ಮೈಕ್ರೋಫೈನಾನ್ಸ್ ನಿಯಂತ್ರಣಕ್ಕೆ ಶೀಘ್ರ ಕಾಯ್ದೆ
ಹಾಸನ: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ನಾಗರಿಕರಿಗೆ ಉಂಟಾಗುತ್ತಿರುವ ಕಿರುಕುಳದ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಸನದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, “ಹೀಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂಬುದು ನನ್ನ ಅಭಿಪ್ರಾಯ. ಹಾಸನ ಜಿಲ್ಲೆಯಲ್ಲಿಯೂ ಈ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ” ಎಂದು ಹೇಳಿದರು.
ಕೆಲವು ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ಯ ಅನುಮತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಅವರು ಜನರಿಗೆ ಕಿರುಕುಳ ನೀಡಿದರೆ ಮಾತ್ರ ಸರ್ಕಾರ ಕ್ರಮಕೈಗೊಳ್ಳಲು ಸಾಧ್ಯ ಎಂದು ಸಚಿವರು ಸ್ಪಷ್ಟಪಡಿಸಿದರು.ಸರ್ಕಾರ ಈಗ ಈ ಸಮಸ್ಯೆ ನಿಯಂತ್ರಿಸಲು ಹೊಸ ಕಾಯ್ದೆ ತರಲು ಚರ್ಚೆ ನಡೆಸುತ್ತಿದೆ. ಈ ಬಗ್ಗೆ ನಿನ್ನೆ ಮುಖ್ಯಮಂತ್ರಿ ಅಧಿಕಾರಿಗಳ ಹಾಗೂ ಸಚಿವರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. “ಮೀಟರ್ ಬಡ್ಡಿ ದಂಧೆ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿದೆ,” ಎಂದು ಸಚಿವರು ತಿಳಿಸಿದ್ದಾರೆ.
ಅಲ್ಲದೆ, ಧರ್ಮಸ್ಥಳ ಸಂಸ್ಥೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ ಅವರು, “ಧರ್ಮಸ್ಥಳ ಸಂಘವು ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವುದಿಲ್ಲ. ಅವರು ಸ್ವ-ಸಹಾಯ ಸಂಘಗಳನ್ನು ಬಳಸಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಧರ್ಮಸ್ಥಳ ಸ್ವ ಸಹಾಯ ಸಂಘದ ಹಣದಲ್ಲಿ ಯಾವುದೇ ಕಿರುಕುಳದ ದೂರು ನಮಗೆ ಬಂದಿಲ್ಲ” ಎಂದು ಹೇಳಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಲು ಕಾಯ್ದೆ ಮಂಡನೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. “ಜನರಿಗೆ ನೆರವಾಗಲು ಸ್ವ-ಸಹಾಯ ಸಂಘಗಳು ತೊಡಗಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಕಿರುಕುಳ ನೀಡುವ ಸಂಸ್ಥೆಗಳಿಗೆ ಕಠಿಣ ಶಿಕ್ಷೆ ಅಗತ್ಯವಿದೆ” ಎಂದು ರಾಜಣ್ಣ ಒತ್ತಿ ಹೇಳಿದರು.