ಹಾಸನ : ಹಾಸನಾoಬೆ (Hasanambha ) ದೇಗುಲ (temple) ಓಪನ್ ಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಶುರುವಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಬರುವ ಸಾಧ್ಯತೆಯಿದೆ. ಹಿಂದಿಗಿಂತ ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ.ಈ ಬಾರಿ ದೇವಿ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಅ.9 ರಂದು ಹಾಸನಾಂಬ ದೇಗುಲದ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಲಕ್ಷಾಂತರ ಜನರು ಈ ಬಾರಿ ಆಗಮಿಸುವ ಸಾಧ್ಯತೆ ಹಿನ್ನೆಲೆ ಅಂತಿಮ ಹಂತದ ಸಿದ್ಧತೆಗಳು ಶುರುವಾಗಿದೆ.
ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ.ಜಿಲ್ಲಾ ಉಸ್ತುವಾರಿ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಹಾಸನ ನಗರದಲ್ಲಿ ಲೈಟಿಂಗ್, ಎಲ್‌ಇಡಿ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ಕಾರ್ಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬ್ಯಾರಿಕೇಡ್, ಮ್ಯಾಟ್ ಸೇರಿದಂತೆ ಬರುವ ಭಕ್ತರಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿದೆ.20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ 300 ರೂ. ಹಾಗೂ 1000 ರೂ. ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದು ಗೋಲ್ಡ್ ಪಾಸ್ ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಗಿದೆ.