ಹಾಸನ : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸದ್ದು ಮಾಡಿದ್ದ ಬಿಜೆಪಿ ಮುಖಂಡ ಜಿ ದೇವರಾಜೇಗೌಡ (G Devaraje gowda) ಇದೀಗ ಹಾಸನ (Hassan) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ (Mohammed Sujeeta) ಅವರ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆ ವಾಹನವನ್ನ ಸುಜೀತಾ ಅವರು ತಮ್ಮ ಖಾಸಗಿ ಅಗತ್ಯತೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಇಲಾಖೆಯ ವಾಹನ ಬಳಸಿಕೊಂಡು ಝೀರೋ ಟ್ರಾಫಿಕ್ ಮೂಲಕ ತಮ್ಮ ತಾಯಿಯನ್ನ ಕರೆತಂದಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ. ಎಸ್ಪಿ ಮೊಹಮ್ಮದ್ ಸುಜೀತಾ ಅವರು ತಮ್ಮ ತಾಯಿಯನ್ನ ಹಾಸನದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಕರೆತಂದಿರುವ ಆರೋಪ ಕೇಳಿ ಬಂದಿದೆ. ಸೆಪ್ಟೆಂಬರ್ 25 ರಂದು ಸುಜೀತಾ ಅವರು ತಮ್ಮ ತಾಯಿಯ ಆರೋಗ್ಯ ಸರಿಯಿಲ್ಲ ಎಂದು ಹಾಸನದಿಂದ ಬೆಂಗಳೂರಿಗೆ ಅವರನ್ನು ಕರೆತಂದಿದ್ದಾರೆ.ಆದ್ರೆ ಈ ವೇಳೆ ಯಾರ ಅನುಮತಿಯೂ ಇಲ್ಲದೆ, ಸರ್ಕಾರದ ಸುತ್ತೊಲೆ ಇಲ್ಲದೆ ಹಾಸನದಿಂದ ಬೆಂಗಳೂರಿನವರೆಗೆ ಝೀರೋ ಟ್ರಾಫಿಕ್ ನಲ್ಲಿ ಬಂದಿದ್ದಾರೆ. ಆದ್ರೆ ಕಾನೂನಿನ ಪ್ರಕಾರ ಹಾಸನದಿಂದ ಬೆಂಗಳೂರಿಗೆ ಝೀರೋ ನಲ್ಲಿ ಬರಬೇಕು ಅಂದ್ರೆ, ತುಮಕೂರು SP, ಬೆಂಗಳೂರು ಗ್ರಾಮಾಂತರ SP ಹಾಗೂ ಬೆಂಗಳೂರು ಕಮಿಷನರ್ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಹೀಗಾಗಿ ಹಾಸನದ ಎಸ್ಪಿ ಮಹಮ್ಮದ್ ಸುಜೀತಾ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ದೇವರಾಜೇಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಸದ್ಯ ಎಸ್ ಪಿ ವಿರುದ್ಧ ಕ್ರಮ ಕೈಗೊಳ್ಳಲು ಏಳು ದಿನಗಳ ಕಾಲವಕಾಶ ಕೊಟ್ಟಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ನಲ್ಲಿ PIL ಸಲ್ಲಿಸುತ್ತೇನೆ ಎಂದು ದೇವರಾಜೇಗೌಡ ಹೇಳಿದ್ದಾರೆ.