Home ಜನ-ಗಣ-ಮನ ಹೆಣ್ಣೋಟ ಉಚಿತ ಯೋಜನೆಗಳು ಎಲ್ಲ ಅರ್ಹ ಮಹಿಳೆಯರನ್ನು ತಲಪಲಿ

ಉಚಿತ ಯೋಜನೆಗಳು ಎಲ್ಲ ಅರ್ಹ ಮಹಿಳೆಯರನ್ನು ತಲಪಲಿ

0

ಕರ್ನಾಟಕ ಸರಕಾರದ ಗೃಹ ಲಕ್ಷ್ಮಿ ಯೋಜನೆ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಉಚಿತ ಯೋಜನೆಗಳು ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಮಹಿಳೆಯರಿಗೆ  ಶಕ್ತಿನೀಡುತ್ತವೆ  ಎಂಬುದು ನಿಜ.  ಈ ಯೋಜನೆಯ ಫಲಾನುಭವಿಗಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಾ ಸಮಾಜದ ಎಲ್ಲಾ ಸ್ತರಗಳಲ್ಲಿ ತಮ್ಮನ್ನು ತಾವು ತೆರೆದು ಕೊಳ್ಳಲು ಬೇಕಾದ ಗಟ್ಟಿತನವನ್ನು  ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು  ಮಾಡಬೇಕು ಎಂಬುದು ಮಂಡ್ಯದ ಹಲವು ಶ್ರಮಿಕ  ಮಹಿಳೆಯರ ಮನದ ಮಾತುಗಳು. ಇವರ ಮಾತುಗಳನ್ನು ಕ್ರೋಢೀಕರಿಸಿ ಲೇಖನವಾಗಿಸಿದ್ದಾರೆ ಜನಶಕ್ತಿಯ ಪೂರ್ಣಿಮಾ ಜಿ.

ಬಹುತೇಕ  ಹೆಣ್ಣು ಮಕ್ಕಳು ಗೃಹಲಕ್ಷ್ಮಿ ಯೋಜನೆ ತಮಗೆ ಬಹಳ ಪ್ರಯೋಜನಕಾರಿ ಎನ್ನುತ್ತಾರೆ. ಇದು ನಿಜ ಕೂಡಾ. ಇದರ ಆಚೆಗೂ ನಾವು ಈ ಯೋಜನೆಯನ್ನು ಬೇರೆ ಆಯಾಮಗಳಲ್ಲಿಯೂ ನೋಡುವ ಅವಶ್ಯಕತೆ ಇದೆ.

ಇವತ್ತಿಗೆ ನಮ್ಮ ದೇಶದ ಆರ್ಥಿಕತೆಯಲ್ಲಿ ಮಹಿಳೆಯರ ಪಾಲು ಕೂಡ ಅರ್ಧಕ್ಕಿಂತಲೂ ಹೆಚ್ಚು ಇದೆ ಎಂಬುದನ್ನು ನಾವು ತಿರಸ್ಕರಿಸುವಂತಿಲ್ಲ. ಪ್ರಸ್ತುತ ಸಮಾಜದಲ್ಲಿ ಎಲ್ಲಾ ವಲಯದಲ್ಲಿಯೂ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ಪುರುಷರಷ್ಟೇ ಸರಿಸಮನಾಗಿ ದುಡಿಯುತ್ತಿದ್ದಾರೆ. ಗಾರ್ಮೆಂಟ್ಸ್ ಫ್ಯಾಕ್ಟರಿಗಳು,  ಪೆಟ್ರೋಲ್ ಬಂಕ್ ಗಳು, ಕೃಷಿ ವಲಯ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವೈದ್ಯರುಗಳು, ನರ್ಸ್ ಗಳು, ಪೌರಕಾರ್ಮಿಕ ಮಹಿಳೆಯರು… ಹೀಗೆ ಹೇಳುತ್ತಾ ಹೋದರೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಮಹಿಳೆಯರ ಪಾತ್ರವಿದೆ ಎಂಬುದು ಅರಿವಾಗುತ್ತದೆ.  ಆದರೆ ಅವರ ಪರಿಶ್ರಮಕ್ಕೆ ಸಮನಾದ ಪ್ರತಿಫಲ ಮಾತ್ರ ಇಂದಿಗೂ ಕೂಡ ದೊರೆಯುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಈಗಲೂ ಕೂಡ ಕನಸಾಗಿಯೇ ಉಳಿದಿದೆ. ಆರ್ಥಿಕತೆಯ ಬಂಡವಾಳದ ಮಾಲೀಕತ್ವದ ಜಾಗಗಳಲ್ಲಿ ಪುರುಷರೇ ಹೆಚ್ಚಾಗಿ ಪ್ರಾಬಲ್ಯವನ್ನು  ಸಾಧಿಸಿದ್ದು ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇದೆ.  ಕಳೆದ ಮೂರು ವರ್ಷಗಳಲ್ಲಿ ಕೊರೋನಾದಂತಹ ಕೆಟ್ಟಕಾಲ ಬಂದೊದಗಿದ ಸಂದರ್ಭದಲ್ಲಿ ಮಹಿಳಾ ಸಮುದಾಯವು ಬಹಳ ಪ್ರಮುಖ ಪಾತ್ರ ವಹಿಸಿದೆ ಎಂಬುದು ಗಮನೀಯ.  

ಸರಿಯಾದ ಗ್ಲೌಸ್ ಗಳು, ಗುಣ ಮಟ್ಟದ ಮಾಸ್ಕ್ ಗಳು, ಕೊರೋನಾ ಮುಂಜಾಗ್ರತಾ ಕಿಟ್ ಗಳು ತಮಗೆ ದೊರೆಯದಿದ್ದಾಗಲೂ ಪ್ರಾಣದ ಹಂಗು ತೊರೆದು ಪೌರಕಾರ್ಮಿಕ ಮಹಿಳೆಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಕೊರೋನಾ ವಾರಿಯರ್ಸ್‌ ಗಳಾಗಿ ದುಡಿದಿದ್ದಾರೆ. ಅವರಿಗೆ ಪ್ರಶಂಸೆಯ ಮಾತುಗಳು ಮತ್ತು ಹೂವಿನ ಸುರಿಮಳೆ ದೊರೆಯಿತೆ ವಿನಹ ಆರ್ಥಿಕವಾದ ನೆರವು, ಅವರ ಪರಿಶ್ರಮಕ್ಕೆ ಸಿಗಬೇಕಾದ ವೇತನದ ಭಡ್ತಿಗಳು ದೊರೆಯಲಿಲ್ಲ. ಅಂಗನವಾಡಿ ಆಶಾ ಕಾರ್ಯಕರ್ತೆಯರು ನಾನ್ ಕ್ಲಿನಿಕಲ್ ಡಿಪಾರ್ಟ್ ಮೆಂಟ್ ಗುತ್ತಿಗೆ ನೌಕರ ಹೆಣ್ಣು ಮಕ್ಕಳ ಸಂಬಳವು ಕೂಡಾ ಸರಿಯಾಗಿ ಸಿಗದೆ ತಮ್ಮ ಸಂಬಳಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಪಶು ಸಂಗೋಪನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಾಲು  ಕರೆಯುವುದು, ಸೆಗಣಿ ಬಾಚುವುದು ಹೆಣ್ಣು ಮಕ್ಕಳು. ಆದರೆ ಡೈರಿಗೆ ಹಾಲನ್ನು ಹಾಕಿ ಹಣ ಪಡೆಯುವ ಪುಸ್ತಕಗಳು  ಗಂಡಸರ ಕೈಯಲ್ಲಿಯೇ ಇವೆ. ಹೊಲಗದ್ದೆಗಳಲ್ಲಿ ದುಡಿದು ಕಳೆ ಕಿತ್ತು ನಾಟಿ ಮಾಡಿ ಬೆಳೆ ಬೆಳೆಯುವ ಪ್ರಕ್ರಿಯೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ದುಪ್ಪಟ್ಟಿದ್ದರೆ ಅದನ್ನು ಮಂಡಿಗೆ ಸಾಗಿಸಿ ಹಣ ಪಡೆದು ವ್ಯವಹಾರ ಮಾಡುವವರು ಮಾತ್ರ ಪುರುಷರೆ ಆಗಿರುತ್ತಾರೆ. ಹೀಗೆ, ಹೆಣ್ಣು ಮಕ್ಕಳನ್ನು ಆರ್ಥಿಕ ವಲಯದಿಂದ ದೂರ ಉಳಿಯುವಂತೆ ಇಂದಿಗೂ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಿ ಬಿಡಿಗಾಸಿಗೂ ಕೈ ಚಾಚುವ ಪರಿಸ್ಥಿತಿ ತಂದೊಡ್ಡಿರುವ ಸಾಕಷ್ಟು   ಉದಾಹರಣೆಗಳನ್ನು ಕೊಡಬಹುದು.  ಜೊತೆಗೆ ತಮಗೆ ಬೇಕಾದ ಸವಲತ್ತುಗಳನ್ನು ಕುಟುಂಬ ಮತ್ತು ಸಮಾಜದ ಜೊತೆಗೆ ಸಂಘರ್ಷ ಮಾಡುತ್ತಲೆ ಪಡೆದು ಕೊಳ್ಳಬೇಕಾದ ಪರಿಸ್ಥಿತಿ ಹಿಂದಿನ ಕಾಲದಿಂದಲೂ ಇದ್ದು ಪ್ರಸ್ತುತ ಸಮಾಜದಲ್ಲೂ ಮುಂದುವರೆಯುತ್ತಿದೆ ಎಂಬುದು ಒಂದು ಆಯಾಮ.  ಮತ್ತೊಂದು ಆಯಾಮದಲ್ಲಿ ವಿಧವಾ ಮಹಿಳೆಯರು ಸಿಂಗಲ್ ಪೇರೆಂಟ್ ಗಳಾಗಿ ಮನೆ ಮತ್ತು ಮಕ್ಕಳ ಜವಾಬ್ದಾರಿ ಹೊತ್ತವರು, ಗಂಡನ ಜೊತೆಗಿದ್ದರೂ ಕೂಡ ಆತನ ಹಲವು ದುಷ್ಟ ಚಟಗಳಿಂದಾಗಿ ಗಂಡನ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಸರಿದೂಗಿಸಿಕೊಂಡು ಹೋಗಲು ಹೆಣಗುತ್ತಿರುವಂತಹ ಮಹಿಳೆಯರು ಬಹಳ ಮಂದಿ ಇದ್ದಾರೆ, ತಮ್ಮ ಮಕ್ಕಳಿಗೂ ಕೂಡ ಬೇಡವಾದಂತಹ ಪರಿಸ್ಥಿತಿಯಲ್ಲಿ ಒಂಟಿಯಾಗಿ ಜೀವನ ಮಾಡುತ್ತಿರುವಂತಹ ವಯಸ್ಸಾಗಿರುವ ಮಹಿಳೆಯರು ಸಹ ಇದ್ದಾರೆ. ಇಂತಹ ಪರಿಸ್ಥಿತಿ ಇರುವ ಮಹಿಳೆಯರಿಗೆ ರು.2000 ಮೊತ್ತ ಬಹಳ ಸಹಾಯಕ. ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣದಿಂದ ಮೋಜು-ಮಸ್ತಿ ಮಾಡಲು, ಒಡವೆ ಸೀರೆ ಪ್ರವಾಸ ಅಂತ ಸುತ್ತಾಡಲು ಹೆಂಗಸರಿಗೆ ಒಳ್ಳೆಯದಾಯಿತು ಎಂದು ಮೂದಲಿಸುವವರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನದ ಸಂಗತಿಗಳನ್ನು ಅರಿಯುವ ಅಗತ್ಯವಿದೆ.

