Home ಜನ-ಗಣ-ಮನ ಹೆಣ್ಣೋಟ ಸಿಂಗಾರಿ ಹಳ್ಳಿ ಸೀನಪ್ಪ ಮತ್ತು ಬಸುರಿ ದೇವಿರಮ್ಮನ  ಮದುವೆ

ಸಿಂಗಾರಿ ಹಳ್ಳಿ ಸೀನಪ್ಪ ಮತ್ತು ಬಸುರಿ ದೇವಿರಮ್ಮನ  ಮದುವೆ

0

(ಈ ವರೆಗೆ….)

ಮಾರಯ್ಯನ ಜತೆ ಸಂಸಾರ ನಡೆಸಲು ಮಾನಸಿಕ ಸಿದ್ಧತೆ ಮಾಡಿಕೊಂಡ ತುಂಗೆ ಪ್ರಸ್ತದ ಕೋಣೆ ಸೇರಿದರೂ ಅಲ್ಲಿ ಅಳುವೇ ಅವಳಿಗೆ ಜತೆಯಾಯ್ತು. ಅವಳನ್ನು ಸಮಾಧಾನಿಸಲು ಮುಂದಾದ ಮಾರಯ್ಯನ ನಿಷ್ಕಲ್ಮಶ ನಡೆವಳಿಕೆ, ಪ್ರೀತಿ, ಜೀವಕ್ಕೆ ಜೀವ ಕೊಡುವ ಆತನ ಗುಣ ಇವೆಲ್ಲದರ ಅರಿವಾಗಿ ಎಲ್ಲ ಮರೆತು ಅವನಲ್ಲಿ ಒಂದಾದಳು. ಇತ್ತ ಬೋಪಯ್ಯನ ಮೊದಲ ಹೆಂಡತಿ ಏನಾದಳು? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತನೆಯ ಕಂತು.

ಇತ್ತ ಗಂಡ ಬೋಪಯ್ಯನ ಒಲವು ಕಳೆದುಕೊಂಡು  ತನ್ನ ತವರು ಭುವನಗಿರಿ ಸೇರಿದ್ದ  ದೇವಿರಮ್ಮ, ವಯಸ್ಸಿಗೆ ಸಹಜವಾದ ದೇಹದ ಬಯಕೆಯನ್ನು ಹತ್ತಿಕ್ಕಲಾರದೆ, ವರ್ಷ ಒಪ್ಪತ್ತು ಎನ್ನುವುದರೊಳಗೆ ಎದುರು ಮನೆಯ ಶರಣಪ್ಪನ ಮೋಹಕ್ಕೆ ಶರಣಾಗಿ ಬಸಿರು ಕಟ್ಟಿದಳು. ಈ ವಿಷಯ ಅವಳ ಮನೆಯವರಿಗೆ ತಿಳಿಯುವುದರೊಳಗೆ ಕಾಲ ಮೀರಿತ್ತು. ದೇವಿರಮ್ಮನ ಹೊಟ್ಟೆಯಲ್ಲಿದ್ದ  ಪಿಂಡ

ಮನೆಯವರು ಕದ್ದು ಮುಚ್ಚಿ ಕೊಡಿಸಿದ ಯಾವ ನಾಟಿ ಮದ್ದಿಗೂ ಅಲ್ಲಾಡಲಿಲ್ಲ. ಈ ಸುದ್ದಿ ಅವರಿವರ ಕಿವಿಗೆ ಬಿದ್ದು ರಂಪರಾಮಾಯಣ ಆಗುವುದರೊಳಗೆ  ಇದಕ್ಕೊಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ ಮನೆಯವರು, ತರಾತುರಿಯಲ್ಲಿಯೇ ತಮ್ಮ ದೂರದ ನೆಂಟ ಸಿಂಗಾರಿ ಹಳ್ಳಿಯ ಸೀನಪ್ಪನಿಗೆ ಊರಿನ ಕೆಲವು ಹಿರಿಯರ ಸಮ್ಮುಖದಲ್ಲಿ  ಧಾರೆ ಎರೆದು ಕೊಟ್ಟರು.

