Home ದೇಶ ಲೈಂಗಿಕ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ಉತ್ತರಪ್ರದೇಶ ಕೋರ್ಟ್

ಲೈಂಗಿಕ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ಉತ್ತರಪ್ರದೇಶ ಕೋರ್ಟ್

0

ಪ್ರತಾಪಘಡ (ಉತ್ತರಪ್ರದೇಶ): ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಲೈಂಗಿಕ ಅಪರಾಧ ಎಸಗಿದ ಇಬ್ಬರಿಗೆ ಮರಣದಂಡನೆ ವಿಧಿಸಿರುವ ಇಲ್ಲಿನ ನ್ಯಾಯಾಲಯವು, ವಿಪರ್ಯಾಸದ ವಿಷಯವೇನೆಂದರೆ ಹೆಣ್ಣನ್ನು ದೇವತೆಯರೆಂದು ಪೂಜಿಸುವ ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಹೇಗೆ ಭೋಗದ ವಸ್ತುವಾಗಿ ನೋಡುತ್ತಿದೆ ಎಂದು ಹೇಳಿದೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ ಕಾಯ್ದೆಯಡಿ ಸಾಮೂಹಿಕ ಲೈಂಗಿಕ ಅಪರಾಧ, ಅಪಹರಣ, ಕೊಲೆ ಯತ್ನ ಮತ್ತು ಇತರ ಹಲವು ಸೆಕ್ಷನ್‌ಗಳ ಅಪರಾಧಗಳಿಗಾಗಿ ದಾಖಲಾದ ಪ್ರಕರಣಗಳ ಕುರಿತು ನ್ಯಾಯಾಲಯ ಈ ತೀರ್ಪು ನೀಡಿದೆ.

ಡಿಸೆಂಬರ್ 2021 ರಲ್ಲಿ, ಮೂವರು ಆರೋಪಿಗಳು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಹತ್ತಿರದ ರೈಲು ಮಾರ್ಗಕ್ಕೆ ಕರೆದೊಯ್ದು, ಆಕೆಯ ಮೇಲೆ ಸಾಮೂಹಿಕ ಲೈಂಗಿಕ ಅಪರಾಧ ಎಸಗಿದ್ದರು. ಗಂಭೀರ ಸ್ವರೂಪದ ಗಾಯಗಳೊಂದಿಗೆ ಸಂತ್ರಸ್ಥೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರ ಪೈಕಿ ಒಬ್ಬ ಅಪ್ರಾಪ್ತ ಬಾಲಕನೂ ಇದ್ದ.

ಈ ಅಪರಾಧವು ‘ಅಪರೂಪದಲ್ಲಿ ಅಪರೂಪ’ ವರ್ಗಕ್ಕೆ ಸೇರಿದೆ, ಯಾಕೆಂದರೆ ಅಪರಾಧಿಗಳು ಸಂತ್ರಸ್ತೆಯ ಮುಖವನ್ನು ಸಂಪೂರ್ಣವಾಗಿ ವಿರೂಪಗೊಳಿಸಿದ್ದಾರೆ ಮತ್ತು ಇತರ ದೈಹಿಕ ಗಾಯಗಳನ್ನು ಮಾಡಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಮರಣದಂಡನೆ ವಿಧಿಸಲು ಕಾರಣವಾದ ಅಂಶಗಳ ಕುರಿತು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಪಂಕಜ್ ಕುಮಾರ್ ಶ್ರೀವಾಸ್ತವ ಅವರು ತಮ್ಮ ತೀರ್ಪಿನಲ್ಲಿ “ನಮ್ಮ ದೇಶದಲ್ಲಿ ಶಕ್ತಿಗಾಗಿ ದುರ್ಗೆಯನ್ನು, ಸಂಪತ್ತಿಗೆ ಲಕ್ಷ್ಮಿಯನ್ನು, ಜ್ಞಾನಕ್ಕಾಗಿ  ಸರಸ್ವತಿಯನ್ನು ಪೂಜಿಸುತ್ತೇವೆ ಮತ್ತು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತೇವೆ,  ನಾವು ಮಹಿಳೆಯರನ್ನು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲ ಹುದ್ದೆಗಳಿಗೆ ಏರಿಸಿದ್ದೇವೆ, ವಿಪರ್ಯಾಸವೆಂದರೆ ಇದೇ ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಇಂತಹ ಘೋರ ಮತ್ತು ಕ್ರೂರ ಸಾಮೂಹಿಕ ಲೈಂಗಿಕ ಅಪರಾಧವು ಇಡೀ ಸಮಾಜದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತದೆ.

ಅಪ್ರಾಪ್ತ ಮಕ್ಕಳನ್ನೂ ಸಹ ತಮ್ಮ ಭೋಗದ ವಸ್ತುವನ್ನಾಗಿ ಮಾಡಿಕೊಂಡಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಆರೋಪಿಗಳು ಸಂತ್ರಸ್ತೆಯ ಮೇಲೆ ಸಾಮೂಹಿಕ ಲೈಂಗಿಕ ಅಪರಾಧ ಎಸಗಿದ್ದು ಮಾತ್ರವಲ್ಲದೆ ಎಡಗಣ್ಣನ್ನು ಕುರುಡಾಗಿಸಿ ಆಕೆಯ ಮುಖವನ್ನು ಹಾಳು ಮಾಡಿದ್ದಾರೆ. ಜನರು ತಮ್ಮ ಜೀವನದಲ್ಲಿ ಒಮ್ಮೆ ಸಾಯುತ್ತಾರೆ ಆದರ ಈ ಅಮಾಯಕ ಸಂತ್ರಸ್ಥೆ ಸಾವಿರಾರು, ಮಿಲಿಯನ್ ಬಾರಿ ಸಾಯುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಾಮಾಯಣದಲ್ಲಿ ಸೀತೆಗೆ ತನ್ನ ಪಾತಿವ್ರತ್ಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಹೇಳಲಾಯಿತು.ಈ ಪ್ರಕರಣದ ಸಂತ್ರಸ್ತೆಯನ್ನೂ ನಮ್ಮ ಸಮಾಜ ಪ್ರತಿದಿನವೂ ಇದೇ ರೀತಿಯ ಪರೀಕ್ಷೆಗೆ ಒಳಪಡಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಸಂತ್ರಸ್ಥೆ ಘಟನೆಯನ್ನು ಮರೆಯಲು ಯತ್ನಿಸಬೇಕು. “ಹೇಡಿತನದ” ಆತ್ಮಹತ್ಯೆಗೆ ಪ್ರಯತ್ನಿಸಬಾರದು ಎಂದು ವಿನಂತಿಸಿದರು.

ಉತ್ತರ ಪ್ರದೇಶ ರಾಣಿ ಲಕ್ಷ್ಮೀಬಾಯಿ ಮಹಿಳಾ ಸಮ್ಮಾನ್ ಕೋಶ್ ಯೋಜನೆಯಡಿ ನಿಯಮಗಳ ಪ್ರಕಾರ ಸಂತ್ರಸ್ತರಿಗೆ ಆರ್ಥಿಕ ಪರಿಹಾರವನ್ನು ಪಾವತಿಸಲಾಗಿದೆಯೇ ಎಂದು ಒಂದು ತಿಂಗಳೊಳಗೆ ತಿಳಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ.

You cannot copy content of this page

Exit mobile version