Home ಜನ-ಗಣ-ಮನ ಹೆಣ್ಣೋಟ ದೇವಿರಮ್ಮನ  ಹೊಸ ವರಸೆ

ದೇವಿರಮ್ಮನ  ಹೊಸ ವರಸೆ

0

(ಈ ವರೆಗೆ…)

ಗಂಡನ ಮನೆ ತೊರೆದು ತವರು ಸೇರಿದ್ದ ದೇವೀರಮ್ಮ ಬಸುರಾಗುತ್ತಾಳೆ. ಸೀನಪ್ಪನ ಮಡದಿ ಸತ್ತು ಅದಾಗಲೇ ಹತ್ತು ವರ್ಷಗಳಾಗಿದ್ದವು. ಆತ ಮಗು ಹುಟ್ಟಿಸಲು ಅಸಮರ್ಥನಾಗಿದ್ದುದರಿಂದ ಬಸುರಿ ದೇವೀರಮ್ಮನನ್ನು ಮದುವೆಯಾಗಲು ಆತ ಸಮ್ಮತಿಸಿ ಮದುವೆಯಾಗಿ ಆಕೆಯನ್ನು ನಾರೀಪುರಕ್ಕೆ ಕರೆತಂದ. ದೇವೀರಮ್ಮ ಹಡೆದಳೇ? ಓದಿ.. ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತೊಂದನೆಯ ಕಂತು.

ಬೋಪಯ್ಯ ದೇವಿರಮ್ಮನನ್ನು ದೂರ ಮಾಡಿದುದರ ನಿಗೂಢವನ್ನು ಹುಡುಕಿ ತೆಗೆಯುವ ಸಾಹಸ ಮಾಡಿ ಸೋತು ಸುಣ್ಣವಾಗಿದ್ದ ನಾರಿಪುರದ ಜನತೆ, ಕೊನೆಗೆ ಬೋಪಯ್ಯನದೇ  ಏನೋ ಐಬಿರಬೇಕೆಂದು ನಿರ್ಧರಿಸಿ,  ದೇವಿರಮ್ಮನ ನಿರ್ಗಮನಕ್ಕೆ ರಾಶಿ ಅನುಕಂಪ ಸುರಿದು ತೆಪ್ಪಗಾಗಿತ್ತು.

ಹೀಗೆ  ವರ್ಷ ಒಪ್ಪತ್ತು ಎನ್ನುವುದರೊಳಗೆ ತೆರೆಮರೆಗೆ ಸರಿದೇ ಹೋಗಿದ್ದ ದೇವಿರಮ್ಮ ಇದ್ದಕ್ಕಿದ್ದಂತೆ ಒಂದು ಮುಸ್ಸಂಜೆ  ಸೀನಪ್ಪನ ಕೈ ಹಿಡಿದು ಮದುವಣ ಗಿತ್ತಿಯಾಗಿ  ತಲೆ ತಗ್ಗಿಸಿ ಊರು ಪ್ರವೇಶಿಸಿದ್ದನ್ನು  ಕಂಡ ಅಲ್ಲಿನ ಜನ ಸ್ತಂಭೀಭೂತರಾಗಿ “ಅಗಳಪ್ಪಾ… ದೇವಿರಮ್ಮುನ ವರ್ಸೆ ನೋಡೋ…” ಎಂದು ಬಾಯಿ ಮೇಲೆ ಬೆರಳಿಟ್ಟು ಕೊಂಡಿತ್ತು.  ಕಟ್ಟಿಕೊಂಡ ಹೆಂಡತಿಯನ್ನು ಕಾಲಕಸದಂತೆ ಕಂಡ ಬೋಪಯ್ಯನ ಮೇಲೆ ತಾವೇ ರೊಚ್ಚು ತೀರಿಸಿ ಕೊಂಡವರಂತೆ ಜನ ಅವಳ ಪುನರಾಗಮನವನ್ನು ಸಂಭ್ರಮಿಸಿ  ನಿರಾಳವಾದರು.

