Home Uncategorized ಏಕರೂಪ ನಾಗರಿಕ ಸಂಹಿತೆ (UCC): ಭಯದ ಬಲೆಯಲ್ಲಿ ಆದಿ ಸಮುದಾಯಗಳು

ಏಕರೂಪ ನಾಗರಿಕ ಸಂಹಿತೆ (UCC): ಭಯದ ಬಲೆಯಲ್ಲಿ ಆದಿ ಸಮುದಾಯಗಳು

0

ಲೋಕಸಭಾ ಚುನಾವಣೆ ಎದುರಾಗುತ್ತಿರುವಂತೆ ರಾಜಕೀಯ ಪಕ್ಷಗಳ ಮತ ಭೇಟೆಯ ಹೊಸ ಹೊಸ ಅವಿಷ್ಕಾರಗಳೂ ಬೆಳಕು ಕಾಣಲಾರಂಭಿಸಿವೆ. ಕೋಮು ಧ್ರುವೀಕರಣದ ಮೂಲಕವೇ ತನ್ನ ಮತಗಳ ಬುಟ್ಟಿಯನ್ನು ತುಂಬಿಸಿಕೊಳ್ಳುವ ಬಿಜೆಪಿ ಈ ಬಾರಿಯೂ ಹಿಂದೂ ಮತಗಳ ಕ್ರೋಢೀಕರಣಕ್ಕೆ ಅಗತ್ಯವಾಗಿರುವ ಹೊಸದೊಂದು ಯೋಚನೆಯೊಡನೆ ಕಣಕ್ಕಿಳಿದಿದೆ.

ಆ ಆಲೋಚನೆಯೇ ಏಕರೂಪ ನಾಗರಿಕ ಸಂಹಿತೆ. ಇದು ಮೇಲ್ನೋಟಕ್ಕೆ ದೇಶದ ಎಲ್ಲಾ ಜನರನ್ನು ಒಂದೇ ಕಾನೂನಿನಡಿ ತರುವ ಪ್ರಯತ್ನದಂತೆ ಕಂಡುಬಂದರೂ, ಇದರ ಬಲಿಪಶುಗಳಾಗಲಿರುವ ಜನರು ಅಲ್ಪಸಂಖ್ಯಾತರು, ಆದಿವಾಸಿಗಳಂತಹ ಅಂಚಿನ ಜನರೇ ಎನ್ನುವುದು ಕಣ್ಣಿಗೆ ಕಟ್ಟಿದಂತೆ ಕಾಣುವ ಸತ್ಯ.

ಬಿಜೆಪಿಗೆ ದೊಡ್ಡ ಮಟ್ಟ ಮಟ್ಟದ ವೋಟ್‌ ಬ್ಯಾಂಕ್‌ ಆಗಿ ಪರಿವರ್ತನೆಗೊಂಡಿರುವ ಆದಿವಾಸಿ ಜನರು ಈಗ ಬಿಜೆಪಿಯ ಈ ಹೊಸ ಆಲೋಚನೆಯಿಂದ ಕಂಗಾಲಾಗಿದ್ದಾರೆ. ಈ ಹೊಸ ಕಾನೂನು ತಮ್ಮ ವಿಶಿಷ್ಟ ಗುರುತು ಮತ್ತು ಹಕ್ಕುಗಳನ್ನು ಕಳೆದುಕೊಳ್ಳುವಂತೆ ಮಾಡಬಹುದೆನ್ನುವ ಕಳವಳದಲ್ಲಿದ್ದಾರೆ.

ದೇಶದ ಬಹುಸಂಖ್ಯಾತ ಜನರು ಈ ಕಾನೂನು ಮುಸ್ಲಿಂ ಸಮುದಾಯದ ಜನರ ವೈಯಕ್ತಿಕ ಕಾನೂನಿಗೆ ಮಣ್ಣು ಹಾಕಲಿದೆ ಎನ್ನುವ ಖುಷಿಯಲ್ಲಿದ್ದಾರೆ. ಆದರೆ ಅವರ ಕಾಲಿನಡಿಯ ಮಣ್ಣನ್ನು ಬಗೆದು ಮುಸ್ಲಿಮರ ಕುಣಿ ಮುಚ್ಚಲಾಗುತ್ತಿದೆಯೆನ್ನುವ ಸತ್ಯ ಬಹಳಷ್ಟು ಜನರಿಗೆ ಗೊತ್ತಿಲ್ಲ.

