ಮುಂಬೈ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯ ಎರಡನೇ ದಿನ ಮುಂಬೈಯಲ್ಲಿ ಮುಂದುವರಿದಿದೆ. ಈ ಸಂದರ್ಭದಲ್ಲಿ ಒಕ್ಕೂಟವು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿತು. 14 ಸದಸ್ಯರನ್ನೊಳಗೊಂಡ ಕೇಂದ್ರ ಸಮಿತಿಯನ್ನು ಸಹ ರಚಿಸಲಾಗಿದೆ.
ಹಾಗೆಯೇ ಮಾಧ್ಯಮ ಸಮಿತಿ, ಪ್ರಚಾರ ಸಮಿತಿ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕಾರಿ ಸಮಿತಿಯನ್ನೂ ಪ್ರಕಟಿಸಿದೆ. ಈ ಕೇಂದ್ರ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಸಿ. ವೇಣುಗೋಪಾಲ್, RJDಯಿಂದ ತೇಜಸ್ವೀ ಯಾದವ್, AAPಯಿಂದ ರಾಘವ್ ಚಡ್ಡಾ, TMCಯಿಂದ ಅಭಿಷೇಕ್ ಬ್ಯಾನರ್ಜಿ, ಸಮಾಜವಾದಿ ಪಕ್ಷದಿಂದ ಜಾವೇದ್ ಅಲಿ ಖಾನ್, ನ್ಯಾಷನಲ್ ಕಾನ್ಫರೆನ್ಸ್ (NC)ಯಿಂದ ಒಮರ್ ಅಬ್ದುಲ್ಲಾ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಯಿಂದ ಮೆಹಬೂಬಾ ಮುಫ್ತಿ, CPI ಪಕ್ಷದ ಡಿ. ರಾಜ ಸದಸ್ಯರಾಗಿರುತ್ತಾರೆ.
ಸಭೆಯ ನಂತರ ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮೈತ್ರಿಯಲ್ಲಿನ ವಿವಾದಗಳನ್ನು ಮಾಧ್ಯಮಗಳು ತೋರಿಸುತ್ತವೆ ಮತ್ತು ಆಂತರಿಕ ಜಗಳದ ಬಗ್ಗೆ ಸುದ್ದಿಗಳನ್ನು ಬಿತ್ತರಿಸಲಿವೆ ಎಂದು AAP ಸಂಚಾಲಕ ಕೇಜ್ರಿವಾಲ್ ಹೇಳಿದ್ದಾರೆ. 140 ಕೋಟಿ ಜನರಿಗಾಗಿ ಎಲ್ಲರೂ ಒಟ್ಟಾಗಿದ್ದೇವೆ ಹೊರತು ಸೀಟಿಗಾಗಿ ಅಲ್ಲ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ, ಭಾರತ ಸಂವಿಧಾನದ ರಕ್ಷಣೆ ಮತ್ತು ಬಿಜೆಪಿಯನ್ನು ಸೋಲಿಸುವ ಗುರಿಯನ್ನು ಸಾಧಿಸುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.