ತಾಯಿಯಿಂದ ಬೇರ್ಪಟ್ಟಿದ್ದ ಪುಟ್ಟ ಮಂಜುಳಿಯನ್ನು ಕಂಡು ಪ್ರತಿಕ್ಷಣವೂ ಹೊಟ್ಟೆಗೆ ಬೆಂಕಿ ಬಿದ್ದಂತೆ ಸಂಕಟಪಡುತ್ತಿದ್ದ ಬೋಪಯ್ಯನ ಕಿರಿಯ ಹೆಂಡತಿ ಸಾಕಮ್ಮನ ಸಂತಸಕ್ಕಂತೂ  ಪಾರವೇ ಇರಲಿಲ್ಲ. ಹೊಸ ನಾರಿಪುರಕ್ಕೆ ಅಕ್ಕಿ ಮಾಡಿಸಲು ಭತ್ತದ ಚೀಲಗಳನ್ನು ಹೊತ್ತು  ಹೋಗಿದ್ದ ಗಂಡ ಇನ್ನೂ ಮನೆಗೆ ಬರುವುದು ತಡವೆಂದು ಅರಿತಿದ್ದ ಸಾಕಮ್ಮ,   ಮದುಮಕ್ಕಳು ಊರ ಬಾಗಿಲಿನಿಂದ ಮನೆ ಸೇರುವುದರೊಳಗೆ, ತಾನೇ ಆರತಿ ಅಕ್ಷತೆ ಅಣಿಗೊಳಿಸಿಕೊಂಡು, ಬೀದಿಯಲ್ಲಿ ಆಡುತ್ತಿದ್ದ ನಾಕು ವರ್ಷದ ಕೂಸು ಮಂಜುಳಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಕದವಿಕ್ಕಿದ್ದ ಸೀನಪ್ಪನ ಮನೆ ಬಾಗಿಲಲ್ಲಿ ಕಾದು ನಿಂತಿದ್ದಳು.

ಬೋಪಯ್ಯನ ಮನೆಯ ಮುಂದೆಯೇ ಹಾದು ಹೋಗಬೇಕಿದ್ದ ನವ ಜೋಡಿ  ಅಳುಕುತ್ತಲೇ ಆ ಮನೆಯ ಕಡೆ ಕಣ್ಣಾಯಿಸಿತು. ಎರಡು ಮನೆಯ ಬಾಗಿಲುಗಳು ಕದವಿಕ್ಕಿಕೊಂಡು ಗಪ್ಪಾಗಿ ಕುಳಿತಿದ್ದವು. ಅಲ್ಲಿ ಯಾರ ಸುಳಿವು ಇಲ್ಲದ್ದನ್ನು ಕಂಡ ಸೀನಪ್ಪ ನಿರಾಳವಾಗಿ ತನ್ನ ಮನೆಯ ಕಡೆ ದಾಪುಗಾಲಿಡುತ್ತಾ ನಡೆದ. ತಂಗಿ ಸಾಕಮ್ಮ ಮತ್ತು ಮಗಳು ಮಂಜುಳಿಗಾಗಿ ಕಿರುಗಣ್ಣಿನಲ್ಲೇ ಹುಡುಕಾಡಿದ ದೇವಿರಮ್ಮ ನಿರಾಸೆಯಿಂದ  ಸೀನಪ್ಪನನ್ನು ಅನುಸರಿಸಿದಳು.