 ಭುವನಗಿರಿಯ ಪಕ್ಕದ ಊರಾದ ಸಿಂಗಾರಿ ಹಳ್ಳಿಯವನಾದ ಈ ಸೀನಪ್ಪ, ಐದು ವರ್ಷಗಳ ಹಿಂದೆ ಸುಮಿತ್ರಿಯನ್ನು ವರಿಸಿ ಮನೆ ಅಳಿಯನಾಗಿ ಹೆಂಡತಿಯ ಊರಾದ ನಾರಿಪುರ ಸೇರಿಕೊಂಡಿದ್ದ. ಇವರ ಮದುವೆಯಾದ ಕೆಲವೇ ದಿನಗಳಲ್ಲಿ ಸುಮಿತ್ರಿಯ ಅವ್ವ ಅಪ್ಪ ಪ್ಲೇಗಿಗೆ ತುತ್ತಾಗಿ ಒಬ್ಬರ ಹಿಂದೆ ಒಬ್ಬರು ಯಮನ ಪಾದ ಸೇರಿದ್ದರು. ಸುಮಿತ್ರಿ ಒಬ್ಬಳೇ ಮಗಳಾಗಿದ್ದರಿಂದ ಅವಳ ಹರಕು ಮುರುಕು ಆಸ್ತಿಗೆ ಈಗ ಸೀನಪ್ಪನೆ ವಾರಸುದಾರನಾಗಿದ್ದ.

ಸೀನಪ್ಪನೊಂದಿಗೆ ಮದುವೆಯಾಗಿ  ಐದು ವರ್ಷ ಕಳೆದರೂ ಸುಮಿತ್ರಿ ಮಾತ್ರ ನೀರಾಕಿಕೊಳ್ಳುವುದು ನಿಲ್ಲಲಿಲ್ಲ. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಅವಳು ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತು ಬಂದಳು. ಅವರಿವರು ಹೇಳಿದ ಎಲ್ಲಾ ಪೂಜೆ ಪುನಸ್ಕಾರ, ವ್ರತ, ಉಪವಾಸಗಳನ್ನು ನಿಷ್ಠೆಯಿಂದ ಮಾಡಿದಳು.  ಏನು ಪ್ರಯೋಜನವಾಗಲಿಲ್ಲ. ಒಂದು ದಿನ ಸೀನಪ್ಪನಿಗೆ ದುಂಬಾಲು ಬಿದ್ದು ಮಾದಲಾಪುರದ ಗೌರ್ಮೆಂಟ್ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಕೆಲವು ಪರೀಕ್ಷೆಗಳನ್ನು ಮಾಡಿದ ಅಲ್ಲಿನ ವೈದ್ಯರು, ಸುಮಿತ್ರಿಯಲ್ಲಿ ಯಾವ ಸಮಸ್ಯೆಯು ಇಲ್ಲವೆಂದು ಹೇಳಿ, ಸೀನಪ್ಪನಿಗೆ ಇನ್ನಷ್ಟು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಲಹೆ ನೀಡಿ  ಸೋಪಾನ ಪೇಟೆಯ ದೊಡ್ಡಾಸ್ಪತ್ರೆಗೆ ಬರೆದು ಕೊಟ್ಟರು. 

ತನ್ನ ಗಂಡಸುತನಕ್ಕೆ ಎಲ್ಲಿ ಅಪವಾದ ಬಂದು ಬಿಡುವುದೊ ಎಂದು ಹೆದರಿದ ಸೀನಪ್ಪ ದೊಡ್ಡಾಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ. ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯಲು  ಓಲೈಸಿ ಓಲೈಸಿ ಹೈರಾಣದ ಸುಮಿತ್ರಿಯ ತಾಳ್ಮೆಯ ಕಟ್ಟೆಯೊಡೆಯಿತು. ಗಂಡನೊಂದಿಗೆ ಗುದುಮುರಿ ಬಿದ್ದು ನೋಡಿದಳು ಏನು ಪ್ರಯೋಜನವಾಗಲಿಲ್ಲ. ಕೊನೆಗೊಂದು ದಿನ ಮಾತು ನಿಲ್ಲಿಸಿ ಮೌನಕ್ಕೆ ಶರಣಾಗಿ ಬಿಟ್ಟಳು. ಇದೇ ಕೊರಗಿನಲ್ಲಿ ಜನರ ಸಂಪರ್ಕದಿಂದ ದೂರ ಉಳಿದು ಒಬ್ಬಳೇ ಇರತೊಡಗಿದಳು. ತಾನಾಯಿತು ತನ್ನ ಮನೆ ಕೆಲಸವಾಯಿತು ಎಂಬಂತೆ ನಿರ್ಲಿಪ್ತಳಾಗಿ ಬಿಟ್ಟಳು.

