“..ಬಾಬಾ ಸಾಹೇಬರು ದಮನಿತರ, ಬಹುಸಂಖ್ಯಾತ ಶೂದ್ರರ, ಎಲ್ಲ ಮಹಿಳೆಯರ ಪಾಲಿನ ಅತಿ ದೊಡ್ಡ ವಿಮೋಚಕ ಎಂದು ಅರ್ಥವಾಗಲು ಇನ್ನೆಷ್ಟು ದಿನ ಬೇಕು.?..” ತಪ್ಪದೇ ಓದಿ
ಬುದ್ಧನ ದಾರಿಯ ಕಡೆಗೆ ಬಾಬಾ ಸಾಹೇಬರು ತಿರುಗಿದ್ದೇಕೆ?
ಈ ಉಪಖಂಡವು 2500 ವರ್ಷಗಳ ಕಾಲ ನಿರಂತರವಾಗಿ ಮಾಡಿದ ಹೋರಾಟ ಮತ್ತು ಕಂಡ ಕನಸಿನ ಮೂರ್ತ ರೂಪವೆ ಬಾಬಾ ಸಾಹೇಬರು ಮತ್ತು ಅವರು ರಚಿಸಿದ ಸಂವಿಧಾನ. ಹುಟ್ಟನ್ನು ಕಾರಣ ಮಾಡಿಕೊಂಡು ಮನುಷ್ಯರನ್ನು ದಮನಿಸಿ ಗುಲಾಮಗಿರಿಗೆ ತಳ್ಳುವುದನ್ನು ವಿರೋಧಿಸಿ ಹಲವು ಹೋರಾಟಗಳು ಇಲ್ಲಿ ನಡೆದಿವೆ. ಬಾಬಾ ಸಾಹೇಬರು ಹಿರಿಯರ ತ್ಯಾಗದ ಋಣ ಸಂದಾಯ ಮಾಡಲೆಂಬಂತೆ ಹಠಕ್ಕೆ ಬಿದ್ದು ಅಧ್ಯಯನ ಮಾಡಿ ಸಂವಿಧಾನ ರೂಪಿಸಿದರು. ಕಡೆಗೆ ಬುದ್ಧನ ಜಾಡು ಹಿಡಿದು ನಡೆದರು.
ಇಲ್ಲಿ. ಕ್ರಿ.ಪೂ 900 ರ ಆಸುಪಾಸಿನಲ್ಲಿ ಮೊದಲ ಬಾರಿಗೆ ವರ್ಣ ವ್ಯವಸ್ಥೆಯ ಪ್ರಸ್ತಾಪವಾಗಿದೆ. ಮೊದಲ ದಾಖಲೆ ಸಿಗುವುದು ಋಗ್ವೇದದಲ್ಲಿ. ಅದರ 10 ನೇ ಮಂಡಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ವಿರಾಟ್ ಪುರುಷನ ದೇಹದಿಂದ ಹುಟ್ಟಿದರು ಎಂದು ಪ್ರಸ್ತಾಪಿಸಲಾಗಿದೆ.”ಬ್ರಾಹ್ಮಣೋsಸ್ಯ ಮುಖಮಾಸೀದ್ ಬಾಹೂ ರಾಜನ್ಯಃ ಕೃತಃ! ಊರೂ ತದಸ್ಯ ಯದ್ ವೈಶ್ಯಃ ಪದ್ ಭ್ಯಾಂ ಶೂದ್ರೋ ಅಜಾಯತ!!”. ಎಂಬ ಋಚೆಯು ಪುರುಷ ಸೂಕ್ತದಲ್ಲಿ ಇದೆ.
ಋಗ್ವೇದದ ನಂತರ ವರ್ಣ ವ್ಯವಸ್ಥೆಯು ಇನ್ನಷ್ಟು ಬಿಗಿಯಾಗುತ್ತಾ ಹೋಯ್ತು. ಆಗ ಆಳುವವರು ಮತ್ತು ಗುಲಾಮರು ಸೃಷ್ಟಿಯಾದರು ಎಂದು ಇತಿಹಾಸವು ದಾಖಲಿಸಿದೆ.
