Home ಅಂಕಣ ದೇವ ಬಾಶೆ, ಸ್ವರ್ಗದ ಬಾಶೆ ಎಲ್ಲ ಲೊಳಲೊಟ್ಟೆ (ಡಾ.ರಂಗನಾತ ಕಂಟನಕುಂಟೆ ಬರಹ)

ದೇವ ಬಾಶೆ, ಸ್ವರ್ಗದ ಬಾಶೆ ಎಲ್ಲ ಲೊಳಲೊಟ್ಟೆ (ಡಾ.ರಂಗನಾತ ಕಂಟನಕುಂಟೆ ಬರಹ)

0

‘ಸಂಸ್ಕ್ರುತ ಬಾಶೆ’ ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗಲು ಸಾದ್ಯವಿಲ್ಲ’ ಎಂದು ಸ್ವಾಮೀಜಿಗಳೊಬ್ಬರು ನೀಡಿರುವ ಹೇಳಿಕೆ ಚರ್ಚೆ ಹುಟ್ಟಿ ಹಾಕಿದೆ. ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ ಎಂಬುದು ನಿಜವಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಯಾಕೆಂದರೆ ಅವರು ಸಾಮಾನ್ಯ ವ್ಯಕ್ತಿಯಲ್ಲ. ಪ್ರಬಾವಿ ಮಟದ ‘ಸ್ವಾಮೀಜಿ’. ಅವರನ್ನು ಹಿಂಬಾಲಿಸುವ ದೊಡ್ಡ ಹಿಂಡೇ ಇರುವುದು ತಿಳಿದ ವಿಚಾರ. ಅಂತಹ ಹಿಂಬಾಲಕರಿಗೆ ಅವರ ಮಾತು ಪವಿತ್ರ ಆದೇಶವೇ ಆಗಿರುತ್ತದೆ. ಅದನ್ನು ಅವರು ನಂಬುತ್ತಾರೆ. ಅಂತಹ ಸುದ್ದಿಗಳನ್ನು ಎಲ್ಲೆಡೆ ಹರಡುತ್ತಾರೆ. ಹಾಗೆ ಹರಡಿಕೊಂಡ ಸುದ್ದಿಯನ್ನು ದಿಟವೇ? ಸಟೆಯೇ? ಎಂದು ಮರುಯೋಚಿಸದೆ ನಂಬುವ ಮುಗ್ದ ಜನ ಸಮಾಜದಲ್ಲಿದ್ದಾರೆ. ಅವರು ತಮ್ಮ ಮಕ್ಕಳಿಗೆ ಪರಂಪರೆಯ ಭಾಶೆ ಹೆಸರಿನಲ್ಲಿ ಸಂಸ್ಕೃತ ಕಲಿಸುವ ಆಸಕ್ತಿ ತೋರುತ್ತಾರೆ. ಜಾಗತೀಕರಣ ಕಾಲದಲ್ಲಿ ಹುಟ್ಟಿಕೊಂಡಿರುವ ನವಬ್ರಾಹ್ಮಣಶಾಹಿ ಮಧ್ಯಮ ವರ್ಗ ಇದರ ದೊಡ್ಡ ಬಲಿಪಶು. ಇದು ಲಾಬಕ್ಕಾಗಿ ಇಂಗ್ಲಿಶ್ ಅನ್ನು ತಮ್ಮ ದರ್ಮ ಪರಂಪರೆಗಳ ಹೆಸರಲ್ಲಿ ಸಂಸ್ಕೃತವನ್ನು ಕಲಿಯುವ ಸ್ವಾರ್ತದಲ್ಲಿದೆ. ನಿಡುಗಾಲದಲ್ಲಿ ಜನರ ಮೇಲೆ ಮನೋದಾಳಿ ನಡೆಯುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಅಂದರೆ ಸಂಸ್ಕ್ರುತವಾದಿಗಳ ಸವಾರಿ ಜನರನ್ನು ತುಳಿಯುತ್ತಲೇ ಇರುತ್ತದೆ.

