ಕೇರಳದ ನರ್ಸ್ ನಿಮಿಷ ಪ್ರಿಯಾ ಅವರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಅವರ ಮರಣದಂಡನೆಯನ್ನು ರದ್ದುಪಡಿಸಲು ಯೆಮೆನ್ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಭಾರತದ ಗ್ರ್ಯಾಂಡ್ ಮುಫ್ತಿ, ಸುನ್ನಿ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಪ್ರಕಟಣೆ ಹೊರಡಿಸಿದೆ. ಅಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮರಣದಂಡನೆ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ. ಆದರೆ, ಭಾರತೀಯ ವಿದೇಶಾಂಗ ಇಲಾಖೆಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಈ ಹಿಂದೆ ಮುಂದೂಡಲ್ಪಟ್ಟಿದ್ದ ನಿಮಿಷ ಪ್ರಿಯಾ ಅವರ ಮರಣದಂಡನೆಯನ್ನು ಈಗ ರದ್ದುಗೊಳಿಸಲಾಗಿದೆ. ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮರಣದಂಡನೆಯನ್ನು ಶಾಶ್ವತವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಅಬೂಬಕರ್ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ, ಇದಕ್ಕೆ ಸಂಬಂಧಿಸಿದಂತೆ ಯೆಮೆನ್ ಸರ್ಕಾರದಿಂದ ಇದುವರೆಗೆ ಯಾವುದೇ ಲಿಖಿತ ಆದೇಶ ಹೊರಬಿದ್ದಿಲ್ಲ ಮತ್ತು ಇದನ್ನು ದೃಢೀಕರಿಸಿ ಭಾರತೀಯ ವಿದೇಶಾಂಗ ಇಲಾಖೆಯು ಸಹ ಇದುವರೆಗೆ ಯಾವುದೇ ಪ್ರಕಟಣೆ ನೀಡಿಲ್ಲ ಎಂದು ಹೇಳಿದೆ. ಈ ಅತ್ಯುನ್ನತ ಸಭೆಯಲ್ಲಿ ಉತ್ತರ ಯೆಮೆನ್ ಅಧಿಕಾರಿಗಳು ಮತ್ತು ಅಂತರಾಷ್ಟ್ರೀಯ ರಾಜತಾಂತ್ರಿಕ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿಮಿಷ ಪ್ರಿಯಾ ಅವರ ಮರಣದಂಡನೆ ರದ್ದುಗೊಳಿಸಲು ಭಾರತದ ಗ್ರ್ಯಾಂಡ್ ಮುಫ್ತಿ ಅವರ ಮನವಿಯ ಮೇರೆಗೆ ಯೆಮೆನ್‌ನ ಪ್ರಮುಖ ಸೂಫಿ ವಿದ್ವಾಂಸರಾದ ಶೇಖ್ ಹಬೀಬ್ ಒಮರ್ ಬಿನ್ ಹಫೀಜ್ ಅವರು ಮಾತುಕತೆಗಾಗಿ ಒಂದು ತಂಡವನ್ನು ನೇಮಿಸಿದ್ದರು. ಮತ್ತೊಂದೆಡೆ, ಅಬೂಬಕರ್ ಮುಸ್ಲಿಯಾರ್ ಉತ್ತರ ಯೆಮೆನ್ ಸರ್ಕಾರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು. ಇದರಿಂದ ಮಾತುಕತೆ ಫಲಪ್ರದವಾಗಿದ್ದು, ಅವರ ಮರಣದಂಡನೆ ರದ್ದುಗೊಳಿಸಲು ಯೆಮೆನ್ ಒಪ್ಪಿಕೊಂಡಿದೆ ಎಂದು ಮುಫ್ತಿ ಕಚೇರಿ ತಿಳಿಸಿದೆ.
ಯೆಮೆನ್ ಪ್ರಜೆಯಾದ ಮಹಾದ್ ಹತ್ಯೆ ಪ್ರಕರಣದಲ್ಲಿ ನಿಮಿಷ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿತ್ತು. ಮಹಾದ್‌ನೊಂದಿಗೆ ಅವರು ವ್ಯಾಪಾರ ಮಾಡುತ್ತಿದ್ದರು. ಆದರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಮತ್ತು ಅವರು ತಮ್ಮ ಪಾಸ್‌ಪೋರ್ಟ್‌ಗಾಗಿ ಕೇಳಿದ್ದರು. ಆದರೆ, ಪಾಸ್‌ಪೋರ್ಟ್ ನೀಡಲು ಮಹಾದ್ ನಿರಾಕರಿಸಿದ್ದರಿಂದ, ನಿಮಿಷ ಅವರಿಗೆ ನಿದ್ರೆ ಮಾತ್ರೆ ನೀಡಿ ಪಾಸ್‌ಪೋರ್ಟ್ ತೆಗೆದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಡೋಸ್ ಹೆಚ್ಚಾದ ಕಾರಣ ಮಹಾದ್ ಸಾವನ್ನಪ್ಪಿದರು.
ಆ ಬಳಿಕ ಯೆಮೆನ್ ಪೊಲೀಸರು ನಿಮಿಷ ಅವರನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದರು. ಅವರಿಗೆ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಈ ಶಿಕ್ಷೆಯನ್ನು ಉನ್ನತ ನ್ಯಾಯಾಲಯವು ಎತ್ತಿಹಿಡಿದಿತ್ತು. ಇದರಿಂದ ಜುಲೈ 16 ರಂದು ನಿಮಿಷ ಅವರಿಗೆ ಮರಣದಂಡನೆ ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು. ನಿಮಿಷ ಅವರಿಗೆ ಶಿಕ್ಷೆಯನ್ನು ತಪ್ಪಿಸಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದ್ದ ಭಾರತ ಸರ್ಕಾರ, ತಾನು ಇನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿತ್ತು. ಜುಲೈ 16 ರಂದು ಜಾರಿಗೊಳಿಸಬೇಕಿದ್ದ ಮರಣದಂಡನೆಯು ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿತ್ತು.