ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನು ಮಿಕ್ಸರ್‌ನಲ್ಲಿ ₹ 69 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನವನ್ನು ಬಚ್ಚಿಟ್ಟಿದ್ದು, ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ
ಈ ಕುರಿತು ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ಐಜಿಐ ವಿಮಾನ ನಿಲ್ದಾಣದಲ್ಲಿ, ರಿಯಾದ್‌ದಿಂದ ದೆಹಲಿಗೆ ಬರುವ ವಿಮಾನದ( ವಿಮಾನ ಸಂಖ್ಯೆ XY 329) ಮೂಲಕ ಟರ್ಮಿನಲ್ -3 ಗೆ ಆಗಮಿಸಿದ ಭಾರತೀಯ ಪ್ರಯಾಣಿಕನೊಬ್ಬ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ಕಸ್ಟಮ್ಸ್ ಜಂಟಿ ಆಯುಕ್ತ ಪ್ರವೀಣ್ ಕುಮಾರ್ ಬಾಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಬಂಧಿತನು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದಂತೆ, ಆತನ ಬಳಿ ಏನೋ ಇರುವುದಾಗಿ ಸೆನ್ಸರ್ ಎಚ್ಚರವಹಿಸಿದೆ. ನಂತರ ಪೊಲೀಸರು ಆತನನ್ನು ತಡೆಯಿಡಿದ್ದಾರೆ. ಬಳಿಕ ಆತನ ಬ್ಯಾಗ್ ಅನ್ನು ಎಕ್ಸ್-ರೇ ಪರೀಕ್ಷೆಗೆ ಒಳಪಡಿಸಿದಾಗ ಮಿಕ್ಸರ್ನಲ್ಲಿ ಅನುಮಾನಾಸ್ಪದ ಚಿತ್ರ ಕಂಡುಬಂದಿದೆ. ನಂತರ ಮಿಕ್ಸರ್ ಕಳಚಿ ಪರಿಶೀಲನೆ ನಡೆಸಿದಾಗ ಒಟ್ಟು 1573 ಗ್ರಾಂ ತೂಕದ ಎರಡು ಸಿಲಿಂಡರಾಕಾರದ ಆಕಾರದ ಚಿನ್ನದ ಲೋಹದ ತುಂಡುಗಳು ಕಂಡುಬಂದಿವೆ. ಇದರ ಪರಿಣಾಮವಾಗಿ ಒಟ್ಟು ₹ 69,99,504 ಸುಂಕ ಮೌಲ್ಯವನ್ನು ಹೊಂದಿರುವ ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಶಪಡಿಸಿಕೊಳ್ಳಲಾದ ಚಿನ್ನವನ್ನು ಕಸ್ಟಮ್ಸ್ ಕಾಯ್ದೆ, 1962 ರ ಸೆಕ್ಷನ್ 110 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾದ್ದು, ಕಸ್ಟಮ್ಸ್ ಕಾಯ್ದೆ, 1962 ರ ಸೆಕ್ಷನ್ 104 ರ ಪ್ರಕಾರ ಶಂಕಿತ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.