ಬೆಂಗಳೂರು: ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆಯ ಬೆನ್ನಲ್ಲೇ, ಸಿಜೆಐ ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಬೆದರಿಕೆಯ ಕಾಮೆಂಟ್‌ಗಳನ್ನು ಮಾಡಿದ ಐದು ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಮತ್ತು ಮಂಜುನಾಥ್ ಎಂ.ಸಿ. ಮಂಜು ಹೆಸರಿನ ಖಾತೆಗಳ ವಿರುದ್ಧ ಈ ದೂರು ದಾಖಲಾಗಿದೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳು (67, 66 ಮತ್ತು 66(C)) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 ರ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ಒಂದು ಪ್ರಕರಣದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಈ ಆರೋಪಿಗಳು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಕೆಟ್ಟ ಪದಗಳನ್ನು ಬಳಸಿ, ಬೆದರಿಕೆ ಹಾಕುವಂತಹ ಕಾಮೆಂಟ್‌ಗಳನ್ನು ಪ್ರಕಟಿಸಿದ್ದರು. ಇದನ್ನು ಗಮನಿಸಿದ ಸೈಬರ್ ಕ್ರೈಮ್‌ನ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು, ತಾವೇ ಸ್ವತಃ ಈ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.