Home ದೇಶ ದೆಹಲಿ ಜಂತರ್ ಮಂತರ್‌ನಲ್ಲಿ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ: ದೆಹಲಿ ಪೊಲೀಸರ ನಡೆಗೆ ಐಜೆಯು...

ದೆಹಲಿ ಜಂತರ್ ಮಂತರ್‌ನಲ್ಲಿ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ: ದೆಹಲಿ ಪೊಲೀಸರ ನಡೆಗೆ ಐಜೆಯು ತೀವ್ರ ಆಕ್ರೋಶ

0

ಚಂಡೀಗಢ: ನವದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ, ವಿಶೇಷವಾಗಿ ಮಹಿಳಾ ಪತ್ರಕರ್ತೆಯರ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಎಸಗಿರುವುದನ್ನು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ (ಐಜೆಯು – IJU) ತೀವ್ರವಾಗಿ ಖಂಡಿಸಿದೆ.

ಪ್ರತಿಭಟನಾ ಸ್ಥಳದಲ್ಲಿದ್ದ ಎಸಿಪಿ (ಸಹಾಯಕ ಪೊಲೀಸ್ ಕಮಿಷನರ್) ಶ್ರೇಣಿಯ ಹಿರಿಯ ಅಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳಾ ಪತ್ರಕರ್ತೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರೂ, ಗಂಟೆಗಳ ಕಾಲ ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಕ್ಕೆ ಐಜೆಯು ಅಧ್ಯಕ್ಷ ಬಲ್ವಿಂದರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಡಿ. ಸೋಮಸುಂದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾನೂನಿನ ಆಡಳಿತವಿರುವ ಪ್ರಜಾಪ್ರಭುತ್ವ ಸಮಾಜದಲ್ಲಿ ಸಂತ್ರಸ್ತೆಯ ದೂರಿನ ಮೇಲೆ ತಕ್ಷಣ ಕ್ರಮ ಕೈಗೊಳ್ಳದಿರುವುದು ಮತ್ತು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುವುದು ಅತ್ಯಂತ ನಾಚಿಕೆಗೇಡು ಹಾಗೂ ಸ್ವೀಕಾರಾರ್ಹವಲ್ಲದ ನಡವಳಿಕೆ,” ಎಂದು ಅವರು ಕಿಡಿಕಾರಿದ್ದಾರೆ.

ಹಲವಾರು ಮುಖ್ಯವಾಹಿನಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ವತಂತ್ರ ಡಿಜಿಟಲ್ ವೇದಿಕೆಗಳ ಪತ್ರಕರ್ತರು ತಮ್ಮ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿದ ಹೊರತಾಗಿಯೂ ಪೊಲೀಸರು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂಘಟನೆ ದೂರಿದೆ. ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿ, ದೈಹಿಕವಾಗಿ ಹಲ್ಲೆ ನಡೆಸಿ, ಮಹಿಳಾ ವರದಿಗಾರರಿಗೆ ಕಿರುಕುಳ ನೀಡಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಐಜೆಯು ಆಗ್ರಹಿಸಿದೆ.

ಇದರೊಂದಿಗೆ ಪತ್ರಕರ್ತರ ಮೇಲಿನ ಹಲ್ಲೆ, ಕಿರುಕುಳ ಮತ್ತು ಕಾನೂನುಬಾಹಿರ ಬಂಧನದ ಕುರಿತು ಕಾಲಮಿತಿಯೊಳಗೆ ನಿಷ್ಪಕ್ಷಪಾತ ಸ್ವತಂತ್ರ ತನಿಖೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

You cannot copy content of this page

Exit mobile version