ಹೀಗೆ ಸಂಸ್ಕ್ರುತದ ಬಗ್ಗೆ ಹಬ್ಬಿಸಿದ ಸುಳ್ಳುಗಳ ಪರಿಣಾಮವಾಗಿಯೇ ಅದು ‘ದೇವಬಾಶೆ’ ಎಂಬ ಪದವಿಯನ್ನು ಹೊಂದಿದೆ. ಅದರ ಕನವರಿಕೆಯ ಮುಂದುವರಿಕೆಯಾಗಿಯೇ ಸಂಸ್ಕ್ರುತ ಸ್ವರ್ಗದ ಬಾಶೆ ಎಂಬ ಆದೇಶವನ್ನು ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅದು ಅವರ ಖಾಸಗಿ ಹೇಳಿಕೆ ಅಲ್ಲ. ಅವರ ಹಿಂದಿರುವ ಬ್ರಾಹ್ಮಣ್ಯವಾದಿಗಳು, ಸನಾತನವಾದಿಗಳು ಮತೀಯವಾದಿಗಳು ಸ್ವಾಮೀಜಿಗಳ ಮೂಲಕ ಮಾತನಾಡಿದ್ದಾರೆ. ದೇವಾಲಯಗಳು ಮಟಗಳನ್ನು ಸಂಸ್ಕ್ರುತವನ್ನು ಬೆಳೆಸಲು ಬಳಸಿಕೊಂಡೇ ಬರಲಾಗುತ್ತಿದೆ. ಅದು ಈಗ ಮತ್ತೂ ಮುಂದುವರಿದಿದೆ. ಜನಬಳಕೆಯಲ್ಲಿದ್ದ ಇಲ್ಲವೇ ‘ಮೃತಭಾಶೆ’ಗೆ, ಸಂಸ್ಕ್ರತಕ್ಕೆ ಮರುಜೀವ ನೀಡುವ ಕೆಲಸವನ್ನು ಶತಮಾನಗಳಿಂದಲೂ ಮಾಡುತ್ತಲೇ ಬರಲಾಗುತ್ತಿದೆ. ಆಳುವ ವರ್ಗಗಳ ಶಕ್ತಿಗಳನ್ನು ಬೌದ್ದಿಕವಾಗಿ ಕೈವಶಮಾಡಿಕೊಂಡಿರುವ ಈ ಶಕ್ತಿಗಳು ಸಂಸ್ಕ್ರುತವನ್ನು ಬೆಳೆಸುವ ಕೆಲಸ ಮಾಡುತ್ತಿವೆ. ಅಂತಹ ಕೆಲಸಗಳಿಗೆ ಮಾನ್ಯತೆ ತಂದುಕೊಡುವ ಅಜೆಂಡಾದ ಬಾಗವಾಗಿ ಇಂತಹ ಹೇಳಿಕೆಗಳು ಹುಟ್ಟುತ್ತಿರುತ್ತವೆ. ಅದಕ್ಕೆ ಉತ್ತರ ನೀಡುವ ಕೆಲಸವನ್ನು ಕನ್ನಡಿಗರು ಮಾಡುತ್ತಿರುತ್ತಾರೆ. ಅಶ್ಟೇ.

ಸ್ವಾಮೀಜಿಗಳ ಮಾತನ್ನು ಅವಲೋಕಿಸಿದರೆ ಹಲವು ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಬ್ರಾಹ್ಮಣಶಾಹಿಗಳು ಮೊದಲಿಂದಲೂ ದೇವರು ಮತ್ತು ಸ್ವರ್ಗಗಳನ್ನು ತೋರಿಸುತ್ತಲೇ ಜನರನ್ನು ವಂಚಿಸುತ್ತ ಬರಲಾಗಿದೆ. ಜನರನ್ನು ಮೌಡ್ಯದ ಕೂಪದಲ್ಲಿ ಕೆಡವಿ ಆರ್ತಿಕವಾಗಿ ಲಾಬಮಾಡಿಕೊಳ್ಳಲಾಗಿದೆ. ಈಗ ಸಂಸ್ಕ್ರುತದ ವ್ಯಾಪ್ತಿಯನ್ನು ಹಿಗ್ಗಿಸುವ ಉದ್ದೇಶದಿಂದ ತಮ್ಮ ಹಳೆಯ ಅಜೆಂಡಾವನ್ನು ಮರುಕಳಿಸಿದೆ. ಮತ್ತೊಮ್ಮೆ ಸ್ವರ್ಗದ ಆಸೆ ತೋರಿಸಿ ಸಂಸ್ಕ್ರುತವನ್ನು ತುರುಕಿ ಕನ್ನಡ ಮತ್ತು ಇತರೆ ಜನಬಾಶೆಗಳ ಬೇರುಗಳನ್ನು ಸಡಿಲಗೊಳಿಸಲಾಗುತ್ತಿದೆ. ಇದಕ್ಕೆ ಹಿಂದಿಯನ್ನು ಊರುಗೋಲಾಗಿ ಬಳಸುವ ಕೆಲಸವನ್ನು ಶತಮಾನದಿಂದಲೂ ಮಾಡಲಾಗುತ್ತಿದೆ. ಕನ್ನಡವನ್ನು ಅದಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಇಲ್ಲಿ ಒಂದು ಕುತರ್ಕದ ಪ್ರಶ್ನೆ. ಹೀಗೆ ಹೇಳಿಕೆ ನೀಡಿರುವ ಸ್ವಾಮೀಜಿಗಳು ಸ್ವರ್ಗಕ್ಕೆ ಯಾವಾಗ ಹೋಗಿ ಬಂದರು. ಅಲ್ಲಿ ಸಂಸ್ಕೃತ ಬಳಕೆಯಲ್ಲಿರುವುದನ್ನು ಕಂಡು ಕೇಳಿ ಯಾರೊಂದಿಗೆ ಸಂವಾದಿಸಿ ಬಂದರು. ಸ್ವರ್ಗ ಇರುವುದಾದರೂ ಎಲ್ಲಿ? ತಮ್ಮ ವಿಚಾರವನ್ನು ಪ್ರಚಾರ ಮಾಡಲು ಹೋಗಿ ಸಮಾಜದ ಮುಂದೆ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದೇವೆ ಎಂಬ ಮುಜುಗರವೂ ಇಲ್ಲ.

ನಿಜವೆಂದರೆ, ಸ್ವಾಮೀಜಿಗಳ ಅರಿವಿನ ಸ್ಟಾಂಡರ್ಡ್ ಏನು? ಎಂಬುದನ್ನೂ ಪ್ರೂವ್ ಮಾಡಿಕೊಂಡಿದ್ದಾರೆ. ಅವರ ಇಂತಹ ಅಪ್ರಬುದ್ದ ಹೇಳಿಕೆಗಳನ್ನು ಕೇಳಿ ಅವರ ಬಕ್ತರಿಗೆ ಅಸಹ್ಯ ಹುಟ್ಟದಿರುವುದು ಸೋಜಿಗದ ಸಂಗತಿ. ಅತವಾ ಒಮ್ಮೆ ಬೌದ್ದಿಕ ದಾಸ್ಯಕ್ಕೆ ಬಿದ್ದವರಿಗೆ ಮತ್ತೆಂದೂ ನೈಜ ವಿಚಾರಗಳನ್ನು ಅರಿತುಕೊಳ್ಳುವ ಶಕ್ತಿಯೇ ಮರಳಿ ಬರುವುದಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.

ಇದನ್ನು ಕಂಡೇ ವಚನಕಾರ ನಗೆಯ ಮಾರಿತಂದೆ ‘ಸಂಸ್ಕೃತವನ್ನು ಮಾತಿನ ಪಸರ’ ಎಂದಿದ್ದಾನೆ. ಅದು ಜನರನ್ನು ಬೇಟೆಯಾಡುವ ಕಲ್ಲಿಯ ಹಾಗೆ ಎಂದದ್ದು ಸುಮ್ಮನೆ ಅಲ್ಲ. ಅಂದರೆ ಶತಮಾನಗಳಿಂದಲೂ ಸಂಸ್ಕøತದ ದಾಳಿ ನಡೆದಿದೆ. ಅದನ್ನು ಕನ್ನಡಿಗರು ಎದುರಿಸುತ್ತಲೇ ಬಂದಿದ್ದಾರೆ. ಈಗಲೂ ಅದನ್ನು ವೈಚಾರಿಕವಾಗಿ ಎದುರಿಸಲೇಬೇಕಿದೆ. ಬ್ರಾಹ್ಮಣಶಾಹಿ ನಮ್ಮ ಬದುಕಿನ ವಿವಿದ ಮಗ್ಗುಲುಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದಕ್ಕೆ ಇದು ಎತ್ತುಗೆ. ದೇವಾಲಯ, ದೇವರು, ಸ್ವರ್ಗ, ಆಹಾರ, ಭಾಶೆ ಎಲ್ಲವೂ ಅದಕ್ಕೆ ಕಪಟ ನಾಟಕದ ಆಟದ ವಸ್ತುಗಳೇ ಆಗಿರುತ್ತವೆ. ಅಂದರೆ ಪೊಳ್ಳು ಸಂಗತಿಗಳನ್ನೇ ಮುಂದುಮಾಡಿ ಜನರನ್ನು ದಿಕ್ಕುಗೆಡಿಸುವ ಕೆಲಸ ಮಾಡುತ್ತದೆ. ಇಂತಹ ನಕಲಿ ಹೇಳಿಕೆಗಳಿಂದ ಸಂಸ್ಕೃತದ ಚರ್ಚೆಯನ್ನು ಜೀವಂತವಾಗಿಡುತ್ತದೆ. ಸ್ವಾಮೀಜಿಗಳು ಇಂತಹ ಹೇಳಿಕೆ ನೀಡುವ ಕಾಲದಲ್ಲಿಯೇ ಸರ್ಕಾರಗಳು ಸಂಸ್ಕೃತದ ಸಂಗೋಪನೆಗೆ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚುಮಾಡುತ್ತದೆ. ಇವುಗಳನ್ನು ಜೋಡಿಸಿಕೊಂಡೇ ಅರ್ತಮಾಡಿಕೊಳ್ಳಬೇಕಿದೆ.

ಇಲ್ಲಿ ಗಮನಿಸಬೇಕಾದ ಅತ್ಯಂತ ಮುಖ್ಯಸಂಗತಿಯೆಂದರೆ ಲಜ್ಜೆಯೇ ಇಲ್ಲದೇ ಬಹಿರಂಗವಾಗಿ ಸುಳ್ಳುಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವುದು. ಇವು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂತ್ತವೆ ಎಂಬ ನಂಬಿಕೆ ಅವರಿಗಿದೆ. ಇಂತಹ ಹೇಳಿಕೆಗಳಿಂದ ಜನರ ಮಧ್ಯೆ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂಬ ಬಯವಿಲ್ಲ. ಇಂತಹ ಹೇಳಿಕೆಗಳನ್ನು ಪ್ರಾಸಂಗಿಕವಾಗಿ ನೀಡುವುದಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿಯೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಂಸ್ಕøತದ ಬೇರುಗಳನ್ನು ಗಟ್ಟಿಗೊಳಿಸಲು ಯತ್ನಿಸಲಾಗುತ್ತದೆ. ಬ್ರಾಹ್ಮಣಶಾಹಿ ಇಂತಹ ಹೇಳಿಕೆಗಳನ್ನು ನೀಡುತ್ತ ನೀಡಿಸುತ್ತಲೇ ಸಂಸ್ಕøತವನ್ನು ಮಾನ್ಯ ಮಾಡುತ್ತಲೇ ಇರುತ್ತದೆ. ಇಂತಹ ಹೇಳಿಕೆಗಳಿಂದ ಪ್ರಭಾವಗೊಳ್ಳುತ್ತಿರುವ ಜನರೂ ನಮ್ಮ ಸಮಾಜದಲ್ಲಿದ್ದಾರೆ

