ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಆಪ್ತ ಸಹಾಯಕ ಹಾಗೂ ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿಯಾದ ಅಶೋಕ್ ಕುಮಾರ್ ಪಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಸುಮಾರು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಮೇಲೆ ಈ ಬಂಧನ ಮಾಡಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪಾಲ್, 25 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದು, ರಿಲಯನ್ಸ್ ಪವರ್‌ನಲ್ಲಿ ಏಳು ವರ್ಷಗಳಿಗೂ ಹೆಚ್ಚು ಕಾಲ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಕಾರ್ಯನಿರ್ವಹಿಸುತ್ತಿದ್ದರು.
ಇಡಿ ತನಿಖಾ ಸಂಸ್ಥೆಯು ಈ ವರ್ಷದ ಜುಲೈನಲ್ಲಿ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ದಾಳಿಗಳನ್ನು ನಡೆಸಿತ್ತು.
ರಿಲಯನ್ಸ್ ಪವರ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಎನ್‌ಯು ಬಿಇಎಸ್‌ಎಸ್ ಲಿಮಿಟೆಡ್ (ಈ ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್ ಲಿಮಿಟೆಡ್) ಪರವಾಗಿ ಭಾರತೀಯ ಸೌರ ಇಂಧನ ನಿಗಮಕ್ಕೆ (Solar Energy Corporation of India) ನೀಡಲಾಗಿದ್ದ ₹68.2 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನಕಲಿ ಎಂದು ಅಶೋಕ್ ಪಾಲ್ ಅವರ ಮೇಲೆ ಆರೋಪಿಸಲಾಗಿದೆ.
ಕಂಪನಿಯು ವ್ಯವಹಾರ ನಡೆಸುವವರಿಗೆ ನಕಲಿ ಬ್ಯಾಂಕ್ ಗ್ಯಾರಂಟಿ ನೀಡುವ ಜಾಲವನ್ನು ನಡೆಸುತ್ತಿತ್ತು. ಇಡಿ ಗುರುತಿಸಿರುವಂತೆ, ಈ ದಂಧೆಯಲ್ಲಿ ಒಡಿಶಾ ಮೂಲದ ಬಿಸ್ವಾಲ್ ಟ್ರೇಡ್‌ಲಿಂಕ್ ಕೂಡ ಶಾಮೀಲಾಗಿತ್ತು. ಇಡಿ ಅಧಿಕಾರಿಗಳು ಆಗಸ್ಟ್‌ನಲ್ಲಿ ಬಿಸ್ವಾಲ್ ಟ್ರೇಡ್‌ಲಿಂಕ್ ಕಂಪನಿ ಮತ್ತು ಅದರ ಪ್ರವರ್ತಕರ ಮೇಲೆ ಶೋಧ ನಡೆಸಿದ್ದರು ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಅವರನ್ನು ಬಂಧಿಸಿದ್ದರು.
ನಕಲಿ ಬ್ಯಾಂಕ್ ಗ್ಯಾರಂಟಿ ನೀಡಲು ಶೇಕಡಾ 8ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಆರೋಪವಿದೆ. ಈ ಕುರಿತು ದೆಹಲಿ ಪೊಲೀಸರು 2024 ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.