ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ್’ ಕುರಿತು ಸೋಮವಾರ ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಪ್ರಶ್ನೆಗಳ ಸುರಿಮಳೆಗೈದವು. “‘ಆಪರೇಷನ್ ಸಿಂಧೂರ್’ನಲ್ಲಿ ಎಷ್ಟು ಭಾರತೀಯ ಯುದ್ಧ ವಿಮಾನಗಳು ನಾಶವಾದವು? ಪ್ರಧಾನಿ ಮೋದಿ ಯಾರಿಗೆ ಶರಣಾದರು?” ಎಂದು ಪ್ರಶ್ನಿಸಿದವು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಭದ್ರತಾ ಲೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದವು.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಚರ್ಚೆಯಲ್ಲಿ ಭಾಗವಹಿಸಿ, “ತಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಈಗಲ್ಲದೆ ಬೇರೆ ಯಾವಾಗ ಮರಳಿ ಪಡೆಯಲು ಏಕೆ ಯೋಚಿಸುತ್ತಿಲ್ಲ?” ಎಂದು ಪ್ರಶ್ನಿಸಿದರು. ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ವ್ಯಾಪಾರವನ್ನು ಅಸ್ತ್ರವಾಗಿ ಬಳಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ 26 ಬಾರಿ ಹೇಳಿದ್ದಾರೆ ಎಂದು ಅವರು ನೆನಪಿಸಿದರು. ಐದರಿಂದ ಆರು ಯುದ್ಧ ವಿಮಾನಗಳು ನಾಶವಾಗಿದ್ದು, ಅವುಗಳಲ್ಲಿ ಒಂದರ ಮೌಲ್ಯ ಕೋಟಿಗಟ್ಟಲೆ ಎಂದು ಹೇಳಿದ್ದಾರೆ. “ಅದಕ್ಕಾಗಿಯೇ ನಾವು ರಕ್ಷಣಾ ಮಂತ್ರಿಯನ್ನು ಕೇಳುತ್ತಿದ್ದೇವೆ, ಎಷ್ಟು ಯುದ್ಧ ವಿಮಾನಗಳು ನಾಶವಾಗಿವೆ ಎಂದು ಉತ್ತರ ನೀಡಬೇಕು” ಎಂದರು. “ಭಾರತದ ಮುಂದೆ ಪಾಕ್ ಮೊಣಕಾಲು ಹಾಕಲು ಸಿದ್ಧವಾಗಿದ್ದಿದ್ದರೆ, ನೀವು ಏಕೆ ನಿಲ್ಲಿಸಿದಿರಿ? ನೀವು ಯಾರ ಮುಂದೆ ಶರಣಾದಿರಿ?” ಎಂದು ಪ್ರಶ್ನಿಸಿದರು.
ಶತಕದ ಸಮೀಪವಿರುವಾಗಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು!
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಾತನಾಡಿ, ಇಡೀ ದೇಶವು ಪ್ರಧಾನಿ ಮೋದಿಗೆ ಬೆಂಬಲವಾಗಿ ನಿಂತಾಗ ‘ಆಪರೇಷನ್ ಸಿಂಧೂರ್’ ಅನ್ನು ನಿಲ್ಲಿಸಿದ್ದು, ಶತಕದ ಸಮೀಪವಿರುವ ಆಟಗಾರ ಇನ್ನಿಂಗ್ಸ್ ಡಿಕ್ಲೇರ್ ಮಾಡಿದಂತೆ ಎಂದು ಆಕ್ಷೇಪಿಸಿದರು. ಟ್ರಂಪ್ ಮುಂದೆ ಮೋದಿಯವರ ಘನತೆ ಕುಗ್ಗಿದೆ ಮತ್ತು ಮೋದಿಯವರ 56 ಇಂಚಿನ ಎದೆ 36 ಇಂಚಿಗೆ ಕುಗ್ಗಿದೆ ಎಂದು ವ್ಯಂಗ್ಯವಾಡಿದರು.
ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಮಾತನಾಡಿ, ಕದನ ವಿರಾಮಕ್ಕಾಗಿ ಮೊಣಕಾಲು ಊರಿದ ಪಾಕಿಸ್ತಾನಕ್ಕೆ ಯಾವುದೇ ಷರತ್ತುಗಳನ್ನು ವಿಧಿಸದೆ ಆಪರೇಷನ್ ಸಿಂಧೂರ್ ಅನ್ನು ಏಕೆ ನಿಲ್ಲಿಸಲಾಯಿತು ಎಂದು ಪ್ರಶ್ನಿಸಿದರು. ಪಿಒಕೆ ವಶಪಡಿಸಿಕೊಳ್ಳುವುದನ್ನು ತಡೆಯಲು ಯಾರು ಯತ್ನಿಸಿದರು ಎಂದು ಪ್ರಶ್ನಿಸಿದರು. ಸಮಾಜವಾದಿ ಪಕ್ಷದ ಸಂಸದ ರಾಮಶಂಕರ್ ರಾಜ್ಭರ್ ಈ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದ ಭಯೋತ್ಪಾದಕರನ್ನು ‘ರೋಸ್ಟ್’ ಮಾಡಲು ‘ಆಪರೇಷನ್ ತಂದೂರ್’ ಬೇಕೇ ಹೊರತು ‘ಆಪರೇಷನ್ ಸಿಂಧೂರ್’ ಅಲ್ಲ ಎಂದರು.
ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತೊಗೆಯಲು ಯಾವುದೇ ಹಂತಕ್ಕೂ: ರಾಜನಾಥ್ ಸಿಂಗ್
‘ಆಪರೇಷನ್ ಸಿಂಧೂರ್’ ಕುರಿತು ಲೋಕಸಭೆಯಲ್ಲಿ ವಿಶೇಷ ಚರ್ಚೆಯನ್ನು ಸೋಮವಾರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಪ್ರಾರಂಭಿಸಿದರು. ‘ಆಪರೇಷನ್ ಸಿಂಧೂರ್’ ಅನ್ನು ಪ್ರಸ್ತುತ ವಿರಾಮಗೊಳಿಸಲಾಗಿದೆ ಎಂದು ಅವರು ಹೇಳಿದರು. ನಮ್ಮ ರಕ್ಷಣಾ ಪಡೆಗಳು ಬಯಸಿದ ಗುರಿಗಳನ್ನು ಸಾಧಿಸಿವೆ ಎಂದು ತಿಳಿಸಿದರು. ಈ ಮಿಲಿಟರಿ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡುವವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದರು.
ಶತ್ರುಗಳು ತಮ್ಮ ತಂತ್ರದ ಭಾಗವಾಗಿ ಭಯೋತ್ಪಾದನೆಯನ್ನು ಬಳಸಿದರೆ, ಶಾಂತಿಯುತ ಭಾಷೆಯನ್ನು ಅರ್ಥಮಾಡಿಕೊಳ್ಳದಿದ್ದರೆ, ಭಾರತವು ಬಲವಾಗಿ ನಿಲ್ಲುತ್ತದೆ ಮತ್ತು ನಿರ್ಣಾಯಕವಾಗಿ ವರ್ತಿಸುವುದು ಒಂದೇ ಮಾರ್ಗ ಎಂದು ಸ್ಪಷ್ಟಪಡಿಸಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿ, ಅಮೆರಿಕದೊಂದಿಗೆ ನಡೆದ ಚರ್ಚೆಗಳಲ್ಲಿ ಯಾವುದೇ ಹಂತದಲ್ಲೂ ‘ಆಪರೇಷನ್ ಸಿಂಧೂರ್’ಗೆ ವಾಣಿಜ್ಯದೊಂದಿಗೆ ಸಂಬಂಧವಿರಲಿಲ್ಲ ಎಂದು ಹೇಳಿದರು. ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಪಾಕಿಸ್ತಾನದಿಂದ ಡಿಜಿಎಂಒ ಚಾನಲ್ ಮೂಲಕ ಮನವಿ ಬಂದಿದೆ ಎಂದು ತಿಳಿಸಿದರು.
ಟ್ರಂಪ್ ಮತ್ತೊಮ್ಮೆ!
ತಾನು ಸಕಾಲದಲ್ಲಿ ಮಧ್ಯಪ್ರವೇಶಿಸದೇ ಇದ್ದಿದ್ದರೆ, ಭಾರತ ಮತ್ತು ಪಾಕ್ ಇನ್ನೂ ಯುದ್ಧ ಮಾಡುತ್ತಲೇ ಇರುತ್ತಿದ್ದವು ಎಂದು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ಎಲ್ಲಾ ರೀತಿಯ ವಾಣಿಜ್ಯ ಮಾತುಕತೆಗಳನ್ನು ನಿಲ್ಲಿಸುವುದಾಗಿ ತಾನು ಬೆದರಿಕೆ ಹಾಕಿದ್ದೆ ಎಂದರು. ಬ್ರಿಟಿಷ್ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರೊಂದಿಗೆ ಸ್ಕಾಟ್‌ಲ್ಯಾಂಡ್‌ನಲ್ಲಿ ಮಾಧ್ಯಮಗಳೊಂದಿಗೆ ಟ್ರಂಪ್ ಮಾತನಾಡಿದರು.