ಸದಾ ಜನರೊಂದಿಗೆ ಇರಲು ತುಡಿಯುತ್ತಿದ್ದ ಸುಮಿತ್ರಿ ಇದ್ದಕ್ಕಿದ್ದಂತೆ  ಎಲ್ಲರೊಂದಿಗೂ ಸಂಪರ್ಕ ಕಡಿದು ಕೊಂಡದ್ದನ್ನು ಕಂಡ ಊರಿನ ಜನ “ಇತ್ತಿಚ್ಗೆ ಯಾಕೋ ಸುಮಿತ್ರಿಗೆ ಮೈ ಕೊಬ್ಬು ಹೆಚ್ಚಾಗ್ಬುಟ್ಟೈತೆ ಅದಕ್ಕೆ ಅವಳ್ಗೆ ಯಾರು ಬ್ಯಾಡ್ವಂತೆ” ಎಂದು ಬೆನ್ನ ಹಿಂದೆ ಬೈದಾಡಿಕೊಂಡು ತಾವು ಕೂಡ ಅವಳಿಂದ ಅಂತರ ಕಾಯ್ದು ಕೊಳ್ಳತೊಡಗಿದ್ದರು.  ಒಂದು ದಿನ ಸುಮಿತ್ರಿ ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದು ಮಲಗಿಬಿಟ್ಟಳು. ಮಾತು ಬಿಟ್ಟು ಮುಗುಮ್ಮಾಗಿ ಓಡಾಡುತ್ತಿದ್ದ ಸೀನಪ್ಪ, ಇದನ್ನು ಅವಳ ಹಠಮಾರಿತನ ಎಂದೇ ಭಾವಿಸಿ, ಇವತ್ತಲ್ಲ ನಾಳೆ ಎದ್ದಾಳು ಎಂದುಕೊಂಡು ಕ್ಯಾರೆ ಕೆತ್ತೆ ಎನ್ನಲಿಲ್ಲ. ಪಕ್ಕದಲ್ಲಿಯೇ ಇದ್ದ ಬೋಪಯ್ಯನ ಮನೆಯಲ್ಲಿ ಹೊಟ್ಟೆ ಬಿರಿಯುವಂತೆ ಉಂಡು ತನ್ನ ಪಾಡಿಗೆ ತಾನು ಹೊಲಕ್ಕೆ ಹೋಗಿ ಬಿಡುತ್ತಿದ್ದ.

ಎಂದಿನಂತೆ ಅಂದು ಕೂಡ ಸೀನಪ್ಪ  ಹೊಲದ ಕೆಲಸ ಮುಗಿಸಿ  ಸೀದಾ ಹೊಸನಾರಿ ಪುರಕ್ಕೆ ಹೋದ. ಅಲ್ಲಿದ್ದ ಸಣ್ಣ ಗೂಡಂಗಡಿಯಲ್ಲಿ ಕದ್ದು ಮುಚ್ಚಿ ಮಾರುತ್ತಿದ್ದ  ಸಾರಾಯಿಯನ್ನು ಏರಿಸಿ, ಎದುರು ಸಿಕ್ಕ ಪರಿಚಿತರೊಂದಿಗೆ ಒಂದಷ್ಟು ಹರಟಿ  ತಡವಾಗಿಯೇ ಮನೆಯತ್ತ ಬಂದ. ಬಾಗಿಲು ತೆರೆದೇ ಇತ್ತು. ಒಳಹೋದ.  ಬೆಳಕಿಲ್ಲದೆ ಇಡೀ ಮನೆ ಗವ್ ಎನ್ನುತ್ತಿತ್ತು. ನಾಲ್ಕೈದು ಬಾರಿ ಹೆಂಡತಿಯ ಹೆಸರಿಡಿದು ಕರೆದ ಯಾವ ಉತ್ತರವು ಬರಲಿಲ್ಲ. ಕೊನೆಗೆ ತನ್ನ  ಚಡ್ಡಿ ಜೇಬಿನಲ್ಲಿಟ್ಟು ಕೊಂಡಿದ್ದ ಬೆಂಕಿ ಪೊಟ್ಟಣವನ್ನು ತೆಗೆದು ದೀಪ ಹುಡುಕಿ ಹಚ್ಚಿದ.