ತಮಗೆ ಸಿಗಬಹುದಾದ ಇಂತಹ ಉಚಿತಗಳಿಂದ  ತಮ್ಮ ಮನೆಯ ಹಿರಿಯರ ಹದಗೆಟ್ಟ ಆರೋಗ್ಯವನ್ನು ನಿಭಾಯಿಸಲು, ಮಕ್ಕಳಿಗೆ ಉತ್ತಮ ಆಹಾರ ಕೊಡಲು, ಮನೆ ನಿಭಾಯಿಸಲು ಬಳಕೆ ಮಾಡಿಕೊಳ್ಳವಂತಹ ಮಹಿಳೆಯರ ಸಂಖ್ಯೆಯೇ  ಹೆಚ್ಚಿದೆ. ಅಲ್ಲದೆ ತಾವು ದುಡಿದ ಹಣವನ್ನು ತಮ್ಮ ಮನೆಯ ಗಂಡಂದಿರ ಕೈಗೆ ಕೊಟ್ಟು ಬಿಡಿಗಾಸಿಗೂ ಕೂಡ ಪರದಾಡುವಂತಹ ಮಹಿಳೆಯರ ಸಂಖ್ಯೆಯು ಕೂಡ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಉಚಿತ  ಯೋಜನೆಗಳು ಆರ್ಥಿಕವಾಗಿ ಸ್ವಲ್ಪಮಟ್ಟಿಗಾದರೂ ಮಹಿಳೆಯರು ಸ್ವಾವಲಂಬಿಗಳಾಗಲು  ಪ್ರಯೋಜನಕಾರಿ ಆಗುತ್ತದೆ. ಇವುಗಳು ಅಲ್ಪ ಕಾಲಕ್ಕೆ ಮಾತ್ರ ಸೀಮಿತವಾಗದೆ ದೀರ್ಘವಾಗಿ ಮುಂದುವರಿಯಬೇಕು. ಮತ್ತು ಫಲಾನುಭವಿಗಳು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳುತ್ತಾ ಸಮಾಜದ ಎಲ್ಲಾ ಸ್ತರಗಳಲ್ಲಿ ತಮ್ಮನ್ನು ತಾವು ತೆರೆದು ಕೊಳ್ಳಲು ಬೇಕಾದ ಗಟ್ಟಿತನವನ್ನು  ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು.

