Home ಬ್ರೇಕಿಂಗ್ ಸುದ್ದಿ ಹಾಸನವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ – ಶಾಸಕ ಸ್ವರೂಪ್ ಪ್ರಕಾಶ್

ಹಾಸನವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ – ಶಾಸಕ ಸ್ವರೂಪ್ ಪ್ರಕಾಶ್

ಹಾಸನ: ಈ ವರ್ಷ ಹಾಸನ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಾಸನ ತಾಲೂಕು ಹಾಗೂ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಒತ್ತಾಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಭತ್ತ, ರಾಗಿ, ಜೋಳ, ಆಲೂಗಡ್ಡೆ, ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಅದರಲ್ಲೂ ಹಾಸನ ತಾಲೂಕಿನಲ್ಲಿ ಆಲೂಗಡ್ಡೆ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚಿದ್ದು, ಈ ಬಾರಿ ಅಲ್ಪ ಮಳೆಯ ಪರಿಣಾಮ ಬೆಳೆಗಳು ತೀವ್ರ ಹಾನಿಗೊಳಗಾಗಿವೆ. ಸರ್ಕಾರ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಆಲೂಗಡ್ಡೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಅಂಗಮಾರಿ ರೋಗದ ಕಾರಣದಿಂದ ರೈತರು ಅದರ ಬಿತ್ತನೆಯನ್ನು ಕಡಿಮೆ ಮಾಡಿ ಮೆಕ್ಕೆಜೋಳ ಬೆಳೆಗೆ ಹೆಚ್ಚಿನ ಒತ್ತು ನೀಡಿದ್ದರು. ಆದರೆ ಇದೀಗ ಮೆಕ್ಕೆಜೋಳಕ್ಕೂ ಬಿಳಿ ಸುಳಿ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಬೆಳೆ ಸಂಪೂರ್ಣವಾಗಿ ಹಾಳಾಗುತ್ತಿದೆ. ಪರಿಣಾಮವಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು ನೆಲಕಚ್ಚಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಮಳೆಯ ಕೊರತೆ ಹಾಗೂ ಬೆಳೆ ಹಾನಿಯನ್ನು ಆಧರಿಸಿ ಹಾಸನ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಅಲ್ಲದೆ ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ಘೋಷಿಸಿ ಜಿಲ್ಲೆಯ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

You cannot copy content of this page

Exit mobile version