ಈ ವರ್ಷದ ಮೊದಲ ಐದು ತಿಂಗಳು ಕಳೆಯುವ ಮೊದಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 92,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಮೆಟಾ, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನಂತಹ ದೈತ್ಯ ಕಂಪನಿಗಳು ಕೃತಕ ಬುದ್ಧಿಮತ್ತೆಗೆ (AI) ಹೆಚ್ಚಿನ ಆದ್ಯತೆ ನೀಡುತ್ತಿರುವುದು ಈ ಭಾರಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.
ಮೆಟಾ ಕಂಪನಿಯು ತನ್ನ ಶೇ. 10 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವುದಾಗಿ ಘೋಷಿಸಿದ್ದು, ಸುಮಾರು 6,000 ಎಂಟ್ರಿ ಲೆವೆಲ್ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿದೆ. ಇತ್ತ ಮೈಕ್ರೋಸಾಫ್ಟ್ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (VRS) ಮೂಲಕ 8,750 ಮಂದಿಯನ್ನು ಮನೆಗೆ ಕಳುಹಿಸಲು ಸಜ್ಜಾಗಿದೆ.
ಅಮೆಜಾನ್ ಕಳೆದ ಆರು ತಿಂಗಳಲ್ಲಿ ಹಂತ ಹಂತವಾಗಿ 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ಲೇ-ಆಫ್ ಮಾಡಿದೆ. ಸ್ನಾಪ್ ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದರೆ, ಬ್ಲಾಕ್ ಇಂಕ್ ತನ್ನ ಶೇ. 40 ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದೆ. ಒರಾಕಲ್ ಮತ್ತು ನೈಕ್ ಕೂಡ ಇದೇ ಹಾದಿಯಲ್ಲಿ ಸಾಗಿವೆ.
ಚಾಟ್‌ಜಿಪಿಟಿ ಮತ್ತು ಕ್ಲಾಡ್‌ನಂತಹ ಎಐ ಅಪ್ಲಿಕೇಶನ್‌ಗಳು ಕೆಲಸಗಳನ್ನು ಆಟೋಮೇಷನ್ ಮೂಲಕ ಪೂರ್ಣಗೊಳಿಸುತ್ತಿರುವುದು ಉದ್ಯೋಗಿಗಳಲ್ಲಿ ಭೀತಿ ಹುಟ್ಟಿಸಿದೆ. ಇದರಿಂದಾಗಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳ ವಿಶ್ವಾಸ ಸೂಚ್ಯಂಕವು ಕಳೆದ ವರ್ಷಕ್ಕಿಂತ ಶೇ. 6.8 ರಷ್ಟು ಕುಸಿದು ಶೇ. 47.2 ಕ್ಕೆ ತಲುಪಿದೆ.
ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಅನೇಕರು ತಾವಾಗಿಯೇ ಕೆಲಸ ಬಿಡುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಕಂಪನಿಗಳು, ಉಳಿದ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ವಿಶ್ಲೇಷಿಸುತ್ತಿವೆ. ಇದರಿಂದಾಗಿ ಕೆಲಸದಲ್ಲಿರುವವರ ಮೇಲೆಯೂ ಒತ್ತಡ ಹೆಚ್ಚಾಗಿದೆ.
ಒಂದೆಡೆ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ಕಂಪನಿಗಳು, ಮತ್ತೊಂದೆಡೆ ಎಐ ಅಭಿವೃದ್ಧಿಗಾಗಿ ಭಾರಿ ಹೂಡಿಕೆ ಮಾಡುತ್ತಿವೆ. ಆಲ್ಫಾಬೆಟ್, ಮೆಟಾ ಮತ್ತು ಅಮೆಜಾನ್ ಈ ವರ್ಷ ಎಐ ಸೇವೆಗಳಿಗಾಗಿ ಸುಮಾರು 55.94 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಿವೆ. ಇದು ಕಳೆದ ಎರಡು ವರ್ಷಗಳ ಒಟ್ಟು ಹೂಡಿಕೆಗಿಂತ ಎರಡರಷ್ಟು ಹೆಚ್ಚಾಗಿದೆ.
