ಬೆಂಗಳೂರು: ಶಾಸಕ ಎಂ.ಪಿ. ರೇಣುಕಾಚಾರ್ಯರವರ ಸಹೋದರನ ಪುತ್ರ ಚಂದ್ರಶೇಖರ್ ಸಾವು ಅನುಮಾನಸ್ಪದವಾಗಿ ಕಂಡುಬರುತ್ತಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯರವರು, ಶಾಸಕ ರೇಣುಕಾಚಾರ್ಯ ಅವರ ಸೋದರನ ಮಗನ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಮೃತ ಚಂದ್ರಶೇಖರ್ ಅವರ ತಂದೆ-ತಾಯಿ ಮತ್ತು ಸಂಬಂಧಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ತಿಳಿಸಿದ್ದಾರೆ.
ಚಂದ್ರಶೇಖರ್ ಅವರ ಸಾವು ಅನುಮಾನಾಸ್ಪದವಾಗಿ ಕಾಣುತ್ತಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶಾಸಕ ಎಂ.ಪಿ. ರೇಣುಕಾಚಾರ್ಯರವರ ಸಹೋದರನ ಮಗ ಚಂದ್ರಶೇಖರ್ 5 ದಿನಗಳಿಂದ ನಾಪತ್ತೆಯಾಗಿದ್ದರು. ಬಳಿಕ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗ ಮಧ್ಯೆ ಇರುವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಅವರ ಕಾರು ಪತ್ತೆಯಾಗಿತ್ತು. ನಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕಾರಿನ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ.

ಈ ಕಾರಣ ಮೃತ ಚಂದ್ರಶೇಖರ್ ಅವರ ಸಾವು ಅನುಮಾನಸ್ಪದವಾಗಿದ್ದು, ಆಕಸ್ಮಿಕವಾಗಿರಲು ಸಾಧ್ಯವಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.