ಹಾಸನ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಷ್ಟು ಕೆಟ್ಟ ಸರ್ಕಾರ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಚ್ಚಾಟದಲ್ಲಿ ಸರ್ಕಾರವು ರಾಜ್ಯದ ಜನರ ಹಿತವನ್ನೇ ಮರೆತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಜನವರಿ 24 ರಂದು ನಡೆಯಲಿರುವ ಜೆಡಿಎಸ್‌ನ ಜನತಾ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ರಾಜ್ಯದ 5 ಕಡೆ ಸಮಾವೇಶ ನಡೆಸಿ ‘ಅಹಿಂದ ಚಾಂಪಿಯನ್’ ಆಗಲು ಸಿದ್ದರಾಮಯ್ಯ ಹೊರಟಿದ್ದಾರೆ. ಆದರೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ 1.60 ಲಕ್ಷ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರಿಗೆ ಬೆದರಿಕೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಈ ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರದ ಆಡಳಿತ ವೈಖರಿ ಬಗ್ಗೆ ಚರ್ಚಿಸಲು ಅಸಹ್ಯವಾಗುತ್ತದೆ ಎಂದ ಕುಮಾರಸ್ವಾಮಿ, ಡಿಜಿಪಿ ರಾಮಚಂದ್ರರಾವ್ ಅವರ ಅನೈತಿಕ ಚಟುವಟಿಕೆ ಗೊತ್ತಾದ ತಕ್ಷಣ ಅವರನ್ನು ಅಮಾನತು ಮಾಡಬೇಕಿತ್ತು ಎಂದರು. “ಆ ಅಧಿಕಾರಿಯ ಅಕ್ರಮಗಳ ಬಗ್ಗೆ ನಾನು 2015-16ರಲ್ಲೇ ಪ್ರಸ್ತಾಪಿಸಿದ್ದೆ. ಅವರು ಮೈಸೂರಿನಲ್ಲಿ ಐಜಿಪಿ ಆಗಿದ್ದಾಗ ಚಿನ್ನದ ವ್ಯಾಪಾರಿಯಿಂದ 3 ಕೋಟಿ ರೂ. ಕಿತ್ತುಕೊಂಡು ಸಿಕ್ಕಿಬಿದ್ದಿದ್ದರು. ಆಗಲೂ ಸಿದ್ದರಾಮಯ್ಯ ಸರ್ಕಾರವೇ ಪ್ರಕರಣವನ್ನು ಮುಚ್ಚಿಹಾಕಿತ್ತು,” ಎಂದು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳ ಮೇಲೆಯೇ 89 ಕ್ರಿಮಿನಲ್ ಪ್ರಕರಣಗಳಿದ್ದು, ಇಂತಹ ಅಧಿಕಾರಿಗಳಿಂದ ಜನರಿಗೆ ರಕ್ಷಣೆ ಸಿಗಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