ಮನೆ ಬಾಗಿಲಲ್ಲಿ ಐದು ಜನ ಮುತ್ತೈದೆಯರನ್ನು ಹೊಂದಿಸಿಕೊಂಡು ಆರತಿ ಹಿಡಿದು ನಿಂತಿದ್ದ ಸಾಕಮ್ಮನನ್ನು ಕಂಡು ದೇವೀರಮ್ಮ ಗೆಲುವಾದಳು. ಸಾಕಮ್ಮನ ಕಾಲುಬಳಸಿ ಹೆಂಗಸರ ಸಂಧಿಯಿಂದ ಇಣುಕಿ ನೋಡುತ್ತಿದ್ದ  ಮಂಜುಳಿಯನ್ನು ಕಂಡು ದೇವೀರಮ್ಮನ ತಾಯ್ತನದ ಕಟ್ಟೆ ಒಡೆಯಿತು. ಮಗಳನ್ನು ಬರಸೆಳೆದು  ಲೊಚ ಲೊಚನೆ ಮುತ್ತಿಕ್ಕಿ ಮುದ್ದಿಸತೊಡಗಿದಳು. ವರ್ಷಗಳ ಸುದೀರ್ಘ ಅಂತರದಿಂದಾಗಿ ತನ್ನ ತಾಯಿಯ ಮುಖವನ್ನೇ ಮರೆತಿದ್ದ ಪುಟ್ಟ ಮಂಜುಳಿ ದೇವಿರಮ್ಮನ ಕೈ ಕೊಸರಿ “ಅವ್ವಣ್ಣಿ….” ಎಂದು ಕೂಗುತ್ತಾ ಒಂದೇ ನೆಗೆತಕ್ಕೆ  ಸಾಕಮ್ಮನ ತೆಕ್ಕೆಗೆ ಆತು ಕೊಂಡಿತು.  ಪೆಚ್ಚಾದ ದೇವೀರಮ್ಮನನ್ನು ಕಂಡ ಸಾಕಮ್ಮ “ಬಲುದಿನ ಆಯ್ತಲಕ್ಕ ಮಗಿಗೆ ಮರ್ತಂಗಾಗದೆ ಇನ್ನೇನು ಒತ್ತಿಲೇ ಇರ್ತಿಯಲ್ಲ ನಿದಾನುಕ್ಕೆ ಹೊಂದ್ಕೊತದೆ ತಕೋ”  ಎಂದು ಅಕ್ಕನನ್ನು ಸಮಾಧಾನಿಸಿ ಆರತಿ ಬೆಳಗಿ ಮನೆ ತುಂಬಿಸಿಕೊಂಡಳು. ಒಳಗೆ ಬಂದ ದೇವಿರಮ್ಮನಿಗೆ “ಇವತ್ತೇನು ಒಲೆಗಿಲೆ ಕಸ್ಸಾಕೋಗ್ಬ್ಯಾಡ. ನಾನೇ ಅಡ್ಗೆ ಮಾಡಿ ತತ್ತಿನಿ. ನಾಳಿಕೆ ಗೌಡ ಹೊಲುಕ್ ಹೋದ್ಮೇಲೆ  ಬತ್ತಿನಿ ಮಾತಾಡನ” ಎಂದು ಹೇಳಿ ಮಂಜುಳಿಯನ್ನು ಕಂಕುಳಿಗಾಕಿಕೊಂಡು ಸಾಕಮ್ಮ ಮನೆಗೆ ಬಂದಳು.

ಅಜ್ಜಿ ಮತ್ತು ಅಪ್ಪ ಇಬ್ಬರ ಮನೆಗಳಲ್ಲಿ ಆಡಿ ಬೆಳೆಯುತ್ತಿದ್ದ ಮಂಜುಳಿ, ಈಗ ಮೂರು ಮನೆಗಳಲ್ಲಿ ಆಡಿ ಬೆಳೆಯತೊಡಗಿದಳು. ಬೋಪಯ್ಯ ಮನೆಯಲ್ಲಿದ್ದಾಗ ತಮಗೂ ದೇವಿರಮ್ಮನಿಗೂ ಸಂಬಂಧವೇ ಇಲ್ಲ ಎಂಬಂತಿರುತ್ತಿದ್ದ ಸಾಕಮ್ಮ, ಅವನು ಅತ್ತ ಇತ್ತ ಹೋದದ್ದೆ ಊಟದ ಮನೆ ಕಿಟಕಿತೆಗೆದು ಬಾಯಾರುವವರೆಗೂ ಮಾತಾಡಿ ತನ್ನ ದಣಿವು ನೀಗಿಸಿಕೊಳ್ಳುತ್ತಿದ್ದಳು. ಇವರ ಎಲ್ಲಾ ಹಕೀಕತ್ತುಗಳನ್ನು ಬಲ್ಲ ಬೋಪಯ್ಯ ತನಗೂ ಈ ಸಂಬಂಧಗಳಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮುಗುಮ್ಮಾಗಿ ಇದ್ದುಬಿಟ್ಟ. ಆದರೆ ತನ್ನ ನಿಷ್ಠುರ ನಡೆಯಿಂದಲೇ  ಸಾಕಮ್ಮ ತನ್ನ ಮುಂದೆ ಯಾವುದೇ ಕಾರಣಕ್ಕೂ ದೇವಿರಮ್ಮನ ಹೆಸರು ಎತ್ತದಂತೆ ನೋಡಿ ಕೊಂಡಿದ್ದ. 