 ದೀಪ ಹಿಡಿದ ಸೀನಪ್ಪ ಮಲಗುವ ಕೋಣೆಗೆ ಹೆಜ್ಜೆ ಹಾಕಿದ. ಬೆಳಿಗ್ಗೆ ಹೊಲಕ್ಕೆ ಹೊರಡುವ ಮುನ್ನ  ತನ್ನ ಬಟ್ಟೆ ತೆಗೆದುಕೊಳ್ಳಲು ಈ ಕೋಣೆಗೆ ಬಂದಿದ್ದ. ಆಗ ಸುಮಿತ್ರಿ ಹೇಗೆ ಮಲಗಿದ್ದಳೋ ಈಗಲೂ ಅದೇ ಸ್ಥಿತಿಯಲ್ಲಿ ಮಲಗಿದ್ದನ್ನು ಗಮನಿಸಿದ ಸೀನಪ್ಪನಿಗೆ ತುಸು ಅಳುಕಾಯಿತು. ದೂರದಿಂದಲೇ ಅವಳನ್ನು ಕರೆದು ನೋಡಿದ ಸುಮಿತ್ರಿ ಮಿಸುಕಾಡಲಿಲ್ಲ. ಅವನ ಎದೆ ಜೋರಾಗಿ ಬಡಿದುಕೊಳ್ಳ ತೊಡಗಿತು. ಹತ್ತಿರ ಹೋಗಿ ಅಲುಗಿಸಲು ಅವಳ ತೋಳಿಗೆ ಕೈ ಹಾಕಿದ. ಅವಳ ದೇಹ ಸೆಟೆದುಕೊಂಡು ಮಂಜುಗಡ್ಡೆಯಂತೆ ಕೊರೆಯುತ್ತಿತ್ತು. ಎದ್ದೆನೋ ಬಿದ್ದೆನೋ ಎಂಬಂತೆ  ಪಕ್ಕದ ಬೋಪಯ್ಯನ ಮನೆಗೆ ಓಡಿ ಹೋಗಿ ಮನೆಯವರನ್ನೆಲ್ಲಾ ಕರೆದುಕೊಂಡು ಬಂದ.

ಮಬ್ಬಾದ ದೀಪದ ಬೆಳಕಿನಲ್ಲಿ  ಸುಮಿತ್ರಿ ಅಸ್ಪಷ್ಟವಾಗಿ ಕಾಣುತ್ತಿದ್ದರಿಂದಾಗಿ ನರಸಮ್ಮನಿಗೆ ಇನ್ನಷ್ಟು ಬೆಳಕು ಬೇಕೆನಿಸಿತು. ಸೀನಪ್ಪನ ಮನೆಯ ಕಿಟಕಿಯಲ್ಲಿಯೇ ಸೊಸೆ ದೇವಿರಮ್ಮನನ್ನು ಕರೆದು ಮನೆಯಿಂದ ಇನ್ನೊಂದೆರಡು ದೀಪ ತರಿಸಿಕೊಂಡು ಸುಮಿತ್ರಿಯನ್ನು ಕೂಲಂಕಷವಾಗಿ ಪರೀಕ್ಷಿಸಿ ನೋಡಿದಳು. ಸುಮಿತ್ರಿಯ ಉಗುರು ಕಣ್ಣಿನಿಂದ ಹಿಡಿದು ಇಡೀ ಮೈ ಹಳದಿ ಗಟ್ಟಿತ್ತು. ಕೆಲವು ದಿನಗಳಿಂದ ಗಂಡ ಹೆಂಡತಿಯರ ನಡುವೆ ನಡೆದ ಎಲ್ಲಾ ಘಟನೆಗಳನ್ನು ಸೀನಪ್ಪನಿಂದ ತಿಳಿದು ಕೊಂಡ ನರಸಮ್ಮನಿಗೆ, ಸುಮಿತ್ರಿಯ  ಮೈಯ ಹಳದಿ ಹಿಂದಿದ್ದ ಕಾಮಾಲೆ ರೋಗದ ಸುಳಿವು ಸಿಕ್ಕಿ ಕರುಳು ಕಿತ್ತು ಬಂದಂತಾಗಿತ್ತು. ಬೋಪಯ್ಯನ ಮನೆಯವರೆಲ್ಲಾ ಸೀನಪ್ಪನ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಒಂದಷ್ಟು ಬೈದು ತೆಪ್ಪಗಾದರು. ಎಲ್ಲಾ ಸಂಬಂಧಗಳನ್ನು ಕಳಚಿಕೊಂಡು ನಾರಿಪುರ ಸೇರಿ ತಾನಾಯಿತು ತನ್ನ ಸಂಸಾರವಾಯಿತು ಎಂಬಂತಿದ್ದ ಸೀನಪ್ಪನ ಬೆನ್ನಿಗೆ ನಿಂತ ನರಸಮ್ಮ ರಾಚಪ್ಪಯ್ಯನವರು ತಾವೇ ಮುಂದೆ ನಿಂತು ಸುಮಿತ್ರಿಯ ಎಲ್ಲಾ ಕಾರ್ಯವನ್ನು ಮುಗಿಸಿದರು. 

