಬಾಯಿ ಬಿಟ್ಟಿಲ್ಲ. ಅದು ವಕೀಲ ದೇವರಾಜೇ ಗೌಡನ ಅಶ್ಲೀಲ ವಿಡಿಯೋ ಫೋನ್ ಟ್ರಾಪ್ ವಿಚಾರ ಆಗಿರಬಹುದು, ಪ್ರಜ್ವಲ್ ರೇವಣ್ಣನ ಬಗೆಗಿನ ಪ್ರಮುಖ ‘ಬ್ರೇಕಿಂಗ್’ ಗಳ ಬಗ್ಗೆಯಾಗಿರಬಹುದು. ಈವರೆಗೂ ಸುದ್ದಿ ಮಾಧ್ಯಮಗಳು ತಮಗೆ ಸಿಕ್ಕ ಮಾಹಿತಿಯ ಬಗ್ಗೆ ಎಸ್ಐಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ಕಾರಣಕ್ಕೆ ಈಗ ಎಸ್‌ಐಟಿ ಅಧಿಕಾರಿಗಳು ಪವರ್ ಟಿವಿ, ಸುವರ್ಣ ನ್ಯೂಸ್ ಮತ್ತು ವಿಸ್ತಾರ ನ್ಯೂಸ್ ಗೆ ಪ್ರಮುಖ ಸಾಕ್ಷ್ಯಗಳಾಗಿ ನೋಟೀಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಬೇರೆಲ್ಲಾ ಸಾಕ್ಷ್ಯಗಳಿಗಿಂತ ಅತಿ ದೊಡ್ಡ ದೊಡ್ಡ ಸಾಕ್ಷ್ಯಗಳನ್ನು ಇಟ್ಟುಕೊಂಡಿರುವ ಮಾಧ್ಯಮಗಳೇ ತನಿಖೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವುದಾದರೆ ತನಿಖೆ ಒಂದು ತಾರ್ಕಿಕ ಅಂತ್ಯ ತಲುಪುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ನಡುವೆ ಮಾಧ್ಯಮಗಳು ಮತ್ತು ಜೆಡಿಎಸ್ ಪಕ್ಷ ಎರಡೂ ಸೇರಿಕೊಂಡು, ಆರೋಪಿ ಕುಟುಂಬವೊಂದನ್ನು, ಸಂತ್ರಸ್ತ ಕುಟುಂಬವಾಗಿ, ಸರ್ಕಾರವನ್ನೇ ಅಪರಾಧಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಹೀಗಾದರೆ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎನ್ನಲಾದೀತೇ?
ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇನ್ನಿಲ್ಲದಂತೆ ಗೇಮ್ ಪ್ಲಾನ್ ರೂಪಿಸಿದಂತಿದೆ. ದಿನಕ್ಕೊಂದರಂತೆ ಸರಣಿ ಪತ್ರಿಕಾಗೋಷ್ಠಿ ನಡೆಸಿ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ. ಒಂದು ಪ್ರಭಾವಿ ಕುಟುಂಬದ ಮಗನಾಗಿ, ಮಾಜಿ ಪ್ರಧಾನಿ, ಮಾಜಿ ಸಿಎಂ, ಹಾಲಿ ಶಾಸಕರು, ಹಾಲಿ ಪರಿಷತ್ ಸದಸ್ಯರಿರುವ ಕುಟುಂಬ ಹಿನ್ನೆಲೆಯ ವ್ಯಕ್ತಿ 30 ದಿನಗಳ ಕಾಲ ತನ್ನ ಕುಟುಂಬದ ಸಂಪರ್ಕವೇ ಇಲ್ಲದಿರಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಎಸ್‌ಐಟಿ ತನಿಖೆಗೆ ಒಡ್ಡಿಕೊಳ್ಳಲಿಲ್ಲವೋ ಅಥವಾ ಆ ಒಂದು ಕುಟುಂಬ ಅಥವಾ ಕಾಣದ ಕೈಗಳು ತನಿಖಾ ತಂಡ ಎಸ್‌ಐಟಿಯನ್ನು ನಿಯಂತ್ರಿಸುತ್ತಿವೆಯೋ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಇನ್ನೊಂದು ಕಡೆ ಯಾರಿಗೂ ಸಿಗದ ಮಹತ್ವದ ದಾಖಲೆಗಳು ಮಾಧ್ಯಮಗಳ ಕೈ ಸೇರುವ ಮೂಲ ಯಾವುದು.? ಎಲ್ಲಿಂದ ಈ ವಿಡಿಯೋಗಳು ಹೊರಬರುತ್ತಿವೆ? ಸಿಕ್ಕ ದಾಖಲೆಗಳ್ಯಾವವೂ ನಿರ್ಲಕ್ಷಿಸುವಂತದ್ದು ಅಲ್ಲವೇ ಅಲ್ಲ. ಎಲ್ಲೋ ಜರ್ಮನಿಯ ಮೂಲೆಯಲ್ಲಿ ಕೂತ ಪ್ರಜ್ವಲ್ ರೇವಣ್ಣ ಮಾಡಿ ಕಳಿಸಿದ ವಿಡಿಯೋ, ಸಂತ್ರಸ್ತೆಯೊಬ್ಬಳು ಅಪರಾಧಿ ಕುಟುಂಬವೊಂದನ್ನು ಅಮಾಯಕರು ಎಂದು ಹೇಳುವ ವಿಡಿಯೋ ಮಾಡಿಸಿದವರು, ತಲುಪಿಸಿದವರ ಜಾಡು ಹಿಡಿದರೆ ನೂರಕ್ಕೆ ನೂರರಷ್ಟು ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಹೇಳಬಹುದು. ಅಥವಾ ಎಸ್‌ಐಟಿ ಮೇಲೆ ನಂಬಿಕೆಯೂ ಮಾಡಬಹುದು.
ಬಹುತೇಕ ವಿಚಾರ ಗೊತ್ತಿರುವ ಮಾಧ್ಯಮಗಳೇ ಮುಂದೆ ಪ್ರಜ್ವಲ್ ರೇವಣ್ಣನಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ಅಮಾಯಕ, ಸಂತ್ರಸ್ತನನ್ನಾಗಿ ಬಿಂಬಿಸುವ ಕಾಲವೂ ದೂರವಿಲ್ಲ. ನಾಗರೀಕ ಸಮಾಜ ಮಾಧ್ಯಮಗಳಲ್ಲಿ ಬಂದದ್ದನ್ನೇ ಸತ್ಯ ಎಂದು ನೋಡದೇ, ಅವರನ್ನೇ ಸಾಕ್ಷ್ಯಗಳನ್ನಾಗಿ ನೋಡಬೇಕಿದೆ. ಈಗಾಗಲೇ ಎಸ್ಐಟಿ, ಮೇಲೆ ಉಲ್ಲೇಖಿಸಿದ ಮೂರೂ ಮಾಧ್ಯಮ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ. ಸಾಕ್ಷ್ಯ ಅಂದಮೇಲೆ ಅವರನ್ನು ಬಂಧಿಸುವಂತಿಲ್ಲ. ಆದರೆ ಸಾಕ್ಷ್ಯ ಇಟ್ಟುಕೊಂಡಿರುವ ಮಾಧ್ಯಮಗಳು ತನಿಖೆಗೆ ಸ್ಪಂದಿಸಬೇಕಷ್ಟೆ.