ತಿಂಗಳು ಎನ್ನುವುದರೊಳಗೆ ದೇವಿರಮ್ಮನ ಬಸುರಿನ ಸುದ್ದಿ ಊರ ತುಂಬಾ ಹರಡಿತು. ಸೀನಪ್ಪನನ್ನು ಷಂಡನೆಂದೇ ಭಾವಿಸಿದ್ದ ಜನ ಈ ಸುದ್ದಿ ಕೇಳಿ ಆಶ್ಚರ್ಯ ಚಕಿತರಾದರು. ಬುರ್ರನೇ ಬೆಳೆಯುತ್ತಿದ್ದ ದೇವಿರಮ್ಮನ ನಾಕುತಿಂಗಳ ಹೊಟ್ಟೆಯನ್ನು ಮರೆಮಾಚುವ ಸಲುವಾಗಿ, ಸೀನಪ್ಪ ಮದುವೆಯಾಗಿ ಎರಡು ತಿಂಗಳು ಕಳೆದದ್ದೇ ತಡ ವೈದ್ಯರು ಅವಳಿಗೆ ವಿಶ್ರಾಂತಿ ತೆಗೆದು ಕೊಳ್ಳಲು ಹೇಳಿದ್ದಾರೆಂದು ಊರವರನ್ನು ನಂಬಿಸಿ ದೇವಿರಮ್ಮನನ್ನು ತವರಿಗೆ ಕಳಿಸಿದ. 

“ಅಲ್ಲಾ ಆ ಸುಮಿತ್ರಿನ್ ಮದ್ವೆಯಾಗಿ ಐದು ವರ್ಸ ಕಳುದ್ರು ಬಸ್ರು ಮಾಡಕಾಗುದ್ ಈ ಸೀನಪ್ಪ ಮದ್ವೆಯಾಗಿ ತಿಂಗ್ಳು ಕಳಿಯೋದ್ರೊಳಗೆ ಈ ದೇವಿರಮ್ಮುನ್ನ  ಹೆಂಗ್ ಬಸ್ರು ಮಾಡ್ಬುಟ್ಟಾ” ಎಂದು ಹಿಂದು ಮುಂದು ಮಾತಾಡಿಕೊಂಡು ನಕ್ಕವರಿಗೇನು  ಬರವಿರಲಿಲ್ಲ. 

ಈ ಯಾವುದಕ್ಕೂ ತಲೆಕೆಡಿಸಿ ಕೊಳ್ಳದ ಸೀನಪ್ಪ ಮಾತ್ರ ತನ್ನ ಹೆಂಡತಿ ಏಳು ತಿಂಗಳಿಗೆ ಹೆತ್ತಳೆಂದು ಹೊಸ ಕತೆ ಹೊಸೆದು, ಸಂಭ್ರಮದಿಂದ ಬಾಣಂತಿ ಮಗುವನ್ನು ಮನೆ ತುಂಬಿಸಿ ಕೊಂಡು ಊರ ಮುಂದೆ ತನ್ನ ಸಂಸಾರ ಗಟ್ಟಿಯಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದ.

ಮುಲಾಜಿಲ್ಲದಂತೆ ಕೊಚ್ಚಿ ಕೊಂಡು ಬಂದ ಕಾಲದ ಹರಿವಿನಲ್ಲಿ ಸೀನಪ್ಪ ಮತ್ತು ದೇವಿರಮ್ಮನ ಮಗಳು ನಾಗಿಯು ಬೋಪಯ್ಯ ಮತ್ತು ದೇವಿರಮ್ಮನ ಮಗಳು ಮಂಜುಳಿಯು ಒಟ್ಟೊಟ್ಟಿಗೆ ಆಡುತ್ತಾ ದೊಡ್ಡವರಾಗಿ ಅದೇ ಊರಿನ ಗಂಡುಗಳ ಕೈ ಹಿಡಿದು ಸಂಸಾರೊಂದಿಗರಾಗಿ ದಡ ಸೇರಿದರು. ಇತ್ತ ಸಾಕಮ್ಮ ಮತ್ತು ಬೋಪಯ್ಯನ ತಂಗಿ ತುಂಗೆಯು ಮಕ್ಕಳ ಮೇಲೆ ಮಕ್ಕಳನ್ನೆತ್ತು  ರಾಚಪ್ಪಯ್ಯನ ಸಂತಾನ ಹಳೇ ನಾರಿಪುರದ ತುಂಬಾ ಹಬ್ಬಿ ಹರಡುವಂತೆ ಮಾಡಿದರು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಇದನ್ನೂ ಓದಿ-ಸಿಂಗಾರಿ ಹಳ್ಳಿ ಸೀನಪ್ಪ ಮತ್ತು ಬಸುರಿ ದೇವಿರಮ್ಮನ  ಮದುವೆ

You cannot copy content of this page

Exit mobile version