ಈ ಯೋಜನೆಯನ್ನು ಪಡೆದುಕೊಳ್ಳಲು ಸರ್ಕಾರ ಕೇಳಿರುವ ದಾಖಲೆಗಳ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸ ಬೇಕಾಗಿರುವಂತಹ ಹಲವು ಅಂಶಗಳಿವೆ.  ಉಚಿತಗಳ ಫಲಾನುಭವಿಗಳಾಗಲು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜೊತೆಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಗಳ ಅಗತ್ಯವಿದೆ ಅಂತಾ ತಿಳಿಸಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ, ಮನೆ ಕೆಲಸ ಮಾಡುವ, ಹೂ ಕಟ್ಟಿ ಜೀವನ ಸಾಗಿಸುವ, ಹೊಲಿಗೆ ಮಾಡ್ತಾ ಬದುಕುತ್ತಿರುವಂತಹ ಹಲವು ಹೆಣ್ಣು ಮಕ್ಕಳ ಬಳಿ ಮತ್ತು ವಯಸ್ಸಾದ ಮಹಿಳೆಯರ ಬಳಿ ಸ್ಮಾರ್ಟ್ ಕಾರ್ಡ್ ನಂತಹ ದಾಖಲೆ ಇರಲು ಸಾಧ್ಯವಿಲ್ಲ. ಇನ್ನು ರೇಷನ್‌ ಕಾರ್ಡಿನಂತಹ  ದಾಖಲೆಗಳು ಕಡ್ಡಾಯ ಅಂತಾದರೆ   ಕೌಟುಂಬಿಕ ದೌರ್ಜನ್ಯಗಳಿಂದಾಗಿ ಗಂಡನಿಂದ ಬೇರ್ಪಟ್ಟು ಒಂಟಿ ಮಹಿಳೆಯರಾಗಿ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಜೀವನ ಸಾಗಿಸುತ್ತಿರುವಂತಹ ಹೆಣ್ಣು ಮಕ್ಕಳ ಬಳಿ ಇಂತಹ ದಾಖಲೆಗಳು ಇರುವುದು ಸಂಶಯ. ಯಾಕೆಂದರೆ ಮನೆ ಬಿಟ್ಟು ಹೊರನಡೆಯುವ ಸಂದರ್ಭದಲ್ಲಿ ಸಂತ್ರಸ್ತರು ದಾಖಲೆಗಳನ್ನು ಗಂಡನ ಮನೆಯಲ್ಲೇ ಬಿಟ್ಟು ಹೊರ ನಡೆಯುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಒಂಟಿ ಮಹಿಳೆಯರನ್ನು ಒಳಗೊಂಡಂತೆ ಮೇಲೆ ಹೇಳಿದ ರೀತಿಯ ಎಲ್ಲಾ ವರ್ಗದ ಮಹಿಳೆಯರು ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೂ  ಈ ಯೋಜನೆ ತಲಪುವಂತೆ ಮಾಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ.  ಇದಕ್ಕೆ ಕೆಲವು ವಿಶೇಷ ರಿಯಾಯಿತಿಗಳನ್ನು  ನೀಡಿ ಎಲ್ಲಾ ವಲಯದಲ್ಲೂ ಕೂಡ ಸಂಕಷ್ಟಕ್ಕೆ ಒಳಗಾಗಿರುವ ಮಹಿಳೆಯರಿಗೆ ತಲುಪುವಂತಾಗಲು ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ನಾವು ಒತ್ತಾಯಿಸಬೇಕಾಗಿದೆ.

ಪೂರ್ಣಿಮಾ ಜಿ

ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ

ಇದನ್ನೂ ಓದಿ-ಬಡವರ ಮನೆಗೆ ಭಾಗ್ಯಲಕ್ಷ್ಮಿಯಾಗಲಿರುವ ʼಗೃಹಲಕ್ಷ್ಮಿʼ

You cannot copy content of this page

Exit mobile version