ಆಕಸ್ಮಿಕವಾಗಿ ಪ್ರಧಾನಿ ಆದ ದೇವೇಗೌಡರು ಪಾಳೆಗಾರಿಕೆ ಮಾತ್ರ ಬಿಡಲ್ಲ. ದಲಿತರು, ಹಿಂದುಳಿದವರನ್ನು ಕಂಡ್ರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ನಾನು ಮತ್ತೆ ಜಾಲಪ್ಪನವರು ದೇವೇಗೌಡರ ಪರವಾಗಿ ನಿಲ್ಲದೇ ಹೋಗಿದ್ದರೆ ಗೌಡರು ಮುಖ್ಯಮಂತ್ರಿ ಆಗಲಿಕ್ಕೆ ಖಂಡಿತಾ ಸಾಧ್ಯವಿರಲಿಲ್ಲ. ಇಂದು ಇದೇ ದೇವೇಗೌಡರು ಸಿದ್ದರಾಮಯ್ಯನ ಗರ್ವಭಂಗ ಮಾಡುತ್ತೀನಿ ಎಂದು ಶಪಥ ಮಾಡಿದ್ದಾರೆ. ಇದು ಪಾಳೇಗಾರಿಕೆ ಮಾತುಗಳಲ್ವಾ?
ಹಿಂದುಳಿದ ಸಮುದಾಯಕ್ಕೆ ಸೇರಿದ ನನ್ನನ್ನು ದೇವೇಗೌಡರು ವಿರೋಧಿಸಲಿ, ಅದಕ್ಕೆ ನನ್ನ ತಕರಾರು ಇಲ್ಲ. ಆದರೆ ರಾಜಕೀಯ ಪ್ರಜ್ಞೆ ಹೊಂದಿರುವ, ತಮ್ಮ ಮಾತನ್ನು ಕೇಳದ ಒಕ್ಕಲಿಗ ನಾಯಕರನ್ನು ಅವರು ಬೆಳೆಯಲು ಬಿಟ್ಟಿಲ್ಲ. ಇದಕ್ಕೆ ಉದಾಹರಣೆಯಾಗಿ ಹತ್ತಾರು ನಾಯಕರ ಹೆಸರು ಹೇಳಬಲ್ಲೆ. ಒಕ್ಕಲಿಗ ಸಮುದಾಯಕ್ಕೆ ದೇವೇಗೌಡರೇ ನಿಜವಾದ ಶತ್ರು ಸಿದ್ದರಾಮಯ್ಯ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಸೇರಿ ಗ್ಯಾರಂಟಿಗಳನ್ನು ಸರ್ಕಾರ ಬಂದ್ ಮಾಡುತ್ತದೆ ಎಂದು ದೇವೇಗೌಡರು ದೊಡ್ಡ ಸುಳ್ಳು ಹೇಳಿದ್ದಾರೆ. ದೇವೇಗೌಡರೇ ಒಂದು ಮಾತು ಹೇಳ್ತೀನಿ, ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ. ನಮ್ಮ ಸರ್ಕಾರ ಯಾವ ಗ್ಯಾರಂಟಿಗಳನ್ನೂ ನಿಲ್ಲಿಸುವುದಿಲ್ಲ. ಇದಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದರು.
ವಕ್ಫ್ ವಿಚಾರದಲ್ಲೂ ಬಿಜೆಪಿ ಜೊತೆ ಸೇರಿ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದ್ದೇವೆ. ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದರು.