ಗಾಜಾ: ಇಸ್ರೇಲ್ ಸೇನೆಯು ಗಾಜಾದ ನಾಸರ್ ಆಸ್ಪತ್ರೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಪತ್ರಕರ್ತರು ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೈನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಪೈಕಿ ಒಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ದೃಢಪಡಿಸಲಾಗಿದೆ.
ಈ ದಾಳಿಯಲ್ಲಿ ರಾಯಿಟರ್ಸ್ ಛಾಯಾಗ್ರಾಹಕ ಹುಸಮ್ ಅಲ್-ಮಸ್ರಿ ಮೃತಪಟ್ಟಿದ್ದಾರೆ ಹಾಗೂ ಹಾಟೆಮ್ ಖಾಲಿದ್ ಗಾಯಗೊಂಡಿದ್ದಾರೆ. ಈ ಕುರಿತು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, “ಇಸ್ರೇಲ್ ನಾಸರ್ ಆಸ್ಪತ್ರೆಯ ಮೇಲೆ ಮೊದಲ ದಾಳಿ ನಡೆಸಿದಾಗ ಅಲ್ಲಿಗೆ ರಕ್ಷಣಾ ಕಾರ್ಯಕರ್ತರು ಮತ್ತು ಪತ್ರಕರ್ತರು ತೆರಳಿದ್ದಾರೆ. ಆ ಸಮಯದಲ್ಲಿ ಎರಡನೇ ದಾಳಿ ನಡೆದಿದೆ” ಎಂದು ತಿಳಿಸಿದ್ದಾರೆ.
ಮೃತರಾದ ಇತರ ಪತ್ರಕರ್ತರನ್ನು ಮರಿಯಮ್ ಅಬು ದಗ್ಗಾ, ಮುಹಮ್ಮದ್ ಸಲಾಮಾ, ಮತ್ತು ಮೋಝ್ ಅಬು ತಾಹಾ ಎಂದು ಗುರುತಿಸಲಾಗಿದೆ. ಅವರೊಂದಿಗೆ ಮತ್ತೊಬ್ಬ ರಕ್ಷಣಾ ಕಾರ್ಯಕರ್ತರೂ ಮೃತಪಟ್ಟಿದ್ದಾರೆ.
ಪ್ಯಾಲೆಸ್ಟೈನ್‌ನ ಪತ್ರಕರ್ತರ ಸಿಂಡಿಕೇಟ್ ಪ್ರಕಾರ, 2023ರ ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ದಾಳಿಗಳಲ್ಲಿ ಗಾಜಾದಲ್ಲಿ ಇದುವರೆಗೆ 240ಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಪತ್ರಕರ್ತರು ಮೃತಪಟ್ಟಿದ್ದಾರೆ. ಈ ಘಟನೆಗಳು ಯುದ್ಧದ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿವೆ.