Home ಇಕಾಲಜಿ ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 2

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 2

0

ನಮ್ಮ ಪ್ರಧಾನಮಂತ್ರಿಗಳ ಜೆಟ್ ವಿಮಾನವು ಬಲುದೊಡ್ಡ ಗಾತ್ರ ಹೊಂದಿದ್ದು ಸಾಮಾನ್ಯ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳಿಗಿಂತ ಹೆಚ್ಚು ಕಾರ್ಬನ್ ಅನ್ನು ಗಾಳಿಗೆ ಉಗುಳುತ್ತದೆ. ಇಷ್ಟೊಂದು ಕಾರ್ಬನ್ ಉಗುಳಿಕೊಂಡು ಪ್ರಧಾನಮಂತ್ರಿ ಹುದ್ದೆಯ ಕಾರ್ಯಭಾರಗಳಿಗಿಂತ ಅಷ್ಟು ಮುಖ್ಯವಲ್ಲದ ಚುನಾವಣಾ ಪ್ರಚಾರಕ್ಕೆ ಸ್ವತಃ ನ.ದಾ.ಮೋದಿಯವರು ಬರಲೇಬೇಕೆ? ಅದೂ ಒಂದಲ್ಲ ಹಲವು ಬಾರಿ‌ –  ಕೆ ಎಸ್‌ ರವಿಕುಮಾರ್, ವಿಜ್ಞಾನ ಬರಹಗಾರರು

ನಮ್ಮ ತಿನಿಸು ಮತ್ತು ಕಾರ್ಬನ್

ನ.ದಾ.ಮೋದಿಯವರ ಆಶಯದಂತೆಯೆ ನಮ್ಮೆಲ್ಲರ ಮನೆಯಲ್ಲಿ ಊಟದ ಮೇಜಿದ್ದು ಅಲ್ಲಿ ನಾವು ನಿರುಮ್ಮಳವಾಗಿ ಊಟ ಮಾಡುತ್ತ ಹವಾಮಾನ ಬದಲಾವಣೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದುಕೊಳ್ಳೋಣ. ಅಲ್ಲಿಂದಲೇ ಇನ್ನಷ್ಟು ಆಲೋಚನಾ ಲಹರಿ ಶುರುವಾಗಬಹುದು. ನಿತ್ಯ ಊಟದ ಮೇಜಿಗೆ ತರತರಹದ ತಿನಿಸುಗಳು ಬಂದು ಕೂರುತ್ತವೆ. ಅನ್ನ, ರೊಟ್ಟಿ, ಚಪಾತಿ, ಮುದ್ದೆ, ಮೀನು, ಮಾಂಸ, ಮೊಟ್ಟೆ, ತರಕಾರಿಗಳ ಬಗೆಬಗೆಯ ಮೇಲೋಗರಗಳು, ಉಪ್ಪು, ಕಾಳುಮೆಣಸಿನ ಪುಡಿ, ಮೊಸರು, ಕುಡಿಯುವ ನೀರು ಹೀಗೆ ಏನೆಲ್ಲ ಅವರವರ ಖರೀದಿ ಕಸುವಿಗೆ ತಕ್ಕಂತೆ ಬಂದು ಕೂರಬಹುದು. ಕೆಲವರ ಮನೆಯಲ್ಲಿ ಸದಾ ಬಗೆಬಗೆಯ ಹಣ್ಣುಗಳನ್ನು ಬೋಗುಣಿಯಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಸರಿ, ಇವೆಲ್ಲ ನಮ್ಮ ಊಟದ ಮೇಜಿಗೆ ಎಲ್ಲಿಂದ ಬರುತ್ತವೆ, ಸಂತೆ, ಅಂಗಡಿ, ಸೂಪರ್ ಮಾರ್ಕೆಟ್‍ಗಳಿಂದ ತಾನೆ? ಇವೆಲ್ಲ ಈ ಸ್ಥಳಗಳಲ್ಲಿ ಉತ್ಪತ್ತಿಯಾಗುವುದಿಲ್ಲ.