ಬುದ್ಧ ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿದ್ದ. ಅವನ ಕಾಲಕ್ಕೆ ವೃತ್ತಿಯಾಧರಿಸಿ ಜಾತಿಗಳು ನಿರ್ಮಾಣವಾಗಲಾರಂಭಿಸಿದ್ದವು. ಹುಟ್ಟಿನಿಂದಲೆ ಜಾತಿಗಳ ನೊಗ ಹೊತ್ತು ಬರುವ ಮಕ್ಕಳು ಬಿಡುಗಡೆಯೆ ಇಲ್ಲದಂತೆ ಗುಲಾಮಗಿರಿಯ ಕರಿನೀರ ಜೈಲಿನಲ್ಲಿಯೆ ಇರಬೇಕಾದ ಘನಘೋರ ಪ್ರಮೇಯವನ್ನು ಬುದ್ಧ ಪ್ರಬಲವಾಗಿ ವಿರೋಧಿಸಿದ್ದ. ಆದರೂ ಸಮಾಜ ಪುರೋಹಿತಶಾಹಿಯ ಪದಾಘಾತಕ್ಕೆ ಸಿಕ್ಕಿಕೊಂಡಿತು. ತನ್ನ ಕಾಲು ಇನ್ನೊಬ್ಬರ ತಲೆಯ ಮೇಲಿದ್ದರೆ ಸಾಕು ತನ್ನ ತಲೆಯ ಮೇಲೆ ಎಷ್ಟು ಬೇಕಾದರೂ ಭಾರ ಹೊತ್ತೇನು, ಬೆಂಕಿ ಬಾರುಗೋಲಿನ ಹೊಡೆತ ತಿಂದೇನು, ನಾಯಿಗಿಂತಲೂ ಕಡೆಯಾಗಿ ಬಾಳಿದರೂ ಖುಷಿಪಟ್ಟೇನು ಎಂಬ ಸ್ಥಿತಿಗೆ ತಲುಪಿದರು.
ವಿಜ್ಞಾನದ ಇತ್ತೀಚಿನ ಪ್ರಮುಖ ಅಧ್ಯಯನ ಸಾಧನವಾದ ತಳಿವಿಜ್ಞಾನವು ಕ್ರಿ. ಪೂ 500 ರ ಆಸುಪಾಸಿಗೆ ಒಳಬಾಂಧವ್ಯ ವಿವಾಹಗಳು ಇಲ್ಲಿ ಪ್ರಾರಂಭವಾಗಿವೆಯೆಂದು ಪ್ರಮೇಯಗಳನ್ನು ಮಂಡಿಸುತ್ತಿದೆ. ಜಾತಿ ವ್ಯವಸ್ಥೆಯ ಪ್ರಮುಖ ಆಧಾರಗಳಲ್ಲಿ ಒಳಬಾಂಧವ್ಯ ಮದುವೆಗಳೂ ಇವೆ.
ಶೂದ್ರ, ಸ್ತ್ರೀ, ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುತ್ತಿರುವ ದಮನಗಳಿಗೆ ಈ ಉಪಖಂಡದಲ್ಲಿ 2500-3000 ವರ್ಷಗಳಷ್ಟು ಇತಿಹಾಸವಿದೆ.ಇವುಗಳ ವಿರುದ್ಧ ಗಾರ್ಗಿಯಂತಹ ಬ್ರಹ್ಮವಾದಿನಿಯರು ಪ್ರತಿಭಟನಾತ್ಮಕ ಹಾಗೂ ಪರ್ಯಾಯ ಪ್ರಮೇಯಗಳನ್ನು ಮಂಡಿಸಿದ್ದಾರೆಂಬ ಉಲ್ಲೇಖಗಳಿವೆ. ಆದರೆ ಬುದ್ಧನೆ ಆದಿಮ ಪ್ರಬಲ ಪ್ರತಿಭಟನಕಾರ, ಪರ್ಯಾಯ ಪ್ರಮೇಯಕಾರ.
ಬುದ್ಧನ ಕಾಲದಿಂದಲೂ ಅಸಂಖ್ಯಾತರು ಹುಟ್ಟಿನ ನೆಪದಲ್ಲಿ ಮನುಷ್ಯರ ನಡುವೆ ತಾರತಮ್ಯ ಮಾಡಿ ಅವರ ಚೈತನ್ಯವನ್ನೆ ನಾಶಮಾಡಿದ್ದರ ಕುರಿತು ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಪ್ರತಿಭಟನೆ ಮಾಡಿದ್ದಾರೆ. ಪರ್ಯಾಯಗಳ ಕುರಿತು ಪ್ರಮೇಯಗಳನ್ನು ಮಂಡಿಸಿದ್ದಾರೆ. ಭಕ್ತಿ, ಶರಣ ಚಳುವಳಿ, ಆಧುನಿಕ ಕಾಲಘಟ್ಟದಲ್ಲಿ ನಡೆದ ವೈಚಾರಿಕ ಚಳುವಳಿಗಳು ಮನುಷ್ಯನ ಘನತೆಯ ಹಕ್ಕಿಗಾಗಿ ನಡೆದಿವೆ.
ಜೀವಂತ ಹೆಣ್ಣನ್ನು ಸುಡುವ, ಹಸುಗೂಸುಗಳಿಗೆ ಮದುವೆ ಮಾಡಿ ದುರಂತಗಳಿಗೆ ಹಣೆಬರಹ, ಪುನರ್ಜನ್ಮದ ಪ್ರಮೇಯಗಳನ್ನು ರೂಪಿಸಿ ಸಂಭ್ರಮಿಸುವ ಕ್ರೌರ್ಯಗಳ ವಿರುದ್ಧ ಹೋರಾಟಗಳು ನಡೆದಿವೆ.
ಶೂದ್ರರ ಘನತೆಗಾಗಿ ಜಸ್ಟೀಸ್ ಪಾರ್ಟಿ ಮುಂತಾದವುಗಳೂ ಹೋರಾಟ ನಡೆಸಿವೆ.
ಶರಣರು ಅಸ್ಪೃಶ್ಯರೆನ್ನಿಸಿಕೊಂಡ , ಮಹಿಳೆಯರ ಘನತೆಯನ್ನು ಪ್ರತಿಪಾದಿಸಿ ಪ್ರಧಾನ ಹೋರಾಟವನ್ನು ರೂಪಿಸಿದ್ದರು.
ಚರಿತ್ರೆಯಲ್ಲಿನ ಈ ಹೋರಾಟಗಳು ಪದೆ ಪದೆ ದುರಂತಗಳಿಗೆ ಒಳಗಾಗಿವೆ. ಮುಳ್ಳುಕಂಟಿಗಳ ಹಾದಿಯನ್ನು ಸಾಧ್ಯವಾದಷ್ಟು ದುರಸ್ತು ಮಾಡಿ ತುಸು ಮಟ್ಟಿಗಾದರೂ ಸಹನೀಯಗೊಳಿಸಲು ಪ್ರಯತ್ನಿಸಿದ್ದವು ಎಂಬುದಷ್ಟೆ ಸಮಾಧಾನದ ಸಂಗತಿ.
ಇಷ್ಟು ದೀರ್ಘ ತ್ಯಾಗದ ಹಾದಿಯಲ್ಲಿ, ಸಮಾಜಗಳ ಕನಸುಗಳ, ಕಂಬನಿಯ, ದೀರ್ಘಕಾಲದ ಬೇಡಿಕೆಯ ಫಲವಾಗಿ ರೂಪುಗೊಂಡವರು ಬಾಬಾ ಸಾಹೇಬರು.
ದುಡಿವವರ, ಅಸ್ಪೃಶ್ಯರೆನ್ನಿಸಿಕೊಂಡವರ ದುರಂತಗಳು ಶುರುವಾದದ್ದೆಲ್ಲಿ ಎಂದು ಚರಿತ್ರೆಯನ್ನು ಶೋಧಿಸಿ ಹುಣ್ಣಿನ ಬೇರುಗಳನ್ನು ಕಿತ್ತೆಸೆದು ವಾಸಿ ಮಾಡುವುದು ಹೇಗೆ? ಅದಕ್ಕೆ ಬೇಕಾದ ಮದ್ದುಗಳೇನು? ಎಂದು ಎಡಬಿಡದೆ ಅಧ್ಯಯನ ಮಾಡಿದ್ದರು. 2500 ವರ್ಷಗಳ ಕಾಲ ನೂರಾರು ತಲೆಮಾರುಗಳ ಬೀಜ ಒಡೆದು, ನೆನಪುಗಳನ್ನು ನಾಶ ಮಾಡಿ ಗುಲಾಮಗಿರಿಗೆ ಬಗ್ಗಿಸಿ ಆಳ್ವಿಕೆ ಮಾಡಲಾಗುತ್ತಿತ್ತು. ಗುಲಾಮಗಿರಿಗಿಂತ , ಕವಿದುಕೊಂಡ ವಿಸ್ಮೃತಿಯ ಕತ್ತಲಿಗಿಂತ ಭೀಕರ ಕ್ಯಾನ್ಸರು ಇರಲಿಕ್ಕಿಲ್ಲ ಎಂದು ಅರಿತು ಮದ್ದು ಹುಡುಕಿದ ಮಾನವ ಕುಲದ ಮಹಾ ವೈದ್ಯ ಅವರು.
ದೇಶದಲ್ಲಿ ಸುಮಾರು 120 ಕೋಟಿಗಿಂತ ಹೆಚ್ಚಿಗೆ ಇರುವ ಶೂದ್ರ, ಮಹಿಳೆ ಮತ್ತು ಎಲ್ಲ ದಮನಿತರ ಉಸಿರಾಟದ ಸ್ವಾತಂತ್ರ್ಯದ ಹಿಂದೆ ಬಾಬಾ ಸಾಹೇಬರ ಸಾಮಾಜಿಕ ವೈದ್ಯಗ್ರಂಥದ ರೂಪದಲ್ಲಿ ನಮ್ಮ ಸಂವಿಧಾನವಿದೆ.
ಈ ಗ್ರಂಥ ರೂಪುಗೊಳ್ಳುವುದರ ಹಿಂದೆ 2500 ವರ್ಷಗಳ ಪ್ರತಿಭಟನೆಗಳ ನೆನಪುಗಳಿವೆ. ದಮನಗಳ ನೋವುಗಳಿವೆ.
ಆದರೆ ಇಂದು ನಮ್ಮ ಸಮಾಜದ ಬಹುಸಂಖ್ಯಾತರು ಬಾಬಾಸಾಹೇಬರನ್ನು ನಿರ್ಧಿಷ್ಟ ಪರಿಧಿಗೆ ಸೀಮಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಒಂದಿಷ್ಟು ಜನ ನಿರ್ಧಿಷ್ಟ ಪರಿಧಿಯಲ್ಲೆ ಇರಬೇಕೆಂದು ಆಶಿಸುತ್ತಾರೆ. ಈ ಎರಡೂ ರೀತಿಯವರ ಕೃತ್ಯಗಳೂ ಕೂಡ ಆತ್ಮ ಹತ್ಯಾತ್ಮಕವಾದವುಗಳು. ಒಂದಿಷ್ಟು ಯಾಮಾರಿದರೂ ಸಾಕು ಮತ್ತೆ ನಮ್ಮ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಸಕಲ ತಲೆಮಾರುಗಳು ಶಾಶ್ವತ ಗುಲಾಮಗಿರಿಗೆ ಬಿದ್ದುಬಿಡುತ್ತವೆ ಎಂಬ ಆತಂಕ ನನ್ನಂಥವರದ್ದು. ಸ್ವಾತಂತ್ರ್ಯ, ಸಮಾನತೆ, ವೈಚಾರಿಕತೆ ಮುಂತಾದ ಪರಿಕಲ್ಪನೆಗಳು ಪಶ್ಚಿಮದವು ಅವು ಸರಿ ಇಲ್ಲ, ನಮ್ಮ ಶಾಪಗಳಿಗೆ ಅವೆ ಕಾರಣ ಎಂದು ನಂಬಿಸುವ ಕೆಲಸ ಮಾಡಲಾಗುತ್ತಿದೆ. ಸಂವಿಧಾನ ದಕ್ಕಿಸಿಕೊಟ್ಟ ಹಕ್ಕುಗಳನ್ನು ನಮ್ಮ ಶೂದ್ರ , ದಮನಿತ , ಮಹಿಳಾ ಸಮುದಾಯಗಳೆ ನಿರ್ಲಕ್ಷಿಸುವ ಅಥವಾ ಉಡಾಫೆ ಮಾಡುವಂತೆ ಹುನ್ನಾರ ಮಾಡಲಾಗುತ್ತಿದೆ.