ದುರಂತವೆಂದರೆ ಈ ನಾಡಿನ ಜನರು ಇಂತಹ ಅಜ್ಞಾನದ ವಿರುದ್ಧ ನಿರಂತರ ಸಂಘರ್ಶ ನಡೆಸುತ್ತಲೇ ಇರಬೇಕು. ಯಾಕೆಂದರೆ ಸನಾತನವಾದಿಗಳು ಇಂತಹ ಅಜ್ಞಾನದ ವಿಶಬೀಜಗಳನ್ನು ಬಿತ್ತುವ ಮೂಲಕವೇ ಜನರನ್ನು ಬೌದ್ದಿಕವಾಗಿ ನಿಯಂತ್ರಿಸುತ್ತದೆ. ಇದು ಬ್ರಾಹ್ಮಣ್ಯ ಇರುವವರೆಗೂ ನಡೆದೇ ಇರುತ್ತದೆ. ಹಾಗಾಗಿ ಬ್ರಾಹ್ಮಣ್ಯ ಇರುವವರೆಗೂ ಸಂಘರ್ಶ ನಡೆದೇ ಇರುತ್ತದೆ. ಬ್ರಾಹ್ಮಣಶಾಹಿ ಲೋಕದೃಶ್ಟಿಯನ್ನು ಕೊನೆಗಾಣಿಸದೇ ಇಂತಹ ಅಜ್ಞಾನ, ಅವೈಚಾರಿಕತೆ ಶ್ರೇಶ್ಟತೆಯ ವ್ಯಸನಗಳನ್ನು ಕೊನೆಗಾಣಿಸಲಾಗದು. ಆದ್ದರಿಂದ ಇದನ್ನು ವಿರೋದಿಸುವವರು ವೈಚಾರಿಕವಾಗಿ ಬಲಿಶ್ಟಗೊಳ್ಳುತ್ತ ಬೌದ್ದಿಕವಾಗಿ ಬ್ರಾಹ್ಮಣ್ಯವಾದಿಗಳ ವಿರುದ್ದ ಗುದ್ದಾಟ ಮಾಡಬೇಕಿರುತ್ತದೆ. ಎಲ್ಲಿಯವರೆಗೂ ಹೋರಾಟವಿರುತ್ತದೆಯೋ ಅಲ್ಲಿಯವರೆಗೂ ಅದು ದುರ್ಬಲವಾಗಿರುತ್ತದೆ. ಇಲ್ಲವಾದರೆ ಅದು ಮೇಲೇದ್ದು ಎಲ್ಲವನ್ನು ಆಪೋಶನ ತೆಗೆದುಕೊಳ್ಳುತ್ತದೆ. ಎತ್ತುಗೆಗೆ ವಚನ ಇಲ್ಲವೇ ಶರಣ ಚಳವಳಿಯ ವಾರಸುದಾರರು ವೈಚಾರಿಕವಾಗಿ ಗಟ್ಟಿಯಾಗಿದ್ದ ಕಾಲದಲ್ಲಿ ವಚನಗಳನ್ನು ತಿರುಚುವ ಕೆಲಸಕ್ಕೆ ಕೈಹಾಕಲಿಲ್ಲ. ಈಗ ಬಸವಣ್ಣನ ಅನುಯಾಯಿಗಳು ಮತೀಯವಾದಿಗಳ ಜೊತೆಗೆ ಹೆಜ್ಜೆ ಹಾಕತೊಡಗಿರುವ ಕಾಲದಲ್ಲಿ ವಚನಗಳ ತಿರುಳನ್ನು ತಿರುಚುವ ಅಪವ್ಯಾಖ್ಯಾನಕ್ಕೆ ಗುರಿಪಡಿಸುವ ಕೆಲಸ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲ ಕೈಯಾಡಿಸಿ ಕಬಳಿಸಿಕೊಳ್ಳುವ ಮತ್ತು ಅದನ್ನು ನಾಶಪಡಿಸುವ ಕೆಲಸ ಮಾಡುತ್ತದೆ. ಆದ್ದರಿಂದಲೇ ಲೋಕ ಬದಲಾಗಿ ಎಶ್ಟೆಲ್ಲ ವಿಚಾರಗಳು ಹೊಸತನ ಪಡೆದುಕೊಂಡರೂ ಅಂತಹ ವಿಚಾರಗಳನ್ನು ಸನಾತನವಾದಿಗಳು ತಮ್ಮ ಮನದೊಳಕ್ಕೆ ಬಿಟ್ಟುಕೊಳ್ಳುವುದೇ ಇಲ್ಲ. ಬಾಶೆಯಲ್ಲಿ ದೇವಬಾಶೆ, ಸ್ವರ್ಗದ ಬಾಶೆ, ಶ್ರೇಶ್ಟಬಾಶೆ ಕನಿಶ್ಟ ಬಾಶೆ ಎಂಬುದೆಲ್ಲ ಇಲ್ಲ. ಎಲ್ಲ ಬಾಶೆಗಳೂ ಸಮಾನ. ಎಲ್ಲ ಬಾಶೆಗಳಿಗೂ ಎಲ್ಲ ಶಕ್ತಿಯಿದೆ. ಎಂದು ಸಾಬೀತುಪಡಿಸಿದರೂ ತಮ್ಮ ಅಜ್ಞಾನದ ಗುಡಾಣದೊಳಕ್ಕೆ ಆ ವಿಚಾರಗಳನ್ನು ಬಿಟ್ಟುಕೊಳ್ಳುವುದೇ ಇಲ್ಲ. ಅದೇ ತಮ್ಮ ಗಬ್ಬುನಾರುವ ವಿಚಾರಗಳನ್ನೇ ಪುನಾವರ್ತಿಸುತ್ತಿರುತ್ತದೆ. ಇದನ್ನೇ ಮತೀಯವಾದಿ ಇಲ್ಲವೇ ದಾರ್ಮಿಕ ಮೂಲಬೂತವಾದಿತನ ಎನ್ನುವುದು. ಇದು ಬದಲಾವಣೆಗೆ ಒಪ್ಪುವುದೇ ಇಲ್ಲ. ಬದಲಾದ ಕಾಲಕ್ಕೆ ದರ್ಮವನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಇದನ್ನು ಗಮನಿಸಿದಾಗ ಹೊಸವಿಚಾರಗಳನ್ನು ಅರಿತುಕೊಳ್ಳದಶ್ಟು ದಡ್ಡತನವೇನು ಇರುವುದಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ಇಂತಹ ವಿಚಾರಗಳ ಮೂಲಕವೇ ತಮ್ಮ ಯಜಮಾನಿಕೆಯನ್ನು ಅದಿಪತ್ಯವನ್ನು ಶ್ರೇಶ್ಟತೆಯನ್ನು ಉಳಿಸಿಕೊಳ್ಳುವ ದುರುದ್ದೇಶ ಅಡಗಿರುತ್ತದೆ.

ಇಂತಹ ದುರುದ್ದೇಶಗಳ ವಿರುದ್ದ ಹೋರಾಡುವುದರಲ್ಲಿಯೇ ಕನ್ನಡದ ಸೃಜನಶೀಲ ಸಾಮರ್ಥ್ಯ ಅಡಗಿದೆ. ಕನ್ನಡ ನುಡಿಯ ಬವಿಶ್ಯವಿದೆ.

(ಈ ಲೇಖನವನ್ನು ಎಲ್ಲರ ಕನ್ನಡದಲ್ಲಿ ಬರೆಯಲಾಗಿದೆ)

-ರಂಗನಾತ ಕಂಟನಕುಂಟೆ

You cannot copy content of this page

Exit mobile version