‘ಕಾಂಗ್ರೆಸ್ ಪಕ್ಷದ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೆಹಲಿಯಿಂದ ಒಂದು ಆದೇಶ ಬಂದರೂ ಕಾಂಗ್ರೆಸ್ ಸರ್ಕಾರ ಪಥನ ನಿಶ್ಚಿತ’ ಎಂದಿದ್ದ ಬಿ.ಎಲ್.ಸಂತೋಷ್ ಈಗ ಅಕ್ಷರಶಃ ನಗೆಪಾಟಲಿಗೀಡಾಗಿದ್ದಾರೆ. ತನ್ನದೇ ನೇತೃತ್ವದಲ್ಲಿ ಕರೆದಿದ್ದ ಪಕ್ಷದ ನಾಯಕರ ಸಭೆಗೆ ಪಕ್ಷದ ಘಟಾನುಘಟಿಗಳೇ ಗೈರಾದ ಬಗ್ಗೆ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಬಿ.ಎಲ್ ಸಂತೋಷರನ್ನು ಲೇವಡಿ ಮಾಡಿದೆ.
ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬದಿಗೊತ್ತಿ ತನ್ನದೇ ಚಾಣಾಕ್ಷತನ ತೋರುವ ಉಮೇದಿನಲ್ಲಿದ್ದ ಬಿ.ಎಲ್.ಸಂತೋಷ್ ಚುನಾವಣಾ ಸೋಲಿನ ನಂತರ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದರು. ಸಧ್ಯ ಲೋಕಸಭಾ ಚುನಾವಣಾ ತಯಾರಿಗೆಂದು ಕರೆದಿದ್ದ ಪಕ್ಷದ ನಾಯಕರ ಸಭೆಯಲ್ಲಿ ಅರ್ಧಕ್ಕರ್ಧ ಘಟಾನುಘಟಿ ನಾಯಕರೇ ಕಣ್ಮರೆಯಾಗಿ ಈಗ ಮತ್ತೊಮ್ಮೆ ಬಿ.ಎಲ್.ಸಂತೋಷ್ ನಾಯಕತ್ವಕ್ಕೆ ಪಕ್ಷದ ಒಳಗೇ ವಿರೋಧ ಹುಟ್ಟಿಕೊಂಡಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ಪಕ್ಷ, ‘ಕಾಂಗ್ರೆಸ್ ಶಾಸಕರ ಸಂಪರ್ಕ ನಂತರ ಮಾಡಿ, ಮೊದಲು ನಿಮ್ಮ ಪಕ್ಷದವರನ್ನೇ ಹಿಡಿತಕ್ಕೆ ತಗೆದುಕೊಳ್ಳಿ’ ಎನ್ನುವ ಮೂಲಕ ಬಿ.ಎಲ್ ಸಂತೋಷ್ ರನ್ನು ಲೇವಡಿ ಮಾಡಿದೆ.
ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಹಲವು ಬಿಜೆಪಿ ಶಾಸಕರು, ನಾಯಕರೇ ಗೈರಾಗಿದ್ದರು. ಬಿ.ಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್ ಎಂದು ಲೇವಡಿ ಮಾಡಿದೆ. ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಎಂದು ಕಾಂಗ್ರೆಸ್ ತಿವಿದಿದೆ.
ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು, ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ, ಬಿಜೆಪಿಯ ಅಸಮದಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ #BJPvsBJP ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ ಹಾಗೂ ಬಿಎಲ್ ಸಂತೋಷ್ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದನ್ನು ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು! ಎಂದೂ ಕಾಂಗ್ರೆಸ್ ಟ್ವಿಟ್ ಮಾಡಿದೆ.
ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಬಗ್ಗೆ ಬಿಜೆಪಿ ನಾಯಕರೇ ಬೇಡಿಕೆ ಎತ್ತಿರುವಾಗ, ಸಧ್ಯಕ್ಕೆ ಆ ಬಗ್ಗೆ ಕೇಳಬೇಡಿ ಎಂದಿರುವ ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ ಎಂದು ಸ್ವತಃ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. @blsanthosh ಅವರು ಮಾತ್ರ ಈ ಬಗ್ಗೆ ಮಾತೇ ಆಡಬೇಡಿ ಎಂದು ಫಾರ್ಮಾನು ಹೊರಡಿಸಿದ್ದಾರೆ. ಇದರ ಅರ್ಥ ವಿರೋಧ ಪಕ್ಷದ ನಾಯಕನ ಆಯ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಾಗಿದೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ, ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರೂ ಏನು!’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.