ಇಂಫಾಲ: ಮಣಿಪುರದಲ್ಲಿ ಭಾರೀ ಎನ್‌ಕೌಂಟರ್ ನಡೆದಿದೆ. ಕುಕಿ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು.
ಈ ಗುಂಡಿನ ದಾಳಿಯಲ್ಲಿ 11 ಕುಕಿ ಉಗ್ರರು ಹತರಾಗಿದ್ದಾರೆ. ಕೆಲವು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಗಾಯಗೊಂಡಿದ್ದಾರೆ. ಅಸ್ಸಾಂ ಗಡಿ ಸಮೀಪದ ಜಿರಿಬಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಂಕಿತ ಕುಕಿ ಉಗ್ರಗಾಮಿಗಳು ಜಿರಿಬಾಮ್‌ನಲ್ಲಿರುವ ಪೊಲೀಸ್ ಠಾಣೆ ಮೇಲೆ ಎರಡು ಕಡೆಯಿಂದ ದಾಳಿ ನಡೆಸಿದ್ದಾರೆ. ನಂತರ, ಪೊಲೀಸ್ ಠಾಣೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಜಕುರಾದೋರ್ ಕರೋಂಗ್‌ನಲ್ಲಿನ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಅಲ್ಲಿಗೆ ಬಂದ ಭದ್ರತಾ ಪಡೆಗಳ ಮೇಲೆಯೂ ಗುಂಡು ಹಾರಿಸಿದರು.
ಇದೇ ವೇಳೆ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ 11 ಕುಕಿ ಉಗ್ರರು ಹತರಾಗಿದ್ದಾರೆ. ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್‌ನ ಕೆಲವು ಯೋಧರೂ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಂದೆಡೆ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ನಿರಾಶ್ರಿತ ಶಿಬಿರವೇ ಕುಕಿ ಉಗ್ರರ ಗುರಿಯಾಗಿರಬಹುದು ಎಂದು ಭದ್ರತಾ ಪಡೆ ಶಂಕೆ ವ್ಯಕ್ತಪಡಿಸಿದೆ. ಜಿರಿಬಾಮ್ ಜಿಲ್ಲೆಯ ಈ ಪೊಲೀಸ್ ಠಾಣೆಯನ್ನು ಕುಕಿ ಉಗ್ರಗಾಮಿಗಳು ಹಲವು ಬಾರಿ ಗುರಿಯಾಗಿಸಿಕೊಂಡಿದ್ದರು ಎನ್ನಲಾಗಿದೆ.