ಮೀನು ಕೆರೆ, ಕಡಲು, ಕೃತಕ ಹೊಂಡ, ಹೊಳೆಗಳಿಂದ ಬಂದರೆ, ಮೊಸರು ಮೊಟ್ಟೆ ಮಾಂಸಗಳು ಡೈರಿ, ಪೌಲ್ಟ್ರಿ, ಕಸಾಯಿಖಾನೆ, ಜಾನುವಾರು ಸಾಕಣಿಕೆಯ ಹಳ್ಳಿ ನೆಲೆಗಳಿಂದ ಬರುತ್ತವೆ. ತರಕಾರಿ, ಹಣ್ಣುಗಳು ದೂರದ ಹೊಲ, ತೋಟಗಳಿಂದ ಬರುತ್ತವೆ. ಈರುಳ್ಳಿ. ಮೆಣಸಿನಕಾಯಿ, ಸಂಬಾರ ಪದಾರ್ಥಗಳು, ಕಾಳು, ಬೇಳೆ, ಅಕ್ಕಿ, ಗೋಧಿ, ಜೋಳ, ರಾಗಿಗಳು ಸುತ್ತಮುತ್ತಲ ಹೊಲಗದ್ದೆಗಳು ಇಲ್ಲವೇ ದೂರದ ರಾಜ್ಯಗಳಿಂದ ಬರುತ್ತವೆ. ಇವೆಲ್ಲ ನಮ್ಮ ಊಟದ ಮೇಜಿಗೆ ಪೂರ್ಣ ಅಣಿಗೊಳಿಸಿದ ತಿನಿಸಾಗಿ ಬರುವ ಮುನ್ನ ಚೊಕ್ಕಟಗೊಳಿಸಿಲ್ಪಟ್ಟ ಕಚ್ಚಾ ಸಾಮಾಗ್ರಿಗಳಾಗಿ ಕ್ಯಾರಿಯರ್, ಲಾರಿ, ಟ್ರಕ್ಕು, ರೈಲು ಮುಂತಾದವುಗಳಲ್ಲಿ ನಮ್ಮೂರಿಗೆ ಸಾಗಿಸಲ್ಪಟ್ಟಿರುತ್ತವೆ. ಈ ವಾಹನಗಳೆಲ್ಲ ಕಾರ್ಬನ್ ಉಗುಳುವ ಗ್ಯಾಸ್, ಪೆಟ್ರೊಲ್, ಡೀಸೆಲ್ ಮುಂತಾದವನ್ನು ಬಳಸುತ್ತವೆ ಎಂಬುದನ್ನು ನಾವು ಮರೆಯಬಾರದು. ಮತ್ತೆ ಇವನ್ನೆಲ್ಲ ಅಂಗಡಿ, ಬಜಾರುಗಳಿಂದ ನಾವು ಕಾರ್ಬನ್ ಉಗುಳುವ ನಮ್ಮ ವಾಹನಗಳಲ್ಲಿ ಮನೆಗೆ ತರುತ್ತೇವೆ ಎಂಬುದನ್ನೂ ಮರೆಯಬಾರದು. ನಾನು ಊಟದ ವಿಷಯವನ್ನು ಕಾರ್ಬನ್ ಬಿಡುಗಡೆಗೆ ತಳಕು ಹಾಕಿ ಹಸಿವನ್ನು ಬದಿಗೆ ಸರಿಸಿದೆ ಎಂದು ಭಾವಿಸಬೇಡಿ. ಉಣಿಸು ಉಳಿವಿಗೆ ತೀರಾ ಅಗತ್ಯ. ಈ ಅಗತ್ಯದ ಹಿಂದೆ ಕಾರ್ಬನ್ ಬಿಡುಗಡೆಯಾಗುವುದನ್ನು ನಾವು ಗ್ರಹಿಸಬೇಕು. ಜೊತೆಗೆ ಊಟದ ತಟ್ಟೆ, ಎಲೆಗಳಲ್ಲಿ ಹೆಚ್ಚಾಯಿತೆಂದು ತಿನ್ನದೆ ಉಳಿಸಿದ ತಿನಿಸನ್ನ ಕಸಕ್ಕೆ ಎಸೆಯುವ ಅಸಡ್ಡೆಯ ಬಗ್ಗೆಯೂ ನಮಗೆ ಎಚ್ಚರವಿರಬೇಕು. ನಾವು ಬ್ಯಾಟರಿ ಚಾರ್ಜಿಗೆ ಬಳಸುವ ವಿದ್ಯುತ್, ಕಲ್ಲಿದ್ದಲನ್ನು ಸುಟ್ಟು ನಮ್ಮ ಮನೆಗೆ ಬಂದಿರುವುದಾದರೂ ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವುದು ಮುಂದೆ ರೂಢಿಯಾಗಬೇಕು. ಹೀಗೆ ಮಾಡುವುದರಿಂದ ಒಂದು ಹಂತದಲ್ಲಾದರೂ ಕಾರ್ಬನ್ ಬಿಡುಗಡೆ ಇಲ್ಲವಾಗುತ್ತದೆ. ಪ್ರಧಾನಿಯವರ ಊಟದ ಮೇಜಿನ ಹೋಲಿಕೆ ನನಗೆ ಇಷ್ಟೆಲ್ಲ ಆಲೋಚಿಸಲು ಅನುವು ಮಾಡಿಕೊಟ್ಟಿತು. ಜಾಗತಿಕ ನಾಯಕರು ಈ ಹೋಲಿಕೆಯ ಒಳ ಸಂದೇಶವನ್ನು ಗ್ರಹಿಸಿರುವವರೊ ಇಲ್ಲವೊ ಗೊತ್ತಿಲ್ಲ. ಈ ತನಕ ಯಾವ ಪ್ರತಿಕ್ರಿಯೆಯೂ ಅವರಿಂದ ಬಂದಿಲ್ಲ.

