Home ಬೆಂಗಳೂರು ಚಿನ್ನ ಖರೀದಿಸದಂತೆ ಜನರನ್ನು ತಡೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್ ತಿರುಗೇಟು

ಚಿನ್ನ ಖರೀದಿಸದಂತೆ ಜನರನ್ನು ತಡೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್ ತಿರುಗೇಟು

0

ಬೆಂಗಳೂರು: ಇಂಧನ ಉಳಿತಾಯ ಮತ್ತು ಚಿನ್ನದ ಖರೀದಿ ಮುಂದೂಡುವಿಕೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ‘ಉಳಿತಾಯ’ ಕ್ರಮಗಳ ಪ್ರಾಯೋಗಿಕತೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಪ್ರಶ್ನಿಸಿದ್ದಾರೆ.

“ಚಿನ್ನದ ಬೆಲೆ ಏಕೆ ಏರಿಕೆಯಾಗಿದೆ ಎಂದು ಮೋದಿ ಹೇಳುತ್ತಿಲ್ಲ. ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದು ಜನರಿಗೆ ಹೇಳುತ್ತಿದ್ದಾರೆ, ಆದರೆ ಬೆಲೆ ಏಕೆ ಏರಿಕೆಯಾಗಿದೆ ಎಂದು ಹೇಳುತ್ತಿಲ್ಲ. ಜನರು ಏಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಮೊದಲು ಮೋದಿ ವಿವರಿಸಬೇಕು,” ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

“ಮದುವೆ ಮತ್ತು ಮುಂಜಿ (ಉಪನಯನ) ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಂಡವರಿಗೆ ಚಿನ್ನ ಖರೀದಿಸಬೇಡಿ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಶಿವಕುಮಾರ್ ಪ್ರಶ್ನಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೀಪ ಹಚ್ಚುವಂತೆ ಮೋದಿ ಮಾಡಿದ್ದ ಮನವಿಯನ್ನು ನೆನಪಿಸಿದ ಅವರು, “ಅದರಿಂದ ಏನಾದರೂ ಪ್ರಯೋಜನವಾಯಿತೇ?” ಎಂದು ಕೇಳಿದರು.

ಪ್ರಧಾನಿಯವರ ಸಲಹೆಯನ್ನು “ಅಪ್ರಾಯೋಗಿಕ” ಎಂದು ತಳ್ಳಿಹಾಕಿದ ಶಿವಕುಮಾರ್, ಜನರನ್ನು ಚಿನ್ನ ಖರೀದಿಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. “ಮದುವೆಗೆ ಮಾಂಗಲ್ಯ ಸರ ಅಥವಾ ಚೈನ್ ಖರೀದಿಸುವವರಿಗೆ ಬೇಡ ಎನ್ನಲು ಸಾಧ್ಯವೇ? ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಜನರು ಸಾಲ ಮಾಡಿಯಾದರೂ ಇಂತಹ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತಾರೆ,” ಎಂದರು.

ಉಳಿತಾಯದ ಕ್ರಮಗಳ ಕುರಿತು ಮಾತನಾಡಿದ ಅವರು, “ಮೋದಿ ಅವರು ಮೊದಲು ಕೇಂದ್ರ ಸಚಿವರು ಮತ್ತು ಅಧಿಕಾರಿಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಹೇಳಲಿ. ಈ ಉಳಿತಾಯದ ಕ್ರಮಗಳು ಮೊದಲು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಂದ ಹಾಗೂ ಕೇಸರಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಆರಂಭವಾಗಲಿ,” ಎಂದು ಶಿವಕುಮಾರ್ ಲೇವಡಿ ಮಾಡಿದರು.

You cannot copy content of this page

Exit mobile version