ದೆಹಲಿ: ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೇವೆ ಮತ್ತು ವಿಜಿಲೆನ್ಸ್ ಇಲಾಖೆಗಳ ಉಸ್ತುವಾರಿ ಹೊತ್ತಿರುವ ಸೌರಭ್ ಭಾರದ್ವಾಜ್ ಅವರಿಂದ ಈ ಪದವಿಯನ್ನು ವಾಪಸ್ ಪಡೆಯಲಾಗಿದೆ.
ಈ ಇಲಾಖೆಗಳನ್ನು ಲೋಕೋಪಯೋಗಿ ಸಚಿವ ಅತಿಶಿ ಅವರಿಗೆ ವಹಿಸಲಾಗಿದೆ. ಸಿಎಂ ಕೇಜ್ರಿವಾಲ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರವನ್ನೂ ಕಳುಹಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಜೈಲಿಗೆ ಹೋದ ನಂತರ, ಅವರಿಗೆ ನೀಡಲಾದ ಇಲಾಖೆಗಳನ್ನು ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ವಹಿಸಲಾಯಿತು. ಕಳೆದ ಜೂನ್ ತಿಂಗಳಿನಲ್ಲಿ ಸಚಿವ ಅತಿಶಿ ಅವರಿಗೆ ಹೆಚ್ಚುವರಿಯಾಗಿ ಕಂದಾಯ, ಯೋಜನೆ ಮತ್ತು ಹಣಕಾಸು ಇಲಾಖೆಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಕಲ್ಕಿಜಿ ಕ್ಷೇತ್ರದಿಂದ ಗೆದ್ದಿರುವ ಅವರಿಗೆ 14 ಇಲಾಖೆಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತೀಚಿನ ನಿರ್ಧಾರದೊಂದಿಗೆ ಅತಿಶಿ ದೆಹಲಿ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
ದೆಹಲಿ ಸುಗ್ರೀವಾಜ್ಞೆ ಮಸೂದೆಯ ಅನುಮೋದನೆಯ ನಂತರ, ಸರ್ಕಾರವು ಭಾರದ್ವಾಜ್ ಅವರಿಂದ ಇಲಾಖೆಗಳನ್ನು ಹಿಂಪಡೆಯುವ ಮೂಲಕ ಬದಲಾವಣೆಗಳನ್ನು ಮಾಡಿತು. ದೆಹಲಿ ಸುಗ್ರೀವಾಜ್ಞೆ ಮಸೂದೆ ಅಂಗೀಕಾರದ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಿಲೆನ್ಸ್ ಮತ್ತು ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳ ವಿರುದ್ಧ ಗಂಭೀರ ಆರೋಪ ಮಾಡಿದರು. ಬಳಿಕ ಸಿಎಂ ಕೇಜ್ರಿವಾಲ್ ಈ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ. ಅತಿಶಿ ಮತ್ತು ಭಾರದ್ವಾಜ್ ಈ ವರ್ಷದ ಮಾರ್ಚ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.