ಪ್ರಸ್ತುತ UCC ಮಸೂದೆಯ ಕರಡು ಲಭ್ಯವಿಲ್ಲವಾದರೂ, ಅದರ ಸುತ್ತಲಿನ ಚರ್ಚೆಗಳು ಈ ಕಾನೂನು ಆದಿವಾಸಿಗಳ ಬಹಳಷ್ಟು ಸವಲತ್ತುಗಳನ್ನು ಕಸಿದುಕೊಳ್ಳಲಿರುವುದು ನಿಜ

“ಭಾರತವು ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳುವವರೆಗೂ ಲಿಂಗ ಸಮಾನತೆ ಸಾಧ್ಯವಿಲ್ಲ” ಎನ್ನುವುದು ಬಿಜೆಪಿ ಅಭಿಪ್ರಾಯ. ಆದರೆ ಈ ಕಾನೂನಿನ ಬಲವಂತದ ಹೇರಿಕೆ ಬಲತ್ಕಾರದ UCC ಹೇರಿಕೆ ಸಮುದಾಯಗಳ ವಿಶಿಷ್ಟ ಗುರುತು ಮತ್ತು ಸಂಸ್ಕೃತಿಯನ್ನು ಕಸಿದುಕೊಳ್ಳುತ್ತದೆ ಎನ್ನುವುದು ವಿಮರ್ಶಕರ ಆರೋಪ.

ಪ್ರಸ್ತುತ ಕಾನೂನುಗಳ ಪ್ರಕಾರ ಆದಿವಾಸಿ ಗ್ರಾಮಗಳಲ್ಲಿ ಆದಿವಾಸಿಗಳಲ್ಲದವರಿಗೆ ಜಮೀನು ಖರೀದಿಸುವ ಹಕ್ಕಿಲ್ಲ. ಆದರೆ ಈ ಹೊಸ ಕಾನೂನು ಅದಕ್ಕೆ ಅನುವು ಮಾಡಿಕೊಡುತ್ತದೆ ಎನ್ನುವುದು ಈ ಕಾನೂನಿನ ವಿರುದ್ಧ ಹೋರಾಡುತ್ತಿರುವವರ ಕಳವಳ.

ಇದರಿಂದ ಆ ಸಮುದಾಯಗಳ ಸಂಸ್ಕೃತಿ ಮತ್ತು ಗುರುತುಗಳು ಅಳಿಸಿ ಹೋಗಬಹುದೆನ್ನುವ ಕಾಳಜಿ ಅವರನ್ನು ಕಾಡುತ್ತಿದೆ.

ಉದಾಹರಣೆಗೆ ಜಾರ್ಖಂಡ್‌ ರಾಜ್ಯದ ಜನಸಂಖ್ಯೆಯಲ್ಲಿ ಶೇಖಡಾ 72ರಷ್ಟು ಜನಸಂಖ್ಯೆ ಆದಿವಾಸಿ ಸಮುದಾಯಗಳಿಗೆ ಸೇರಿವೆ. ಈ ಸಮುದಾಯಗಳಿಗೆಂದೇ ಈ ರಾಜ್ಯದಲ್ಲಿ ಹಲವು ಕಾನೂನುಗಳಿವೆ. ಈ ಹೊಸ ಕಾನೂನು ಬಂದರೆ ಅವೆಲ್ಲವೂ ಅಸ್ತಿತ್ವ ಕಳೆದುಕೊಳ್ಳಲಿವೆ ಎನ್ನಲಾಗುತ್ತಿದೆ.

