ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರೆಸ್ಸೆಸ್ ಪ್ರಾರ್ಥನೆ ಹಾಡಿದ್ದು ಸರಿಯಲ್ಲ. ಅವರು ಉಪಮುಖ್ಯಮಂತ್ರಿಯಾಗಿ ಹಾಗೆ ಮಾಡಿದ್ದರೆ ಯಾವುದೇ ಅಭ್ಯಂತರವಿಲ್ಲ, ಆದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಈ ಕೃತ್ಯ ಎಸಗಿದ್ದರೆ ಕ್ಷಮೆಯಾಚಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹರಿಪ್ರಸಾದ್, ಈ ವಿಷಯವನ್ನು ವಿವಾದಕ್ಕೆ ಎಳೆದರು. “ಬಿಜೆಪಿಯವರು ಡಿಕೆಶಿಯವರ ಈ ನಡೆಯನ್ನು ಸಮರ್ಥಿಸಿಕೊಳ್ಳಬಹುದು. ಉಪಮುಖ್ಯಮಂತ್ರಿಯಾಗಿ ಸಂಘದ ಪ್ರಾರ್ಥನೆ ಮಾಡುವುದರಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ, ಏಕೆಂದರೆ ಸರ್ಕಾರವು ಒಂದು ಪಕ್ಷಕ್ಕೆ ಮಾತ್ರ ಸೇರಿದ್ದಲ್ಲ, ಅದು ಕರ್ನಾಟಕದ ಏಳು ಕೋಟಿ ಜನರ ಸರ್ಕಾರ. ಅದರಲ್ಲಿ ಆರೆಸ್ಸೆಸ್‌ನವರೂ, ಜಮಾತೆ ಇಸ್ಲಾಮಿಯವರೂ, ಎಲ್ಲರೂ ಇರುತ್ತಾರೆ” ಎಂದು ಅವರು ಹೇಳಿದರು.
ಆದರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಆರೆಸ್ಸೆಸ್ ಗೀತೆ ಹಾಡುವುದು ಸೂಕ್ತವಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು. “ಆರೆಸ್ಸೆಸ್ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ಸಂಘಟನೆ. ಅಂತಹ ಸಂಘಟನೆಯ ಗೀತೆಯನ್ನು ಹಾಡುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಈ ಗೀತೆಯನ್ನು ಹಾಡಿದ್ದರೆ, ಅವರು ಕ್ಷಮೆ ಕೇಳಲೇಬೇಕು” ಎಂದು ಹರಿಪ್ರಸಾದ್ ಖಂಡಿಸಿದ್ದಾರೆ.
ಇದೇ ವೇಳೆ, ಡಿ.ಕೆ.ಶಿವಕುಮಾರ್ ಅವರ ವಿವಿಧ ಮುಖಗಳ ಕುರಿತು ಪ್ರಸ್ತಾಪಿಸಿದ ಹರಿಪ್ರಸಾದ್, “ಅವರು ಕೃಷಿಕ, ಕ್ವಾರಿ ಓನರ್, ಶಿಕ್ಷಣ ತಜ್ಞ, ಉದ್ಯಮಿ, ಕೈಗಾರಿಕೋದ್ಯಮಿ ಎಂದು ಹೇಳಿಕೊಳ್ಳುತ್ತಾರೆ. ಇದು ಬಹುಶಃ ಅವರ ಹವ್ಯಾಸವಾಗಿರಬಹುದು. ಆದರೆ, ಸಂಘದ ಪ್ರಾರ್ಥನೆ ಮಾಡಿ ಯಾರನ್ನು ಮೆಚ್ಚಿಸಲು ಯತ್ನಿಸಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ” ಎಂದು ಪರೋಕ್ಷವಾಗಿ ಪ್ರಶ್ನಿಸಿದರು.