ಮೈತ್ರಿ ಬಿಟ್ಟುಕೊಡದ ಬಿಜೆಪಿ ; ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಕಳೆದುಕೊಳ್ಳಲಿರುವ ಕೇಸರಿ ಪಡೆ!
ಮೈಸೂರು ಚಲೋ ಕಾರಣಕ್ಕಾಗಿ ಹಿಂದೆ ಬಿದ್ದಿದ್ದ ಚನ್ನಪಟ್ಟಣ ಉಪಚುನಾವಣೆ ವಿಚಾರ ಈಗ ಮತ್ತೆ ಗರಿಗೆದರಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಮೈತ್ರಿ ಪಕ್ಷಗಳು ತಗೆದುಕೊಳ್ಳುವ ನಿರ್ಧಾರ ಹಲವು ಮಹತ್ವಗಳನ್ನು ಪಡೆದುಕೊಂಡಿದೆ. ಈ ನಡುವೆ ಮೈತ್ರಿ ನಾಯಕರ ಕಡೆಯಿಂದ ಹೊಸ ಮಾಹಿತಿ ಹೊರಬಿದ್ದಿದ್ದು, ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಜೆಡಿಎಸ್ ಟಿಕೆಟ್ ಸಿಗುವುದರ ಬಗ್ಗೆ ಅನುಮಾನ ಹುಟ್ಟಿಸಿದೆ.
ಮೈಸೂರು ಚಲೋ ಪಾದಯಾತ್ರೆ ಬಿಜೆಪಿ ಪಕ್ಷವೇ ಹಮ್ಮಿಕೊಂಡಿದ್ದರೂ ಅದಕ್ಕೆ ಜೆಡಿಎಸ್ ಎಂಟ್ರಿ ಕೊಟ್ಟ ದಿನದಿಂದ ಜೆಡಿಎಸ್ ನಾಯಕರೇ ಹಂತ ಹಂತವಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಕುಮಾರಸ್ವಾಮಿ ಮಗ ನಿಖಿಲ್ ಪಾದಯಾತ್ರೆ ಉದ್ದಕ್ಕೂ ಪ್ರಚಾರ ಪಡೆದುಕೊಂಡು ಮುಂದೆ ಸಾಗಿದ್ದರು. ಇದೊಂದು ರೀತಿ ನಿಖಿಲ್ ಲಾಂಚಿಂಗ್ ಸೆರಮನಿ ಎಂದೇ ಕರೆಯಲಾಗಿತ್ತು.
ಇಲ್ಲಿ ಸಿಪಿ ಯೋಗೇಶ್ವರ್ ಕೂಡ ಚನ್ನಪಟ್ಟಣದಲ್ಲಿ ನಡೆದ ಪಾದಯಾತ್ರೆಯಲ್ಲಿ ನಾಮಕಾವಾಸ್ಥೆ ಭಾಗಿಯಾಗಿದ್ದು ಇಲ್ಲಿ ನೆನೆಯಬೇಕು. ಈ ನಡುವೆ ಚನ್ನಪಟ್ಟಣಕ್ಕೆ ನಿಖಿಲ್ ನನ್ನು ಕೂರಿಸುವ ಬಗ್ಗೆ ಸ್ವತಃ ಕುಮಾರಸ್ವಾಮಿ ಬಿಜೆಪಿ ಒತ್ತಡಕ್ಕೆ ಬಿದ್ದಿದ್ದು, ಬಿಜೆಪಿ ಕಡೆಯಿಂದ ನಿಖಿಲ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪಕ್ಷ ಟಿಕೆಟ್ ನೀಡಲಿ, ನೀಡದೇ ಇರಲಿ ನನ್ನ ಸ್ಪರ್ಧೆ ನಿಶ್ಚಿತ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಅಷ್ಟೇ ಅಲ್ಲದೇ ಪಕ್ಷೇತರನಾಗಿ ಮತ್ತೆ ಗೆದ್ದು ಎನ್.ಡಿ.ಎ. ಭಾಗವಾಗುವೆ. ಸ್ಪರ್ಧೆ ವಿಚಾರ ಏನೇನೋ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಏನು ಬೇಕಾದರೂ ಆಗಬಹುದು ಎಂದಿದ್ದಾರೆ. ಹಾಗೆಯೇ ಕಾಂಗ್ರೆಸ್ ಸೇರುವ ಬಗ್ಗೆ ಪ್ರಶ್ನೆ ಬಂದಾಗ ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದು ಯೋಗೇಶ್ವರ್ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಬಾರದು. ಎನ್.ಡಿ.ಎ. ವಶಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ಣಯ ಕೈಗೊಂಡಿದ್ದೇವೆ. ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ. ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದೂ ಹೇಳಿರುವುದು ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ದೂರದ ಮಾತು ಎನ್ನುವಂತಾಗಿದೆ.