ನನ್ನ, ನಿಮ್ಮ ಪ್ರಶ್ನೆ

ಈಗ ಕೇಳುವ ಪ್ರಶ್ನೆ ನನ್ನದು ಮಾತ್ರವಲ್ಲ ನಿಮ್ಮದೂ ಆಗಿರಬಹುದು. ಹವಾಮಾನ ಬದಲಾವಣೆಯನ್ನು ತಡೆಯಲು ಜನಚಳವಳಿ ಬೇಕು ಎನ್ನುವ ಅಧಿಕಾರದ ನಾವೆಯಲ್ಲಿ ವಿಹರಿಸುವ ನಾಯಕರಿಗೆ ತಮ್ಮ ತಮ್ಮ ತಲೆಯ ಲೆಕ್ಕಕ್ಕೆ ಕಾರ್ಬನ್ ಕಡಿತಗೊಳಿಸುವ ಹೊಣೆ ಅನ್ವಯಿಸಬೇಕೊ ಬೇಡವೊ? ಇಪ್ಪತ್ತನಾಲ್ಕು ಗಂಟೆ ಅಧಿಕಾರದ ಗಡುವನ್ನು ಅನುಭವಿಸುವ ನಾಯಕರ ಬದುಕಿನಲ್ಲಿ ಆಡಳಿತಾತ್ಮಕ ಜವಾಬುದಾರಿಗಳ ನಡುವೆಯೆ ವೈಯುಕ್ತಿಕ ಆಸೆ, ಅಗತ್ಯಗಳೂ ಪೂರೈಸಿಕೊಳ್ಳಲ್ಪಡಬೇಕು. ಇದರಲ್ಲಿ ಅವರ ಪಕ್ಷ ರಾಜಕಾರಣವೂ ಸೇರಿರುತ್ತೆ. ನ.ದಾ.ಮೋದಿಯವರು 2021ರಲ್ಲಿ ಗ್ಲಾಸ್ಗೋದಲ್ಲಿ ಜರುಗಿದ ವಿಶ್ವಸಂಸ್ಥೆಯ COP26 ಸಮ್ಮೇಳನದಲ್ಲಿ ಭಾಗವಹಿಸಿ ಬಂದರು. ಅಲ್ಲಿ ಮಾತನಾಡುತ್ತ 2070ನೇ ಇಸವಿಯ ಹೊತ್ತಿಗೆ ಭಾರತ ಸೊನ್ನೆ ಕಾರ್ಬನ್ ಸಾಧನೆ ಮಾಡಲಿದೆ ಎಂದು ಘೋಷಿಸಿ ಬಂದರು. ಈ ಕಾಲಾವಕಾಶ ಜಗತ್ತಿನ ಬೇರೆಲ್ಲ ದೇಶಗಳ ಗುರಿಗೆ ಹೋಲಿಸಿದರೆ ಬಹಳ ಹೆಚ್ಚೇ ಎನ್ನಬೇಕು. 2060ರ ಗುರಿ ಇಟ್ಟುಕೊಂಡಿರುವ ಚೀನಾ ಹೊರತುಪಡಿಸಿ ಜಗತ್ತಿನ ಬಹುತೇಕ ದೇಶಗಳು 2050ರ ಹೊತ್ತಿಗೆ ಸೊನ್ನೆ ಕಾರ್ಬನ್ ಗುರಿಗೆ ಬದ್ಧವಾಗಿವೆ.

