ಮತದಾರರ ನೋಂದಣಿಗಾಗಿ ಆಧಾರ್ ಮತ್ತು ಎಲೆಕ್ಟರ್ಸ್ ಫೋಟೋ ಐಡೆಂಟಿಟಿ ಕಾರ್ಡ್ (EPIC) ಗಳನ್ನು ನಿರ್ಣಾಯಕ ಗುರುತಿನ ಪುರಾವೆಗಳಾಗಿ ಚುನಾವಣಾ ಆಯೋಗ (EC) ಅನುಮತಿಸದಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ಆಧಾರ್ ಅನ್ನು ಏಕೆ ಗುರುತಿನ ಚೀಟಿಯಾಗಿ ಪರಿಗಣಿಸುತ್ತಿಲ್ಲ? ಎಲ್ಲ ಕಾರ್ಡನ್ನು ಸಹ ಫೋರ್ಜರಿ ಮಾಡುತ್ತಾರೆ ತಾನೇ?” ಎಂದು ನ್ಯಾಯಾಲಯ ಪ್ರಶ್ನಿಸಿತು.
ವಿಚಾರಣೆ ವೇಳೆ, ಚುನಾವಣಾ ಆಯೋಗದ ವಕೀಲರು, “ಆಧಾರ್ ದೇಶದ ಪೌರತ್ವಕ್ಕೆ ಗುರುತು ಅಲ್ಲ” ಎಂದು ವಾದಿಸಿದರು. “ರೇಷನ್ ಮತ್ತು ಆಧಾರ್ ಕಾರ್ಡ್‌ಗಳ ಫೋರ್ಜರಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಮೇಲಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿತು.
ಆಧಾರ್, ರೇಷನ್ ಕಾರ್ಡ್ ಜೊತೆಗೆ, ಚುನಾವಣಾ ಆಯೋಗ ಸ್ವತಃ ನೀಡಿದ ಗುರುತಿನ ಚೀಟಿಯನ್ನೂ ಪ್ರಾಥಮಿಕ ದಾಖಲೆಗಳಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಸೂಚಿಸಿತು. ಒಬ್ಬ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ, ಆ ವ್ಯಕ್ತಿ ಏನು ಮಾಡಬೇಕು ಮತ್ತು ಚುನಾವಣಾ ಆಯೋಗ ಏನು ಮಾಡುತ್ತದೆ ಎಂಬುದರ ಕಾಲಮಿತಿಯ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಆದೇಶಿಸಿತು.