ದೆಹಲಿ: ದೆಹಲಿ ಮದ್ಯ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಕೇಜ್ರಿವಾಲ್ ಅವರ ಜಾಮೀನು ವಿಚಾರ ಇಂದು ಮತ್ತೆ ವಿಚಾರಣೆಗೆ ಬರಲಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರೂಸ್ ಅವೆನ್ಯೂ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ್ದರೂ ಕೇಜ್ರಿವಾಲ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಇಡಿ ಅರ್ಜಿ ಸಲ್ಲಿಸಿದ ನಂತರ ರೋಸ್ ಅವೆನ್ಯೂ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ತೀರ್ಪನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ. ಈ ಕುರಿತ ಅಂತಿಮ ತೀರ್ಪನ್ನು ಇಂದು ಮಧ್ಯಾಹ್ನ ದೆಹಲಿ ಹೈಕೋರ್ಟ್ ಪ್ರಕಟಿಸಲಿದೆ. ವಿಚಾರಣಾ ನ್ಯಾಯಾಲಯವು ಈಗಾಗಲೇ ನೀಡಿರುವ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ವಿರೋಧಿಸಿ ಸಿಎಂ ಕೇಜ್ರಿವಾಲ್ ಭಾನುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಗೆ ಮಧ್ಯಪ್ರವೇಶಿಸುವುದಿಲ್ಲ ಮತ್ತು ಹೈಕೋರ್ಟ್ ಅಂತಿಮ ತೀರ್ಪು ನೀಡಿದ ನಂತರವೇ ವಿಚಾರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಲಾಯಿತು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಯಾವ ರೀತಿಯ ತೀರ್ಪು ನೀಡಲಿದೆ ಎಂಬ ಟೆನ್ಷನ್ ಎಎಪಿ ನಾಯಕರಲ್ಲಿ ಮೂಡಿದೆ.