ನನಗೆ ಈಗಲೂ ಅರ್ಥವಾಗಿಲ್ಲ, ನ.ದಾ.ಮೋದಿಯವರು 2070ನೇ ಗುರಿಯ ಮೊಳೆಗೆ ಭಾರತವನ್ನು ಯಾಕೆ ತೂಗುಹಾಕಿ ಬಂದರು ಅಂತ! ಅವರು ಗ್ಲಾಸ್ಗೋದಿಂದ ಬಂದ ಮರು ವರುಷದಿಂದಲೇ 99 ಹೊಚ್ಚಹೊಸ ಕಲ್ಲಿದ್ದಿಲು ಗಣಿಗಾರಿಕೆಯ ರಹದಾರಿಯನ್ನು ಖಾಸಗೀ ಕಂಪೆನಿಗಳಿಗೆ ಒಕ್ಕೂಟ ಸರ್ಕಾರವು ಹರಾಜು ಹಾಕಿತು. ಕೆಲವು ಹರಾಜುಗಳಲ್ಲಿ ಹಗರಣದ ವಾಸನೆ ಕೂಡಾ ಮೂಗಿಗಡರಿದೆ. ನ.ದಾ.ಮೋದಿಯವರಿಗೆ ‘ಆತ್ಮೀಯ’ರಾದ ಅದಾನಿ ಕಂಪೆನಿಗಳ ಸಮೂಹವು ಕಳೆದ ಮಾರ್ಚಿಯಲ್ಲಿ ಅತಿ ಕಡಿಮೆ ಬಿಡ್ಡಿಂಗ್‍ನಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಕಲ್ಲಿದ್ದಲು ಗಣಿಗಾರಿಕೆಯ ಲೈಸೆನ್ಸ್ ಪಡೆಯಿತು. ಹರಾಜಿನಲ್ಲಿ ಅದಾನಿ ಕಂಪೆನಿಯು ಸೇರಿದಂತೆ ಭಾಗವಹಿಸಿದ ಇನ್ನೊಂದೇ ಒಂದು ಕಂಪೆನಿಯೆಂದರೆ Cavill Mining Private Limited. ಇದೂ ಕೂಡಾ ಅದಾನಿ ಸಮೂಹಕ್ಕೆ ‘ಹಿಂಬಾಗಿಲಿ’ನಿಂದ ಕೂಡಿಕೊಳ್ಳುವ ಕಂಪೆನಿಯಂತೆ. ಅದಾನಿ ಸಮೂಹದ ಒಟ್ಟು ಆದಾಯದಲ್ಲಿ ಶೇಕಡಾ 60 ರಷ್ಟು ಕಲ್ಲಿದ್ದಿಲಿನ ತರಾವರಿ ವ್ಯವಹಾರಗಳಿಂದ ಬರುತ್ತದೆ ಎಂದು ವಿಕಿಪಿಡಿಯಾ ಬರೆಯುತ್ತದೆ. ಅಂದಮೇಲೆ ಭಾರತದಲ್ಲಿ ಕಲ್ಲಿದ್ದಿಲಿನ ಸಧ್ಯದ ಅವಲಂಬನೆ ಯಾರಿಗಾಗಿ, ಯಾಕಾಗಿ ಅಂತ ನಿಮಗೆಲ್ಲ ಈಗ ಗೊತ್ತಾಗಿರಬೇಕು?

