ಬೆಂಗಳೂರು: ಆನ್ಲೈನ್ ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆಗಳ ಬಗ್ಗೆ ನವೆಂಬರ್ 25 ರೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದು, ಸೇವಾ ಪೂರೈಕೆದಾರರ ಅರ್ಜಿಗಳನ್ನು ಪರಿಗಣಿಸಲಾಗಿರುವುದರಿಂದ ನಿರ್ಧಾರ ಬಾಕಿ ಇದೆ ಎಂದು ಸರ್ಕಾರ ತಿಳಿಸಿದೆ.
2016 ರಲ್ಲಿ ಕರ್ನಾಟಕ ಆನ್-ಡಿಮ್ಯಾಂಡ್ ಟ್ರಾನ್ಸ್ಪೋರ್ಟ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಗಳ ಅಡಿಯಲ್ಲಿ ಒಳಪಡದ ಕಾರಣ ಆಟೋ ಸೇವೆಗಳನ್ನು ನಿಲ್ಲಿಸುವಂತೆ ಸಾರಿಗೆ ಇಲಾಖೆ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಈ ಕುರಿತಾಗಿ ನೀಡಲಾದ ಪರವಾನಗಿಗಳು ಕ್ಯಾಬ್- ಬಾಡಿಗೆ ಸೇವೆಗಳಿಗೆ ಮಾತ್ರ ಎಂದು ಇಲಾಖೆ ಹೇಳಿದೆ.
ಈ ಕಾರಣ ಸೇವಾ ಪೂರೈಕೆದಾರರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು, ಹೀಗಾಗಿ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಎಲ್ಲಾ ಮಧ್ಯಸ್ಥಗಾರರೊಂದಿಗೆ ಮಾತನಾಡಿದ ನಂತರ ನೀಡಬೇಕಾದ ಪರವಾನಗಿಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವವರೆಗೆ ಸೇವೆಗಳನ್ನು ಮುಂದುವರಿಸಲು ಹೈಕೋರ್ಟ್ ಅವಕಾಶ ನೀಡಿತ್ತು.
ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವವರೆಗೆ ಸೇವಾ ಪೂರೈಕೆದಾರರು ಕೋರಿರುವ ದರಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸದಂತೆ ಸರ್ಕಾರವು ನ್ಯಾಯಾಲಯಕ್ಕೆ ವಿನಂತಿಸಿತ್ತು. ಹೀಗಾಗಿ ದರವನ್ನು ನವೆಂಬರ್ 25 ರೊಳಗೆ ನಿರ್ಧರಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಸಲ್ಲಿಕೆಗಳನ್ನು ದಾಖಲಿಸಿದ ನಂತರ ಹೈಕೋರ್ಟ್ ವಿಚಾರಣೆಯನ್ನು ನವೆಂಬರ್ 28 ಕ್ಕೆ ಮುಂದೂಡಿದೆ.