ಒಂದು ತಲೆಮಾರು ತನ್ನ ನೆನಪುಗಳನ್ನು ಕಳೆದುಕೊಂಡರೆ , ಗುಲಾಮಗಿರಿಯನ್ನು ಅಭ್ಯಾಸ ಮಾಡಿಕೊಂಡರೆ ಆ ಸಮಾಜದ ಸಂಪೂರ್ಣ ಚೈತನ್ಯ ಕುಸಿದು ಹೋಗುತ್ತಿದೆ ಎಂದು ಅರ್ಥ. ಒಮ್ಮೆ ಕುಸಿತ ಪ್ರಾರಂಭವಾದರೆ ತಡೆದು ನಿಲ್ಲಿಸಲು ಸಾಧ್ಯವೆ ಇಲ್ಲ. ನಿಧಾನ ವಿಷಪ್ರಾಸನವು ಸಂಭ್ರಮದ ಚಟುವಟಿಕೆಯಾದರೆ ಅಂಥ ಸಮಾಜಕ್ಕೆ ಸ್ವಾತಂತ್ರ್ಯ, ಸಮಾನತೆ, ವೈಚಾರಿಕ ಕಲಿಕೆಗಳು ಶತ್ರುಗಳಾಗಲೆಬೇಕಲ್ಲವೆ? ಈಗಾಗಲೆ ದಮನಿತ ಸಮುದಾಯಗಳ ಮಕ್ಕಳು ಗುಲಾಮಗಿರಿಯನ್ನು ಸಂಭ್ರಮಿಸಲು ಪ್ರಾರಂಭಿಸಿಲ್ಲವೆ?
ಬಾಬಾ ಸಾಹೇಬರು ಒಂದು ಜಾತಿಯವರಿಗೆ ಮಾತ್ರ ಸಂಬಂಧ ಪಟ್ಟವರು ಎಂದು ಶೂದ್ರರು ಮತ್ತು ಮಹಿಳೆಯರು ಭಾವಿಸಿ ಅವರನ್ನು ಬಿಟ್ಟುಕೊಟ್ಟರೆ ನಾವು ಹಬ್ಬಕ್ಕೆ ತಂದ ಹರಕೆಯ ಕುರಿಗಳಲ್ಲದೆ ಬೇರೆ ಅಲ್ಲ ಎಂದು ಬೇಗ ಅರಿವಾಗಬೇಕು.
ಬಾಬಾ ಸಾಹೇಬರು ದಮನಿತರ, ಬಹುಸಂಖ್ಯಾತ ಶೂದ್ರರ, ಎಲ್ಲ ಮಹಿಳೆಯರ ಪಾಲಿನ ಅತಿ ದೊಡ್ಡ ವಿಮೋಚಕ ಎಂದು ಅರ್ಥವಾಗಲು ಇನ್ನೆಷ್ಟು ದಿನ ಬೇಕು.
ಕಡೆಯದಾಗಿ;
ಮನುಷ್ಯರ ಬಿಡುಗಡೆಗೆ ಕಾನೂನಿನ ದಾರಿಯನ್ನು ತೋರಿಸಿದ ಬಾಬಾಸಾಹೇಬರಿಗೆ ಯಾಕೊ ಅದು ಸಾಲದು ಅನ್ನಿಸಿತ್ತು ಅನ್ನಿಸುತ್ತದೆ. ಕಾನೂನುಗಳು ಮನುಷ್ಯನನ್ನು ಸಂತೆಯೊಳಗೆ ಮಾತ್ರ ಸಭ್ಯನಾಗುವುದು ಹೇಗೆ ಎಂದು ತಿಳಿಸುತ್ತವೆ. ಆದರೆ ಮನುಷ್ಯ ಏಕಾಂಗಿಯಾಗಿದ್ದಾಗಲೂ ಒಳ್ಳೆಯವನಾಗಿರಬೇಕಲ್ಲ? ವ್ಯಕ್ತಿಗಳು ಸಭ್ಯತೆಯನ್ನು ನಟಿಸಬಾರದು. ಸಹಜವಾಗಿಯೆ ಕರುಣೆ, ಮಮತೆ, ಪ್ರೀತಿ, ಒಳಗೊಂಡು ಬಾಳುವ ಸಹನಶೀಲತೆಯನ್ನು ಮೈಗೂಡಿಸಿಕೊಂಡಿರಬೇಕಲ್ಲ? ಯಾವುದೇ ಸಮಾಜದಲ್ಲಿ ಕಾನೂನುಗಳು ತಾತ್ವಿಕವಾಗಿ ಮತ್ತು ನೈಜವಾಗಿ ಯಶಸ್ವಿಯಾಗುವುದು ಮನುಷ್ಯರು ಮೂಲಭೂತವಾಗಿ ಒಳ್ಳೆಯವರಾಗಿದ್ದಾಗ ಮಾತ್ರ. ಸಮಾಜಗಳಿಗೆ ನೈಜ ಸಂತರ, ಅವಧೂತರ, ಸೂಫಿಗಳ, ದಾರ್ಶನಿಕರ, ವೈಚಾರಿಕರ ಅಗತ್ಯ ಬೀಳುವುದು ಇಲ್ಲಿಯೆ. ಹಾಗಾಗಿ ಯಾವ ಸಮಾಜ ಇವರೆಲ್ಲರ ಬಗ್ಗೆ ಬೂಟಾಟಿಕೆಯ ವರ್ತನೆ ತೋರಿಸುತ್ತದೊ, ವೈಚಾರಿಕರನ್ನು ದುರುಳೀಕರಿಸುತ್ತದೊ ಅಲ್ಲಿ ಕಾನೂನುಗಳ ಕುರಿತಾದ ವೈಯುಕ್ತಿಕ ಅವಜ್ಞೆ ಇರುತ್ತದೆ. ಮೇಲ್ನೋಟಕ್ಕೆ ಕಾನೂನಿನ ಬಗ್ಗೆ ಮಾತನಾಡಿದರೂ ಆಳದಲ್ಲಿ ಪ್ರತಿ ಕ್ಷಣವೂ ಅದನ್ನು ಮುರಿವುದು ಹೇಗೆ ಎಂದು ತವಕಿಸುವ ಬೆಕ್ಕಿನಂತಿರುತ್ತದೆ. ಇಂಥ ಕಡೆ ಬುದ್ಧಗುರುವಿನಂಥವರ ಹೃದಯಸಂವಾದಕರ ಅಗತ್ಯ ಇರುತ್ತದೆ.