ಈಗ ಹೊಸ ಹೊಸ ಪ್ರದೇಶಗಳು ಗಣಿಗಾರಿಕೆಯ ಕುಣಿಕೆಗೆ ಕೊರಳು ಒಡ್ಡುತ್ತಿವೆ. ಪಳೆಯುಳಿಕೆ ಇಂಧನವಾದ ಕಲ್ಲಿದ್ದಿಲಿನ ಅವಲಂಬನೆ ಕಮ್ಮಿಯಾಗಬೇಕು (phasing out) ಎನ್ನುತ್ತಲೇ ಒಕ್ಕೂಟ ಸರ್ಕಾರ ಯಾಕೆ ಮತ್ತಷ್ಟು ಕಲ್ಲಿದ್ದಿಲಿನ ಕಾವಿನಲ್ಲಿ ಪಿರ್ರೆ ಕಾಯಿಸಲು ಹೊರಟಿದೆ? ಈಗ ಶೇಕಡಾ 70ರಷ್ಟು ಕಲ್ಲಿದ್ದಿಲನ್ನು ಸುಟ್ಟು ಭಾರತದಲ್ಲಿ ವಿದ್ಯುತ್ತನ್ನು ಪಡೆಯಲಾಗುತ್ತಿದೆ. ಮುಂಬರುವ ವರುಷಗಳಲ್ಲಿ ಭಾರತ ಉಪಖಂಡವು ಬಿಸಿಯಲೆಗಳು ಮತ್ತು ದಿಡೀರ್ ಬರಗಳಿಗೆ ಸಿಲುಕುವ ಸಾಧ್ಯತೆ ಹೆಚ್ಚಿರುವುದರಿಂದ ಕಲ್ಲಿದ್ದಿಲನ್ನು ಉರಿಸುವುದೂ ಇನ್ನೂ ಹೆಚ್ಚಲಿದೆ.

