ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮದ್ದೂರಿನ ನವೀನ್ ಕುಮಾರ್ ತನ್ನ ಸ್ನೇಹಿತ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳ ಕೃತ್ಯವನ್ನು ಖಂಡಿಸುವ ಬದಲು ಬಿಜೆಪಿಯ ಮಾಜಿ ಸಂಸದೆ ಆರೋಪಿಯ ಹೆಗಲ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಂಡು ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಈ ಟ್ವೀಟ್ ಮಾಡಿರುವ ಅವರು ತಮ್ಮ ಟ್ವೀಟಿನಲ್ಲಿ “ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಮದ್ದೂರಿನ ನವೀನ್ ಕುಮಾರ್ ತನ್ನ ಗೆಳೆಯ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿಕೊಂಡಿದ್ದಾರೆ. ಗೋಡ್ಸೆ ಆರಾಧಕ ಬಿಜೆಪಿಯವರ ಅಸಲಿ ಮುಖವೆ ಇದು. ಸಮಾಜದ ಶಾಂತಿ ಕದಡುವ, ಕೊಲೆ, ಸುಲಿಗೆಯಂತಹ ವಿದ್ವಂಸಕ ಕೃತ್ಯ ನಡೆಸುವವರೆಲ್ಲಾ ಬಿಜೆಪಿಯ ಗರ್ಭಗುಡಿಯಲ್ಲೇ ಇರುತ್ತಾರೆ ಎಂಬುವುದಕ್ಕೆ ಇದೊಂದು ನಿದರ್ಶನ.
ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್‌ರವರನ್ನು ನಿಷ್ಕಾರಣವಾಗಿ ಕೊಲೆಗೈದ ಆರೋಪಿಯ ಕೃತ್ಯವನ್ನು ಬಿಜೆಪಿಯ ಮಾಜಿ ಸಂಸದರು ಖಂಡಿಸುವ ಬದಲು, ಆ ಆರೋಪಿಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕದ ಹೈಕೋರ್ಟ್ ಜುಲೈನಲ್ಲಿ ಜಾಮೀನು ನೀಡಿತ್ತು.
ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರು ಕೆಟಿ ನವೀನ್ ಕುಮಾರ್, ಸುರೇಶ್ ಹೆಚ್ ಎಲ್ ಮತ್ತು ಅಮಿತ್ ದೆಗ್ವೇಕರ್ ಹೆಸರಿನ ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸ್ವೀಕರಿಸಿ ಅಗತ್ಯವಿರುವಾಗ ನಡೆಯುತ್ತಿರುವ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿದ್ದರು.
ಖ್ಯಾತ ಪತ್ರಕರ್ತೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ರಾತ್ರಿ ಬೆಂಗಳೂರಿನ ಪಶ್ಚಿಮ ಭಾಗದ ಆರ್‌ಆರ್‌ನಗರದಲ್ಲಿರುವ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.