ಹಾಗೆ ಏಕಾಂಗಿಯಾಗಿದ್ದಾಗಲೂ ಮೃಗವಾಗದೆ ಬದುಕುವ ದಾರಿಯನ್ನು ಧ್ಯಾನಿಸಿದ್ದು , ಕಲಿಸಿದ್ದು ಬುದ್ಧ, ಪ್ರಭುವಿನಂಥ ವಚನಕಾರರು, ಟಾಲ್ ಸ್ಟಾಯ್ ಮತ್ತು ಗಾಂಧಿ ಮುಂತಾದವರು.
ಗಾಂಧೀಜಿಯ ಕುರಿತು ಬಾಬಾಸಾಹೇಬರಿಗೆ ಸಿಟ್ಟು, ಅಸಮಾಧಾನಗಳಿದ್ದವು. ಅವರನ್ನು ಬುದ್ಧನೊಂದಿಗೆ ಹೋಲಿಸಿ, ನೋಡಿ ಮಿಸ್ಟರ್ ಗಾಂಧಿ( ಬಾಪೂ) ನೀವೆಷ್ಟು ಕುಳ್ಳಗೆ ಕಾಣುತ್ತಿದ್ದೀರಿ ಎಂದು ಹೇಳುವಷ್ಟು ದಿಟ್ಟತನವಿತ್ತು ಅಗಾಧ ಜ್ಞಾನವಿತ್ತು , ನೈತಿಕತೆಯೂ ಇತ್ತು ಅವರಿಗೆ.
ಇಷ್ಟರ ನಡುವೆಯೂ ಬಾಬಾ ಸಾಹೇಬರಿಗೆ ಕಾನೂನಿನ ಹಂಗಿಲ್ಲದೆಯೂ ಮನುಷ್ಯ ಋಜು ಮಾರ್ಗದಲ್ಲಿ ನಡೆಯಲೇಬೇಕು ಅನ್ನಿಸಿತ್ತು. ಹಾಗಾಗಿ ಬುದ್ಧನ ಮಾರ್ಗ ಬಹಳ ಮುಖ್ಯ ಅನ್ನಿಸಿ ಕಡೆಗಾಲದಲ್ಲಿ ಆ ಮಾರ್ಗದ ಕಡೆ ನಡೆದರು. ಬಾಬಾ ಸಾಹೇಬರ ಬೌದ್ಧ ಪಥದ ಚಲನೆ ಹಲವು ಪ್ರಮೇಯಗಳ ರೂಪಕದ ಮಾದರಿಗಳಂತೆ ಕಾಣುತ್ತದೆ.
ಆಶ್ಚರ್ಯವೆಂದರೆ ಬಾಬಾ ಸಾಹೇಬರು ಹೆಜ್ಜೆ ಇಟ್ಟ ಬೌದ್ಧಮಾರ್ಗದಲ್ಲಿ ಗಾಂಧೀಜಿಯ ಊರುಗೋಲಿನ ಮಾರ್ಕುಗಳೂ ಇದ್ದವು.
ಡಾ.ವೆಂಕಟೇಶಯ್ಯ ನೆಲ್ಲುಕುಂಟೆ