ಹಾರುವ ಅರಮನೆ

ಕಲ್ಲಿದ್ದಿಲನ್ನು ಒಂದು ಕಡೆ ವಿಪರೀತ ಉತ್ತೇಜಿಸುವ ಒಕ್ಕೂಟ ಸರ್ಕಾರವಿದ್ದರೆ ಇನ್ನೊಂದು ಕಡೆ ನಮ್ಮ ಪ್ರಧಾನಿಯವರ ಆದ್ಯತೆಗಳು ಹೇಗಿವೆ ಎಂಬುದನ್ನು ನಾವು ತಿಳಿದರೆ ತಪ್ಪಾಗಲಾರದು. ಹಿಂದೆ ಆಗಿಹೋದ ಸ್ವತಂತ್ರ ಭಾರತದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಉಪ-ರಾಷ್ಟ್ರಪತಿಗಳು ಏರ್‍ಇಂಡಿಯಾಕ್ಕೆ ಸೇರಿದ ಇದ್ದುದರಲ್ಲಿ ಗಟ್ಟಿಮುಟ್ಟಾದ ಮತ್ತು ಕೊಂಚ ಮಾರ್ಪಾಟು ಹೊಂದಿದ Air India Boeing 747-400 ವಿಮಾನವನ್ನೆ ಬಳಸುತ್ತ ಬಂದಿದ್ದರು. ಆದರೆ ನಮ್ಮ ನ.ದಾ.ಮೋದಿಯವರು ತುಂಬಾ ವಿಭಿನ್ನ ವ್ಯಕ್ತಿತ್ವ ಹೊಂದಿದವರು. ಹಿಂದಿನವರಿಗಿಂತ ಹೆಚ್ಚಾಗಿ ದಿನದ 18 ತಾಸು ‘ದುಡಿ’ಯುತ್ತ ಕ್ರಿಯಾಶೀಲವಾಗಿ ಆಲೋಚಿಸಬಲ್ಲವರು. ಅವರ ಒಕ್ಕೂಟ ಸರ್ಕಾರವು ಅಮೆರಿಕಾದ Boeing Commercial Airplanes ಕಂಪೆನಿಗೆ 2016ರಲ್ಲಿ ವಿಶೇಷ ಹೇಳಿಕೆ ಸಲ್ಲಿಸಿ Special Extra Section Flight (SESF-VVIP transport) ಮಾದರಿಯ ಎರಡು Boeing 777-300 Extended Range ವಿಮಾನಗಳನ್ನು 8,458 ಕೋಟಿ ರೂಪಾಯಿ ತೆತ್ತು ಖರೀದಿಸಿತು. ಒಂದು ಪ್ರಧಾನಮಂತ್ರಿಗಳಿಗಾದರೆ, ಇನ್ನೊಂದು ರಾಷ್ಟ್ರಪತಿ ಮತ್ತು ಉಪ-ರಾಷ್ಟ್ರಪತಿಗಳಿಗೆ ಎಂದು. ಇವು ನಿಜಕ್ಕೂ ಹಾರುವ ಅರಮನೆಗಳೇ ಸರಿ (ಜಗತ್ತಿನಲ್ಲಿ ಟ್ರಂಪ್ ಬಿಟ್ಟರೆ ನ.ದಾ.ಮೋದಿಯವರ ಬಳಿಯೆ ಇಂತಹ ಬೋಯಿಂಗ್ ವಿಮಾನವಿರುವುದು ಎಂದು ಹೇಳಲಾಗುತ್ತಿದೆ). ಎರಡು ವರುಷಗಳ ಕಾಲ ಬೇಕಾದ ಹಾಗೆ ಮಾರ್ಪಾಟುಗಳನ್ನು ಮಾಡಿಸಿಕೊಂಡ, ಒಂದು ವಿಮಾನ ಹೊಂದಬಹುದಾದ ಎಲ್ಲ ಬಗೆಯ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಇರುವ ನಮ್ಮ ಪ್ರಧಾನಮಂತ್ರಿಗಳ ಜೆಟ್ ವಿಮಾನವು ಬಲುದೊಡ್ಡ ಗಾತ್ರ ಹೊಂದಿದ್ದು ಸಾಮಾನ್ಯ ಪ್ರಯಾಣಿಕ ಮತ್ತು ಕಾರ್ಗೊ ವಿಮಾನಗಳಿಗಿಂತ ಹೆಚ್ಚು ಕಾರ್ಬನ್ ಅನ್ನು ಗಾಳಿಗೆ ಉಗುಳುತ್ತದೆ. ನ್ಯಾಫ್ತಾ, ಗ್ಯಾಸೊಲಿನ್ ಮತ್ತು ಸೀಮೆಎಣ್ಣೆಯಂತಹ ಪೆಟ್ರೋಲಿಯಮ್ ಉತ್ಪನ್ನಗಳ ಬೇರೆಬೇರೆ ಬಗೆಯ ಮಿಶ್ರಣವನ್ನು ಜೆಟ್ ಫ್ಯೂಯೆಲ್ (Aviation Turbine Fuel,ATF ಎಂದೂ ಕರೆಯುತ್ತಾರೆ) ಎಂದು ಹೆಸರಿಸಿ ಜೆಟ್ ವಿಮಾನಗಳಲ್ಲಿ ಬಳಸುತ್ತಾರೆ.

