ಸಮಾನತೆಗಾಗಿ ಕೆಲಸ ಮಾಡುವ ಪಕ್ಷಗಳು ಯಾವುದಿದೆ ? ಕಮ್ಯೂನಿಷ್ಟ್ ಪಕ್ಷಗಳು ಸಮಾನತೆಗಾಗಿ ಕೆಲಸ ಮಾಡುತ್ತವೆ. ಸಮಾನತೆಯನ್ನು ಜಾರಿ ಮಾಡುವುದೇ ಕಮ್ಯೂನಿಷ್ಟರ ಏಕೈಕ ಅಜೆಂಡಾ. ಜಾತಿ ಧರ್ಮದ ಹೊರತಾಗಿ ಜನರ ಬದುಕಿನ ಪ್ರಶ್ನೆಯ ಬಗೆಗೇ ರಾಜಕೀಯ ಮಾಡುತ್ತಿವೆ….
ಹೈಕೋರ್ಟ್ ಕಲಾಪದಲ್ಲಿ ನ್ಯಾಯಮೂರ್ತಿ ಎಂಐ ಅರುಣ್ ಮತ್ತು ಹಿರಿಯ ವಕೀಲ ಎಸ್ ಬಾಲನ್ ಪ್ರಶ್ನೋತ್ತರದ ಸ್ವಾರಸ್ಯಕರ ಘಟನೆ ಪತ್ರಕರ್ತ ನವೀನ್ ಸೂರಿಂಜೆ ಬರಹದಲ್ಲಿ
‘ಸಂವಿಧಾನದ ಆಶಯಗಳ ಪ್ರಕಾರ ಸಮಾನತೆ ಬಯಸುವ ರಾಜಕೀಯ ಪಕ್ಷಗಳು ಯಾವುದಿದೆ?’ ಎಂದು ಆಜ್‌ತಕ್ ನ್ಯೂಸ್ ಚಾನೆಲ್ ವರ್ಸಸ್ ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಹೈಕೋರ್ಟ್ ದೂರುದಾರರ ಪರ ವಕೀಲ ಎಸ್ ಬಾಲನ್ ಅವರನ್ನು ಪ್ರಶ್ನಿಸಿತು. ಈ ಪ್ರಶ್ನೆ ಸ್ವಾರಸ್ಯಕರ, ಚಿಂತನಾರ್ಹ ಚರ್ಚೆಗೆ ನಾಂದಿ ಹಾಡಿತು.
ಕರ್ನಾಟಕ ಸರ್ಕಾರದ ʼಸ್ವಾವಲಂಬಿ ಸಾರಥಿ ಯೋಜನೆʼಯ ಕುರಿತು ಅಪಪ್ರಚಾರ, ಕೋಮು ಪ್ರಚೋದನೆ ಮತ್ತು ಸುಳ್ಳು ಸುದ್ದಿ ಭಿತ್ತರಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಗೆ ವಜಾ ಮಾಡುವಂತೆ ಕೋರಿ ದೆಹಲಿಯ ಆಜ್ ತಕ್ ಹಿಂದಿ ವಾಹಿನಿ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಮತ್ತು ಆಜ್‌ತಕ್ ಸುದ್ದಿ ವಾಹಿನಿಯಿಂದ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 05 ರಂದು ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಈ ಬಗ್ಗೆ ದೂರುದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್ ಬಾಲನ್, ‘ಸೆಪ್ಟೆಂಬರ್ 11ರಂದು ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್ ತಕ್‌ನಲ್ಲಿ ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಕರ್ನಾಟಕ ಸರ್ಕಾರದಿಂದ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದೂ ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆ ನಡೆಸಲು ಪ್ರಚೋದನೆ ನೀಡಿರುತ್ತಾರೆ. ಚೌಧರಿ ಅವರು ತಾವಾಡುವ ಮಾತುಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿ, ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಸಂಚು ಮಾಡಿದ್ದಾರೆ. ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನು ಮಾನವೀಯ ಗೌರವ, ಅವಕಾಶಗಳು, ಅವಕಾಶಗಳ ಸಮಾನ ಪ್ರವೇಶ, ಮತ್ತು ಕಾನೂನಿನ ಮುಂದೆ ಸಮಾನತೆ ಪಡೆಯಬೇಕೆಂಬ ಮೂಲತತ್ತ್ವವನ್ನು ಘೋಷಿಸುತ್ತದೆ. ಇದು ರಾಷ್ಟ್ರದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬದುಕಿನಲ್ಲಿ ಯಾವುದೇ ವಿಧದ ಭೇದಭಾವವನ್ನು ತಡೆಯುವ ಬಲವಾದ ಬದ್ಧತೆಯಾಗಿದೆ. ಉದ್ಯೋಗ, ಶಿಕ್ಷಣ, ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶ ಸಿಗುವುದೇ ಸಮಾನತೆಯ ಆಶಯವಾಗಿದೆ. ಹಾಗಾಗಿ…’ ಎಂದು ವಾದ ಮಾಡುತ್ತಿದ್ದರು.
ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ ಐ ಅರುಣ್, ‘ಇಂದು ರಾಜಕೀಯ ಪಕ್ಷಗಳು ಓಲೈಕೆಯ ಧೋರಣೆ ಪ್ರದರ್ಶಿಸುತಿವೆ. ಸಾಮಾನ ಜನರಿಗೆ ಅನ್ನ, ಆಹಾರ, ಬದುಕು ಮುಖ್ಯವೇ ವಿನಃ ಧಾರ್ಮಿಕ ಮೂಲಭೂತವಾದವಲ್ಲ. ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡಬೇಕು ಎಂಬುದೇ ಈಗಿನವರ ಮಾನಸಿಕತೆಯಾಗಿದೆ. ಇದೇ ಕಾರಣಕ್ಕೆ ಬೇರೆಲ್ಲವನ್ನೂ ಬಿಟ್ಟು ರಾಜಕಾರಣದಲ್ಲಿ ಜಾತಿ ನೋಡಿಕೊಂಡು ಸೀಟು ಹಂಚಿಕೆ ಮಾಡಲಾಗುತ್ತಿದೆ. ರಾಜಕಾರಣಿಗಳು ಭ್ರಷ್ಟರು ಅನ್ನುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ತಕ್ಕದಾದ ನಾಯಕರು ಸಿಗುತ್ತಾರೆ. ಕೆಲವೇ ಸಂಖ್ಯೆಯ ಸಿಬ್ಬಂದಿಗಳನ್ನು ಇಟ್ಟುಕೊಂಡು ಬ್ರಿಟಿಷರು ನಮ್ಮನ್ನು ಆಳಿದರು. ಯಾಕೆಂದರೆ ನಮಗೆ ಆಗ ಭಾರತೀಯತೆಯ ಅರಿವಿರಲಿಲ್ಲ. ಭಾರತೀಯತೆ ಅರಿವಿಗೆ ಬಂದಾಗ ಬ್ರಿಟಿಷರು ಕಾಲ್ಕಿತ್ತರು. ಈಗ ನಾವು ಆಧುನಿಕ ವಸಾಹತುಕರಣದ ಶತಮಾನದಲ್ಲಿದ್ದೇವೆ. ಆದರೆ ಪುನಃ ಹಳೇ ಚಾಳಿಗೆ ಮರಳುತ್ತಿದ್ದೇವೆ. ಡೆಮಾಕ್ರಸಿ ಅಂತೀವಿ. ಮನುಷ್ಯರ ಮಧ್ಯೆಯೇ ಸಹಿಷ್ಣುತೆಯೇ ಇಲ್ಲ. ಟಿಕೆಟ್ ಕೊಡುವಾಗಲೂ ಜಾತಿ, ಧರ್ಮ ನೋಡಿಯೇ ಕೊಡ್ತಾರೆ. ನೀತಿ ರೂಪನೆ ಮಾಡಬೇಕಾದವರೇ ಜಾತ್ಯಾತೀತತೆಯನ್ನು ಪಾಲಿಸಲ್ಲ. ಯಾವ ಪಕ್ಷಗಳೂ ಸಂವಿದಾನದ ಆರ್ಟಿಕಲ್ 15, ಆರ್ಟಿಕಲ್ 19, ಆರ್ಟಿಕಲ್ 21 ಅನ್ನು ಅನುಸರಿಲ್ಲ. ಈಗ ನೋಡಿ, ಸಮಾನತೆ ಮತ್ತು ಸಮಾನ ಅವಕಾಶಗಳಿಗಾಗಿ ಈ ದೇಶದ ಯಾವ ಪಕ್ಷ ಕೆಲಸ ಮಾಡುತ್ತಿದೆ ? ಎಲ್ಲಿದೆ ಸಮಾನತೆ ? ಯಾರು ಸಮಾನತೆಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದಾರೆ ?’ ಎಂದು ಪ್ರಶ್ನಿಸಿದರು.
‘ನಾನು ಈ ಪ್ರಶ್ನೆಗೆ ಉತ್ತರ ನೀಡಲೇ ?’ ಎಂದು ಎಸ್ ಬಾಲನ್ ನ್ಯಾಯಪೀಠವನ್ನು ಕೇಳಿಕೊಂಡರು.
‘ಹೇಳಿ ಹೇಳಿ. ಯಾವ ಪಕ್ಷ ಸಮಾನತೆಯ ಜಾರಿಗಾಗಿ ಕೆಲಸ ಮಾಡುತ್ತಿದೆ?’ ಮತ್ತೆ ನ್ಯಾಯಪೀಠ ಪ್ರಶ್ನಿಸಿತು.
‘ಭಾರತದಲ್ಲಿ ಕಮ್ಯೂನಿಷ್ಟ್ ಪಕ್ಷಗಳು ಸಮಾನತೆಗಾಗಿ ಕೆಲಸ ಮಾಡುತ್ತದೆ. ಸಮಾನತೆಯನ್ನು ಜಾರಿ ಮಾಡುವುದೇ ಕಮ್ಯೂನಿಷ್ಟ್ ಪಕ್ಷಗಳ ಏಕೈಕ ಅಜೆಂಡಾ. ಜಾತಿ, ಧರ್ಮದ ಹೊರತಾದ ಜನರ ಬದುಕಿನ ಪ್ರಶ್ನೆಯ ಬಗ್ಗೆಯೇ ರಾಜಕೀಯ ಮಾಡುತ್ತಿವೆ’ ಎಂದು ಎಸ್ ಬಾಲನ್ ಉತ್ತರಿಸಿದರು.
‘ತಾವು ಆಧುನಿಕ ವಸಾಹತುಕರಣದ ಬಗ್ಗೆ ಮಾತನಾಡಿದ್ದೀರಿ. ಅದು ನಿಜ. ಮತ್ತು ಅದಕ್ಕಿಂತಲೂ ಈ ಶತಮಾನದಲ್ಲಿ ಭೀಕರ ಅಪಾಯ ಇರುವುದು ಫ್ಯಾಶಿಸಂನಿಂದ’ ಎಂದೂ ಎಸ್ ಬಾಲನ್ ಸೇರಿಸಿದರು.
ಪ್ರಕರಣದ ವಿಚಾರಣೆಯನ್ನು ಜನವರಿ 13 ಕ್ಕೆ ಮುಂದೂಡಲಾಗಿದೆ.
