ರಾಜ್ಯದಲ್ಲಿ ಜನವರಿಯಿಂದ ಏಪ್ರಿಲ್ ಕೊನೆಯ ದಿನದ ವರೆಗೆ ಸುಮಾರು 372 ಕ್ಕೂ ಹೆಚ್ಚು ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಪರೀಕ್ಷೆಗೊಳಪಟ್ಟ 3,163 ಮಂದಿಯಲ್ಲಿ 372 ಮಂದಿಗೆ ಸೋಂಕು ದೃಢವಾಗಿದ್ದು, ವಾರಕ್ಕೆ 6 ರಿಂದ 8 ಪ್ರಕರಣ ಪತ್ತೆಯಾಗಿದೆ.
ಕಳೆದ ವಾರ 7 ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ. ಇಲಿ ಜ್ವರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ.
ಪ್ರತಿ ವರ್ಷ ಮಳೆಗಾಲದಲ್ಲಿ ಇಲಿ ಜ್ವರ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತವೆ. ಆದರೆ ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಇಲಿಜ್ವರ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ.
ಲಕ್ಷಣಗಳೇನು?ತೀವ್ರ ಜ್ವರ , ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು ಹಾಗೂ ಸೋಂಕು ಇತ್ಯಾದಿ ಇಲಿ ಜ್ವರದ ಲಕ್ಷಣವಾಗಿದೆ. ಸೋಂಕು ಉಂಟಾದ ಎರಡು ದಿನಗಳ ಬಳಿಕ ಕೀಲುನೋವು ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.