ಸಾಮಾನ್ಯವಾಗಿ 777 ಸರಣಿಯ ಬೋಯಿಂಗ್ ಜೆಟ್ ವಿಮಾನಗಳು ತಾಸಿಗೆ 6,080ರಿಂದ 7,500 ಲೀಟರ್ ಜೆಟ್ ಫ್ಯೂಯೆಲ್ ಅನ್ನು ಬಳಸುತ್ತವೆ. ಅಂದರೆ ಸೆಕೆಂಡಿಗೆ 1.68ರಿಂದ 2.08 ಲೀಟರ್‍ಗಳು. ಮನುಷ್ಯರೂ ಸೇರಿದಂತೆ ಒಳಗಿರುವ ಸರಕು ಸಾಮಾಗ್ರಿಗಳ ತೂಕ, ಹಾರುವ ವೇಗ, ಎತ್ತರ ಮತ್ತು ಗಾಳಿಯ ವೇಗ, ಒತ್ತಡಗಳೂ ಇಂಧನ ಬಳಕೆಯ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ಪ್ರತೀ ಒಂದು ಕಿ.ಗ್ರಾಂ. (ಬಹುತೇಕ ಒಂದು ಲೀಟರಿಗೆ ಸಮ) ಜೆಟ್ ಫ್ಯೂಯೆಲ್ ಉರಿದಾಗ 3.16 ಕಿ.ಗ್ರಾಂ. ಕಾರ್ಬನ್(ಡೈಆಕ್ಸೈಡ್) ಗಾಳಿಗೆ ಬಿಡುಗಡೆಯಾಗುತ್ತದೆ. ದೆಹಲಿ ಮತ್ತು ಬೆಂಗಳೂರುಗಳ ನಡುವಿನ ಆಗಸ ದೂರ (Aerial distance) 1,740 ಕಿ.ಮೀ.ಗಳು. ಈ ದೂರ ಕ್ರಮಿಸಲು ಜೆಟ್ ವಿಮಾನಕ್ಕೆ 2 ತಾಸು ಸಾಕು ಎಂದಾದರೆ ಒಂದು ಪ್ರಯಾಣದಲ್ಲಿ ಅದು 12,160ರಿಂದ 15,000 ಲೀಟರ್‌ಗಳಷ್ಟು ಜೆಟ್ ಫ್ಯೂಯೆಲ್ ಬಳಸಿತು ಎನ್ನಬಹುದು. (ಅಲ್ಲಿಗೆ ಪ್ರತೀ ಸೆಕೆಂಡಿಗೆ 3.36ರಿಂದ 4.16 ಲೀಟರ್ ಉರಿದಿರಬೇಕು). ಹಾಗಿದ್ದರೆ ಕಾರ್ಬನ್ ಎಷ್ಟು ಬಿಡುಗಡೆಯಾಗಬಹುದು? ಮೇಲಿನ ಲೆಕ್ಕದಂತೆ 2 ತಾಸಿಗೆ 38,425.6 ಕಿ.ಗ್ರಾಂ.ನಿಂದ 47,400 ಕಿ.ಗ್ರಾಂ.ಗಳು! ವಾಪಾಸಾಗಲು ಮತ್ತೆ ಇಷ್ಟೇ ಕೂಡಿಕೊಳ್ಳಿ. ಅಲ್ಲಿಗೆ ಒಮ್ಮೆ ದೆಹಲಿಯಿಂದ ಬೆಂಗಳೂರಿಗೆ ಬಂದು ಮತ್ತೆ ದೆಹಲಿಗೆ ಮರಳಲು 76,851.2ರಿಂದ 94,800 ಕಿ.ಗ್ರಾಂ.ನಷ್ಟು ಕಾರ್ಬನ್ ಅನ್ನು ಒಂದು ಜೆಟ್ ವಿಮಾನ ಉಗುಳುತ್ತದೆ (ನೆನಪಿರಲಿ, ಇದೊಂದು ಕಚ್ಚಾ ಲೆಕ್ಕ. ಕಾರ್ಬನ್ ಪ್ರಮಾಣ ಕೊಂಚ ಆಚೀಚೆ ಆಗಬಹುದು)