ಜಾರ್ಖಂಢ್‌ ರಾಜ್ಯದಲ್ಲಿಸ್ಥಳೀಯ ಜನರ ವ್ಯಾಜ್ಯಗಳನ್ನು ಪರಿಹರಿಸಲು ಸ್ಥಳೀಯ ಭಾಷೆಯಲ್ಲೇ ವ್ಯವಹರಿಸುವ, ಸ್ಥಳೀಯ ಮುಖಂಡರೇ ನ್ಯಾಯ ಹೇಳುವ ನ್ಯಾಯಾಲಯಗಳಿವೆ. ಇಲ್ಲಿ ಮೂರು ನ್ಯಾಯಾಧೀಶರಿದ್ದು ಒಬ್ಬರು ದೂರುದಾರನ ಪರವಾಗಿ, ಇನ್ನೊಬ್ಬರು ಪ್ರತಿವಾದಿಯ ಪರವಾಗಿ ಹಾಗೂ ಮತ್ತೊಬ್ಬರು ಸ್ಥಳೀಯ ಆಡಳಿತದ ಪರವಾಗಿ ಹಾಜರಿರುತ್ತಾರೆ. ಊರಿನ ಹಲವು ಸಮಸ್ಯೆಗಳು ಇಲ್ಲಿಯೇ ಪರಿಹಾರವಾಗುತ್ತವೆ. ಬಡ ಜನರಿಗೆ ಇದು ಕೋರ್ಟು ಕಚೇರಿಗಳ ಅಲೆದಾಟವಿಲ್ಲದೆ ಸುಲಭವಾಗಿ ನ್ಯಾಯ ದೊರಕಿಸಿ ಕೊಡುತ್ತಿವೆ. ಆದರೆ ಈ ಹೊಸ ಕಾನೂನು ಬಂದರೆ ಇಂತಹ ನ್ಯಾಯಾಲಯಗಳೂ ಮುಚ್ಚಿಹೋಗಿ ಈ ಜನರು ಕೊನೆಯಿಲ್ಲ ಕೋರ್ಟು ಕಚೇರಿ ವ್ಯವಹಾರಗಳಿಗೆ ಅಲೆಯಬೇಕಾಗುತ್ತದೆ.

ಬುಡಕಟ್ಟು ಜನರಿಗೆ ಸೇರಿದ ಭೂಮಿಯನ್ನು ಇತರರು ಖರೀದಿಸದ ಹಾಗೆ ಕಾಪಾಡುವ ಕಾನೂನುಗಳು ಜಾರ್ಖಂಡ್‌ ಮಾತ್ರವಲ್ಲದೆ, ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಜಾರಿಯಲ್ಲಿವೆ. ಮತ್ತು ಈ ಜನರ ಕೈಯಲ್ಲಿರುವ ಭೂಮಿಯನ್ನು ಕಸಿದುಕೊಳ್ಳಲು ಬಲಾಢ್ಯ ವರ್ಗಗಳು ಹಸಿದ ತೋಳಗಳಂತೆ ಕಾಯುತ್ತಿವೆ. ಈ ಕಾನೂನು ಅದಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆಯ ವಾಸನೆ ಈಗ ಹೋರಾಟಗಾರರ ಮೂಗಿಗೆ ಬಡಿಯುತ್ತಿದೆ.

ಈ ಕಾನೂನು ಜಾರಿಗೆ ಬಂದರೆ ದೇಶದ ಜನರೆಲ್ಲ ಒಂದಾಗುತ್ತಾರೆನ್ನುವುದು ಈ ಕಾನೂನಿನ ಸಮರ್ಥಕರ ವಾದವಾದರೂ ಬಿಜೆಪಿ ಎಂದೂ ಜನರನ್ನೆಲ್ಲ ಒಂದೇ ಎಂದು ಕಾಣುವ ಮನಸ್ಥಿತಿಯನ್ನು ಹೊಂದಿಲ್ಲ, ಅದು ತರುವ ಕಾನೂನು ಜನರನ್ನು ಒಂದೇ ಎಂದು ನೋಡುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುತ್ತಾರೆ ಮಾನವ ಹೋರಾಟಗಾರರು.

You cannot copy content of this page

Exit mobile version