ಬಸ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ, ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇರಳ ಪೊಲೀಸರು ಶಿಮ್ಜಿತಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬುಧವಾರ ವಡಕರದಿಂದ ಕೋಳಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಶಿಮ್ಜಿತಾ ಅವರನ್ನು ಬಂಧಿಸಿದರು.1 ವೈದ್ಯಕೀಯ ತಪಾಸಣೆಯ ನಂತರ, ಕುನ್ನಮಂಗಲಂನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.
ಕೋಳಿಕ್ಕೋಡ್‌ನ 42 ವರ್ಷದ ದೀಪಕ್ ಯು. ಅವರು ಜವಳಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಅವರು ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್‌ನಲ್ಲಿದ್ದ ಶಿಮ್ಜಿತಾ, ದೀಪಕ್ ಅವರು ಉದ್ದೇಶಪೂರ್ವಕವಾಗಿ ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು. ನ್ಯೂಸ್ ಮಿನಿಟ್ ವರದಿಯ ಪ್ರಕಾರ, ವಿಡಿಯೋದಲ್ಲಿ ದೀಪಕ್ ಅವರ ಮೊಣಕೈ ಆಕೆಯ ಎದೆಗೆ ತಾಗಿದಂತೆ ಕಂಡುಬಂದಿತ್ತು. ಇದು ಆಕಸ್ಮಿಕವಲ್ಲ, ಬದಲಿಗೆ ತಮ್ಮ ಲೈಂಗಿಕ ಇತಿಮಿತಿಗಳ ಉಲ್ಲಂಘನೆ ಎಂದು ಶಿಮ್ಜಿತಾ ಆರೋಪಿದ್ದರು.
ಈ ವಿಡಿಯೋ ವೈರಲ್ ಆದ ನಂತರ, ದೀಪಕ್ ತೀವ್ರ ಮಾನಸಿಕ ಸಂಕಟಕ್ಕೊಳಗಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಆರೋಪವನ್ನು ನಿರಾಕರಿಸಿದ್ದ ದೀಪಕ್, ಶಿಮ್ಜಿತಾ ವಿರುದ್ಧ ಕಾನೂನು ಹೋರಾಟ ನಡೆಸಲು ಯೋಚಿಸಿದ್ದರು ಎಂದು ವರದಿಯಾಗಿದೆ. ಆದರೆ, ಭಾನುವಾರ ಅವರು ಕೋಝಿಕ್ಕೋಡ್‌ನ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾದರು.
ಪೊಲೀಸರು ಶಿಮ್ಜಿತಾ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸ್ ಅಧಿಕಾರಿಗೆ ಸೇರಿದ ಖಾಸಗಿ ವಾಹನದಲ್ಲಿ ಶಿಮ್ಜಿತಾ ಅವರನ್ನು ರಹಸ್ಯವಾಗಿ ಬಂಧಿಸಿ ಕರೆತರಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