ಇಷ್ಟೊಂದು ಕಾರ್ಬನ್ ಉಗುಳಿಕೊಂಡು ಪ್ರಧಾನಮಂತ್ರಿ ಹುದ್ದೆಯ ಕಾರ್ಯಭಾರಗಳಿಗಿಂತ ಅಷ್ಟು ಮುಖ್ಯವಲ್ಲದ ಚುನಾವಣಾ ಪ್ರಚಾರಕ್ಕೆ ಸ್ವತಃ ನ.ದಾ.ಮೋದಿಯವರು ಬರಲೇಬೇಕೆ? ಅದೂ ಒಂದಲ್ಲ ಹಲವು ಬಾರಿ. ಈವರೆಗೆ ಈ ಹಿಂದೆ ಯಾವ ಪ್ರಧಾನಿಗಳೂ ಪಾಲ್ಗೊಳ್ಳದಷ್ಟು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಅವರು ಇನ್ನುಮುಂದೆ ತಾವು ಕುಳಿತಲ್ಲಿಂದಲೇ ಒಂದು ಭಾಷಣ ಮಾಡಿ ವಿಡಿಯೊ ಪ್ರಸಾರ ಮಾಡಿಸಬಹುದಲ್ಲವೆ? ಹೇಗಿದ್ದರೂ ದೇಶದ (ಅಪವಾದಗಳ ಹೊರತಾಗಿ) ಬಹುತೇಕ ಪ್ರಿಂಟ್ ಮತ್ತು ಟಿವಿ ಚಾನೆಲ್‍ಗಳು ನ.ದಾ.ಮೋದಿಯವರು ಮತ್ತು ಅವರ ಪಕ್ಷದ ಬಗ್ಗೆ ‘ವಿಶೇಷ’ ಅಕ್ಕರೆ ಹೊಂದಿರುವ ಕಾರಣ ಪ್ರಧಾನಿಯವರ ಕನಸು, ಆಶಯ, ಅನಿಸಿಕೆ, ಟೀಕೆ, ದೂರು ದುಮ್ಮಾನಗಳನ್ನು ಹೆಚ್ಚು ಸಮಯಾವಕಾಶ ಕೊಟ್ಟು ಮೊದಲ ಆದ್ಯತೆಯಾಗಿ ಜನರಿಗೆ ತಲುಪಿಸುವುದರಿಂದ ಪ್ರಧಾನಿಯವರು ಕಾರ್ಬನ್ ಕಡಿತಗೊಳಿಸುವ ಕಡೆ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ಕೊಡಬೇಕು. ಭಾರತದ ಪ್ರಧಾನಿಗಳಲ್ಲೆ ಅತಿ ಕಡಿಮೆ ಗಡುವಿನಲ್ಲಿ ಅತಿ ಹೆಚ್ಚು ವಿಮಾನ ಪ್ರಯಾಣ ಮಾಡಿದವರೆಂದರೆ ಬಹುಶಃ ನ.ದಾ.ಮೋದಿಯವರೆ ಇರಬೇಕು. ಚುನಾವಣಾ ಸಂಬಂಧಿ ರೋಡ್‍ಶೋ, ರ್ಯಾಲಿಗಳಿಗೆ ಬಂದಾಗ ಕಾರ್ಬನ್ ಉಗುಳುವ ಅತ್ಯಾಧುನಿಕ ಕಾರುಗಳು ಮತ್ತು ಹೆಲಿಕಾಪ್ಟರ್ ಗಳ ಬಳಕೆಯ ಬಗ್ಗೆಯೂ ಅವರು ಆಲೋಚಿಸಬೇಕು. ಅವರ ಭಾರೀ ಬಂದೋಬಸ್ತ್ ಕಾರಿನ ಹಿಂದೆ ಮುಂದೆ ಸಾಲುಗಟ್ಟಲೆ ಕಮಾಂಡೊ ವಾಹನಗಳು ಓಡುತ್ತವೆ. ಅವು ಕೂಡಾ ತಮ್ಮ ಪಾಲಿನ ಕಾರ್ಬನ್ ಅನ್ನು ಹೊರಹಾಕುತ್ತವೆ.

(ಮುಂದುವರಿಯುವುದು…)

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ : 9964604297

ಇದನ್ನು ಓದಿದ್ದೀರಾ?-ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1

You cannot copy content of this page

Exit mobile version