 ಹೀಗೆ  ಮಿಂಚಂತೆ ಬಂದು ಅಪ್ಪಳಿಸಿದ ಸುಮಿತ್ರಿಯ ಸಾವಿನ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದ ಊರಿನ ಜನರಿಗೆ  ಆ ಗಂಡ ಹೆಂಡತಿಯರ ನಡುವೆ ಎದ್ದಿದ್ದ ವೈಮನಸ್ಸಿನ ಕಾರಣ  ತಿಳಿದು ಬರಲು ಬಹಳ ಸಮಯವೇನು ತೆಗೆದುಕೊಳ್ಳಲಿಲ್ಲ. ಸುಮಿತ್ರಿಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದ ಜನರ ಕೋಪವೆಲ್ಲ  ಈಗ ಸೀನಪ್ಪನ ಕಡೆಗೆ ತಿರುಗಿ “ಹೆಂಡತಿಯನ್ನು ಕೊಂದ ಷಂಡ” ಎಂದು ಆಡಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡರು. 

ಹೀಗೆ, ಸುಮಿತ್ರಿ ಸತ್ತು ಎರಡು ಮೂರು  ವರ್ಷ ಕಳೆದು ಹೋಗಿದ್ದರು ಸೀನಪ್ಪನಿಗೆ ಹೆಣ್ಣು ಕೊಡಲು ಯಾರು ಮುಂದೆ ಬಂದಿರಲಿಲ್ಲ. ಇತ್ತೀಚೆಗೆ ನೀರು ನಿಡಿ ನೋಡುವವರಿಲ್ಲದೆ ಹೇಗೆಂದರೆ ಹಾಗೆ ಬದುಕು ಸವೆಸತೊಡಗಿದ್ದ ಸೀನಪ್ಪನನ್ನು ಒಂಟಿತನ ಬಹಳವಾಗಿ  ಹೈರಾಣ ಮಾಡಿಬಿಟ್ಟಿತ್ತು. ಇಂತಹ  ದುರಿತ ಕಾಲದಲ್ಲಿ  ಭಾಗ್ಯವೋ ಎಂಬಂತೆ ಅಚಾನಕವಾಗಿ ತನ್ನ ಮನೆ ತುಂಬಿದ ದೇವಿರಮ್ಮ ಸೀನಪ್ಪನ ಪಾಲಿಗೆ ಸಾಕ್ಷಾತ್ ದೇವತೆಯೇ ಆಗಿಬಿಟ್ಟಿದ್ದಳು. 

ಸೀನಪ್ಪನಿಗೆ ಅವಳ ಬಗೆಗಿನ ಅಭಿಮಾನ  ಹೆಚ್ಚಾಗಲು ಇನ್ನೂ ಒಂದು ಕಾರಣವೆಂದರೆ,  ಅವನ  ಹೆಂಡತಿ ಸುಮಿತ್ರಿ ಸತ್ತ   ಕೆಲವು ದಿನಗಳವರೆಗೆ ಬೋಪಯ್ಯನ ಹೆಂಡತಿಯಾಗಿದ್ದ ಈ ದೇವಿರಮ್ಮನೆ  ದೂರದ ನೆಂಟ ಎಂಬ ಅಭಿಮಾನದಿಂದ ಅವನ ಊಟ ತಿಂಡಿ ಬಟ್ಟೆ ಬರೆಯ ನಿಗಾ ನೋಡಿಕೊಂಡಿದ್ದಳು. ಇದ್ದಕ್ಕಿದ್ದಂತೆ ಅವಳು ಬೋಪಯ್ಯನ ಮನೆ ತೊರೆದು ತವರು ಸೇರಿದ ಮೇಲೆ ಈ ಸೀನಪ್ಪ ಅಕ್ಷರಶಃ ಅನಾಥನಂತಾಗಿ ಬಿಟ್ಟಿದ್ದ.  ಆ ಒಂದು ಕೃತಜ್ಞತೆಯೂ ಸೇರಿ ಸೀನಪ್ಪ ಮರು ಮಾತಾಡದೆ ದೇವಿರಮ್ಮನ ಬಸುರನ್ನು ಒಪ್ಪಿಕೊಂಡೇ ಅವಳಿಗೆ ತಾಳಿ ಕಟ್ಟಿಕೊಂಡು ಮರಳಿ ನಾರಿಪುರಕ್ಕೆ ಕರೆತಂದಿದ್ದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನು ಓದಿದ್ದೀರಾ? ತುಂಗೆ ಓಡಿದ ರಭಸಕ್ಕೆ ನಡುಗಿಹೋದ ಮಾರಯ್ಯ

ಪ್ರಸ್ತ ನೋಡಲು ರಚ್ಚೆ ಹಿಡಿದ ಚಿಳ್ಳೆ ಪಿಳ್ಳೆಗಳು

You cannot copy content of this page

Exit mobile version