Home ದೆಹಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ನ್ಯಾಯಾಲಯದಿಂದ ಜಾಮೀನು ಮಂಜೂರು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ನ್ಯಾಯಾಲಯದಿಂದ ಜಾಮೀನು ಮಂಜೂರು

0

ದೆಹಲಿ: ಎಐಎಡಿಎಂಕೆ (AIADMK) ಪಕ್ಷದ ‘ಎರಡು ಎಲೆ’ ಚುನಾವಣಾ ಚಿಹ್ನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ತಲಾ 5 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ಬಾಂಡ್ ಆಧಾರದ ಮೇಲೆ ಸುಕೇಶ್‌ಗೆ ಈ ಪರಿಹಾರ ನೀಡಿದ್ದಾರೆ. ಆದರೆ, ಇತರ ಹಲವು ಪ್ರಕರಣಗಳು ಬಾಕಿ ಇರುವುದರಿಂದ ಸುಕೇಶ್ ಸದ್ಯಕ್ಕೆ ಜೈಲಿನಲ್ಲೇ ಇರಬೇಕಾಗುತ್ತದೆ.

ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ಸಂವಿಧಾನದ ಆಶಯಗಳನ್ನು ಎತ್ತಿಹಿಡಿದರು. “ನಮ್ಮ ಸಂವಿಧಾನದಲ್ಲಿ ವೈಯಕ್ತಿಕ ಸ್ವಾತಂತ್ರ್ಯವು ಅತ್ಯಂತ ಪವಿತ್ರವಾದದ್ದು. ಆರ್ಥಿಕ ಅಪರಾಧ ಅಥವಾ ವಿಶೇಷ ಕಾಯ್ದೆಗಳ ನೆಪವೊಡ್ಡಿ ನ್ಯಾಯಾಲಯವು ಒಬ್ಬ ಆರೋಪಿಯ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ,” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದರೂ, ಪಿಎಂಎಲ್‌ಎ (PMLA) ರೀತಿಯ ವಿಶೇಷ ಕಾಯ್ದೆಯನ್ನು ಒಬ್ಬ ಆರೋಪಿಯ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಳಸಬಾರದು ಎಂದು ನ್ಯಾಯಾಲಯ ಹೇಳಿದೆ. “ಆರೋಪಿಯ ವಿರುದ್ಧ ಪ್ರಸ್ತುತ ಪ್ರಕರಣವೂ ಸೇರಿದಂತೆ ಒಟ್ಟು 31 ಪ್ರಕರಣಗಳಿದ್ದರೂ, ಪಿಎಂಎಲ್‌ಎ ಸೆಕ್ಷನ್ 4 ರ ಅಡಿಯಲ್ಲಿ ಸೂಚಿಸಲಾದ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ. ಅಲ್ಲದೆ, 31 ಪ್ರಕರಣಗಳ ಪೈಕಿ 26 ರಲ್ಲಿ ಅವರು ಈಗಾಗಲೇ ಜಾಮೀನು ಪಡೆದಿದ್ದಾರೆ. ಹೀಗಿರುವಾಗ ಅವರಿಗೆ ಜಾಮೀನು ನಿರಾಕರಿಸುವುದು ಸರಿಯಲ್ಲ” ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ಪ್ರಕರಣದ ವಿಚಾರಣೆಗೆ ತಡೆ ಇರುವುದರಿಂದ, ಆರೋಪಿಯು ವಿಚಾರಣೆ ನಡೆಯದೆಯೇ ಸುದೀರ್ಘ ಕಾಲ ಜೈಲಿನಲ್ಲಿ ಇರುವುದು ಸರಿಯಲ್ಲ ಎಂದು ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.

You cannot copy content of this page

Exit mobile version